ಸುಳ್ಯ: ಸುಳ್ಯ ನಗರ ಸೇರಿದಂತೆ ತಾಲೂಕಿನ ವಿವಿಧ ಭಾಗಗಳಲ್ಲಿ ಬುಧವಾರ ಸಂಜೆ ಮಳೆಯಾಗಿದೆ. ಸುಳ್ಯ ನಗರದಲ್ಲಿ ಸಂಜೆ 5 ಗಂಟೆಯ ಬಳಿಕ ಸುಮಾರು ಅರ್ಧ ಗಂಟೆಯವರೆಗೆ ಮಳೆ ಸುರಿದಿದೆ. ಗುಡುಗಿನ ಅಬ್ಬರದೊಂದಿಗೆ ಉತ್ತಮ ಮಳೆಯಾಗಿದೆ. 17 ಮಿ.ಮಿ. ಮಳೆ ಸುರಿದಿದೆ. ಮಧ್ಯಾಹ್ನದ ಬಳಿಕ ಮೋಡ ಕವಿದ ವಾತಾವರಣ ಇದ್ದು ಸಂಜೆಯ ವೇಳೆಗೆ
ಮಳೆ ಸುರಿದಿದೆ. ಹಗಲು ನೆತ್ತಿ ಸುಡುವ ಬಿಸಿಲು ಮತ್ತು ಭಾರೀ ಸೆಕೆ ಇತ್ತು. ಜಿಲ್ಲೆಯ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ.
ನಿಡ್ಲಯಲ್ಲಿ ಗಾಳಿ, ಸಿಡಿಲಿನೊಂದಿಗೆ ಭಾರಿ ಮಳೆ ಬಂದಿದೆ. ಉಪ್ಪಿನಂಗಡಿಯಲ್ಲಿ ಗುಡುಗು ಸಿಡಿಲು ಮಿಂಚು ಸಹಿತ ಸಾಧಾರಣ ಮಳೆ, ಪುತ್ತೂರು ಮಿಂಚು, ಗುಡುಗು ಸಿಡಿಲಿನೊಂದಿಗೆ ಗಾಳಿ ಮಳೆಯಾಗಿದೆ.
ಮುರುಳ್ಯ ಗ್ರಾಮದ ಶೇರದಲ್ಲಿ ಸಾಮಾನ್ಯ ಮಳೆಯಾಗಿದೆ. ಗುಂಡ್ಯ, ನೆಟ್ಟಣ, ಶಿರಾಡಿ ಮತ್ತಿತರ ಕಡೆಗಳಲ್ಲಿ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.ಬಂಗಾಳ ಕೊಲ್ಲಿಯಲ್ಲಿ ಉಂಟಾದ ಮೋಚಾ ಚಂಡಮಾರುತ ಪರಿಣಾಮದಿಂದ ರಾಜ್ಯದ ವಿವಿಧೆಡೆ ಭಾಗಗಳಲ್ಲಿ
48 ಗಂಟೆಯಲ್ಲಿ ಬಿರುಗಾಳಿ ಸಹಿತ ಗುಡುಗು, ಮಿಂಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಸೇರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.