ಸುಳ್ಯ: ಕೇಂದ್ರದಲ್ಲಿ ಆಡಳಿತ ನಡೆಸಿದ ನರೇಂದ್ರ ಮೋದಿ ನೇತೃತ್ವದ ಸರಕಾರದ ರೈತರ ಯಾವುದೇ ಬೇಡಿಕೆಗಳನ್ನು ಈಡೇರಿಸದೆ, ರೈತರಿಗೆ ವಿರುದ್ಧವಾಗಿ ಆಡಳಿತ ನಡೆಸುವ ಮೂಲಕ ರೈತ ವಿರೋಧಿ ನೀತಿ ಅನುಸರಿಸಿದೆ. ಆದುದರಿಂದ ಬಿಜೆಪಿ ಹೊರತಾದ ಇತರ ಪಕ್ಷಗಳನ್ಬು ಬೆಂಬಲಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಸುಳ್ಯ ಘಟಕ ಕರೆ ನೀಡಿದೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ
ರೈತ ಸಂಘದ ತಾಲೂಕು ಗೌರವಾಧ್ಯಕ್ಷ ನೂಜಾಲು ಪದ್ಮನಾಭ ಗೌಡ, ನರೇಂದ್ರ ಮೋದಿ ಸರಕಾರ 2014ರಲ್ಲಿ ಆಡಳಿತಕ್ಕೆ ಬರುವ ವೇಳೆ ವಿವಿಧ ಭರವಸೆಗಳನ್ನು ನೀಡಿದ್ದರು. ಸ್ವಾಮಿನಾಥನ್ ಆಯೋಗದ ವರದಿ ಯಥಾವತ್ ಜಾರಿ ಮಾಡುತ್ತೇವೆ ಎಂದು ಭರವಸೆ ನೀಡಿ ಅಧಿಕಾರಕ್ಕೆ ಬಂದ ಬಳಿಕ ವರದಿ ಜಾರಿ ಮಾಡಿಲ್ಲ. ಎಪಿಎಂಸಿ ಕಾಯ್ದೆಗೆ ತಿದ್ದಪಡಿ, ಭೂ ಸುಧಾರಣಾ ಕಾನೂನು ಸೇರಿದಂತೆ ವಿವಿಧ ರೀತಿಯಲ್ಲಿ ರೈತರನ್ನು ಸಂಕಷ್ಟಕ್ಕೆ ತಳ್ಳುವ ಕೆಲಸವನ್ನು ಕೇಂದ್ರದ ಬಿಜೆಪಿ ಸರಕಾರ ಮಾಡಿದೆ ಎಂದು ಆರೋಪಿಸಿದರು. ಬಿಜೆಪಿ ಹೊರತಾದ ಸರಕಾರ ಬರಬೇಕು ಇಲ್ಲವೇ ರೈತರಿಗೆ ಉಳಿಗಾಲವಿಲ್ಲ ಎಂದರು. ಯಾವ ಪಕ್ಷ ಎಂದು ನಾವು ಹೇಳುತ್ತಿಲ್ಲ. ಬಿಜೆಪಿಗೆ ವಿರುದ್ಧವಾದ ಪಕ್ಷಕ್ಕೆ ಬೆಂಬಲ ನೀಡಬೇಕು ಎಂದು ಅವರು ಹೇಳಿದರು.
ರೈತ ಸಂಘದ ಸಂಘಟನಾ ಕಾರ್ಯದರ್ಶಿ ಮಂಜುನಾಥ್ ಮಡ್ತಿಲ, ಜಿಲ್ಲಾ ಉಪಾಧ್ಯಕ್ಷ ದಿವಾಕರ ಪೈ ಮಜಿಗುಂಡಿ, ತಾಲೂಕು ಉಪಾಧ್ಯಕ್ಷ ಸುಳ್ಯಕೋಡಿ ಮಾಧವ ಗೌಡ, ಸಂಪಾಜೆ ಗ್ರಾಮ ಸಮಿತಿ ಅಧ್ಯಕ್ಷ ವಸಂತ ಪೆಲ್ತಡ್ಕ ಉಪಸ್ಥಿತರಿದ್ದರು.







