ಬೆಂಗಳೂರು: ಮಲೆನಾಡು, ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಏಪ್ರಿಲ್ 9ರಿಂದ 14ರ ನಡುವೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
9ರಂದು ಕೊಡಗು, ಚಿಕ್ಕಮಗಳೂರು, ಮೈಸೂರು ಜಿಲ್ಲೆಗಳಲ್ಲಿ ಹಗುರವಾಗಿ
ಮಳೆಯಾಗುವ ಸಾಧ್ಯತೆಯಿದೆ. ಅಂದು ರಾಜ್ಯದ ಉಳಿದೆಡೆ ಒಣಹವೆ ಇರಲಿದೆ ಎಂದು ಸೂಚನೆ ನೀಡಿದೆ.
ಮುಂದಿನ ದಿನಗಳಲ್ಲಿ ಕರಾವಳಿಯ ಎಲ್ಲ ಜಿಲ್ಲೆಗಳು ಹಾಗೂ ಗದಗ, ಹಾವೇರಿ, ಕಲಬುರಗಿ, ವಿಜಯಪುರ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು, ಶಿವಮೊಗ್ಗ ಜಿಲ್ಲೆಯ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆಯಿದೆ’ ಎಂದು ತಿಳಿಸಿದೆ. ಉತ್ತರ ಕನ್ನಡ, ಬಾಗಲಕೋಟೆ, ಕಲಬುರಗಿ, ರಾಯಚೂರು, ಯಾದಗಿರಿ, ಬಳ್ಳಾರಿ ಜಿಲ್ಲೆಗಳಲ್ಲಿ ಬಿಸಿಗಾಳಿ ವಾತಾವರಣ ಇರಲಿದೆ ಎಂದು ಸೂಚಿಸಿದೆ.