ಸೂರತ್: ‘ಮೋದಿ ಉಪನಾಮ’ ಟೀಕೆಗೆ ಸಂಬಂಧಿಸಿದಂತೆ 2019ರ ಮಾನನಷ್ಟ ಪ್ರಕರಣದಲ್ಲಿ ವಿಧಿಸಲಾಗಿರುವ ಶಿಕ್ಷೆಗೆ ತಡೆ ಕೋರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿಯನ್ನು ಸೂರತ್ನ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಗುರುವಾರ ತಿರಸ್ಕರಿಸಿದೆ.2019ರ ಲೋಕಸಭೆ ಚುನಾವಣಾ ಪ್ರಚಾರ ಸಭೆಯಲ್ಲಿ ರಾಹುಲ್ ಕೋಲಾರದಲ್ಲಿ ಮಾಡಿದ
ಭಾಷಣದ ವಿರುದ್ಧ ದೂರು ದಾಖಲಾಗಿತ್ತು.ಅರ್ಜಿ ವಿಚಾರಣೆ ನಡೆಸಿದ್ದ ಸೂರತ್ ನ್ಯಾಯಾಲಯವು ರಾಹುಲ್ ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿ ಮಾರ್ಚ್ 23ರಂದು ತೀರ್ಪು ನೀಡಿತ್ತು. ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಿದ್ದ ನ್ಯಾಯಾಲಯ, ತೀರ್ಪನ್ನು 30 ದಿನಗಳ ಕಾಲ ಅಮಾನತಿನಲ್ಲಿಟ್ಟಿದೆ. ಜೈಲು ಶಿಕ್ಷೆ ಪ್ರಕಟಗೊಂಡ ಮಾರನೇ ದಿನವೇ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿತ್ತು.
ಸೂರತ್ನ ಕೆಳ ಹಂತದ ನ್ಯಾಯಾಲಯ ವಿಧಿಸಿದ ಶಿಕ್ಷೆಗೆ ತಡೆ ಕೋರಿ ರಾಹುಲ್ ಗಾಂಧಿ ಅವರು ಏಪ್ರಿಲ್ 3ರಂದು ಸೆಷನ್ಸ್ ನ್ಯಾಯಾಲಯಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಆರ್ ಪಿ ಮೊಗೇರ ತಿರಸ್ಕರಿಸಿದ್ದಾರೆ. ಶಿಕ್ಷೆಗೆ ತಡೆಯಾಜ್ಞೆ ಸಿಕ್ಕಿದ್ದಿದ್ದರೆ, ರಾಹುಲ್ ಗಾಂಧಿಯವರ ಸಂಸತ್ ಸದಸ್ಯತ್ವ ಮರುಸ್ಥಾಪನೆಯಾಗಲು ಅನುವಾಗುತ್ತಿತ್ತು.