ಸುಳ್ಯ:ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ
ನ.1ರಂದು ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕಿ ಭಾಗೀರಥಿ ಮುರುಳ್ಯ ‘ನಾವು ಕನ್ನಡವನ್ನೇ ಮಾತನಾಡಬೇಕು. ವ್ಯವಹರಿಸಬೇಕು. ಇದರ ಜತೆಗೆ ನಮ್ಮ ಆಚಾರ ವಿಚಾರದಲ್ಲೂ ಕನ್ನಡದ ಸೊಬಗು ಇರಬೇಕು. ಅದು ನಿರಂತರ ಬೆಳಗಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ
ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಪಥ ಸಂಚಲನ ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಮಂಜುಳಾ ಎಂ. ಸಮೃದ್ಧವಾದ ಕನ್ನಡ ನಾಡು-ನುಡಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮದಾಗಿದೆ. ನಮ್ಮ ನೆಲ, ಜಲ, ಭಾಷೆ, ಸಂಸ್ಕೃತಿಯ ಉಳಿವಿಗಾಗಿ ಕನ್ನಡಿಗರಾದ ನಾವು ಕಂಕಣ ಬದ್ಧರಾಗಬೇಕಾಗಿದೆ. ಭಾಷೆ ನಿರಂತರವಾಗಿ ಬಳಕೆಯಾಗದಿದ್ದರೆ ಅದು ನಿಧಾನವಾಗಿ ನಶಿಸುತ್ತದೆ. ಅದಕ್ಕಾಗಿ ಆದಷ್ಟು ಕನ್ನಡದಲ್ಲಿ ಮಾತನಾಡೋಣ. ಕನ್ನಡದಲ್ಲಿ ಬರೆಯೋಣ.ಕನ್ನಡದಲ್ಲಿ ವ್ಯವಹರಿಸೋಣ” ಎಂದು ಹೇಳಿದರು. ಸುಳ್ಯನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಸುಳ್ಯ ಎ.ಒ.ಎಲ್.ಇ. ಅಧ್ಯಕ್ಷ ಡಾ.ಕೆ.ವಿ.ಚಿದಾನಂದ, ಸುಳ್ಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ಪೇರಾಲು, ಸರಕಾರಿ ನೌಕರರ ಸಂಘದ ಅಧ್ಯಕ್ಷೆ ಧನಲಕ್ಷ್ಮೀ ಕುದ್ಪಾಜೆ, ಎ.ಸಿ.ಎಫ್. ಪ್ರವೀಣ್ ಕುಮಾರ್ ಶೆಟ್ಟಿ, ಸುಳ್ಯ ನಗರ ಪಂಚಾಯತ್ ಸದಸ್ಯರಾದ
ಕಿಶೋರಿ ಶೇಟ್, ಬಾಲಕೃಷ್ಣ ಭಟ್ ಕೊಡೆಂಕಿರಿ, ಡೇವಿಡ್ ಧೀರಾ ಕ್ರಾಸ್ತ, ಸುಳ್ಯ ಸ.ಪ.ಪೂ. ಕಾಲೇಜು ಮೋಹನ್ ಗೌಡ ಬೊಮ್ಮೆಟ್ಟಿ, ಉಪಪ್ರಾಂಶುಪಾಲ ಪ್ರಕಾಶ್ ಮೂಡಿತ್ತಾಯ, ಕ್ಷೇತ್ರ ಶಿಕ್ಷಣಾಧಿಕಾರಿ ಶೀತಲ್ ಯು.ಕೆ. ವೇದಿಕೆಯಲ್ಲಿದ್ದರು.
ಶಿಕ್ಷಕಿ ಮಮತಾ ಮೂಡಿತ್ತಾಯ ಡಾ. ಕುರುಂಜಿ ಎಜುಕೇಶನ್ ಟ್ರಸ್ಟ್ ನಿಧಿ ಸ್ಪರ್ಧೆಗಳ ಪಟ್ಟಿ ವಾಚಿಸಿದರು.
ಆಕರ್ಷಕ ಪಥ ಸಂಚಲನ : ಸಭಾ ಕಾರ್ಯಕ್ರಮಕ್ಕೂ ಮೊದಲು ಆಕರ್ಷಕ ಪಥ ಸಂಚಲನ ನಡೆಯಿತು. ಪೋಲೀಸ್, ಗೃಹರಕ್ಷಕದಳ, ಎನ್.ಸಿ.ಸಿ., ಸ್ಕೌಟ್ ಗೈಡ್ಸ್, ಹಾಗೂ ನಗರದ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಪಥ ಸಂಚಲನ ನಡೆಯಿತು. ತಹಶೀಲ್ದಾರ್ ಗೌರವ ವಂದನೆ ಸ್ವೀಕರಿಸಿದರು.
ವಿವಿಧ ವಿದ್ಯಾಸಂಸ್ಥೆಗಳ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ತಾಲೂಕು ಕ್ರೀಡಾಕೂಟದಲ್ಲಿ ಬಹುಮಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಕ್ರೀಡಾ ಸಮವಸ್ತ್ರ ವಿತರಣೆ ನಡೆಯಿತು. ಶಿಕ್ಷಕ ಧನಂಜಯ ಈ ಕಾರ್ಯಕ್ರಮ ನಿರ್ವಹಿಸಿದರು.
ಇ.ಒ. ರಾಜಣ್ಣ ಸ್ವಾಗತಿಸಿದರು. ಶಿಕ್ಷಕಿ ಚಂದ್ರಮತಿ ಕಾರ್ಯಕ್ರಮ ನಿರೂಪಿಸಿದರು.