ಪುತ್ತೂರು: ಪುತ್ತೂರು ತಾಲೂಕಿನ ನೆಹರು ನಗರದಲ್ಲಿ ಯುವಕನೋರ್ವನನ್ನು ಕೊಚ್ಚಿ ಕೊಲೆ ಮಾಡಿದ ಘಟನೆ ತಡರಾತ್ರಿ ನಡೆದಿದೆ.ಹುಲಿವೇಷ ತಂಡ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ (24) ಕೊಲೆಯಾದ ವ್ಯಕ್ತಿ. ಘಟನೆಗೆ ಸಂಬಂಧಿಸಿ
ಇಬ್ಬರು ಆರೋಪಿಗಳು ಪೊಲೀಸ್ ಠಾಣೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.ದ್ವಿಚಕ್ರ ವಾಹನಗಳ ನಡುವೆ ನಡೆದ ಅಪಘಾತ ವಿಚಾರದಲ್ಲಿ ನಡೆದ ಮಾತುಕತೆ ವಿಕೋಪಕ್ಕೆ ತಿರುಗಿ ಕೊಲೆ ನಡೆದಿದೆ ಎಂದು ಹೇಳಲಾಗಿದೆ. ಹುಲಿಕುಣಿತದಲ್ಲಿ ಕಲ್ಲೇಗ ಟೈಗರ್ಸ್ ತಂಡದ ನೇತೃತ್ವವನ್ನು ಅಕ್ಷಯ್ ವಹಿಸಿಕೊಂಡಿದ್ದರು. ಇವರ ಹುಲಿ ಕುಣಿತ ತಂಡ ಜನಪ್ರಿಯವಾಗಿತ್ತು.
ಘಟನಾ ಸ್ಥಳಕ್ಕೆ ಡಿವೈಎಸ್ಪಿ ಸಹಿತ ಪೊಲೀಸರು, ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಭೇಟಿ ನೀಡಿ ಮಹಜರು ನಡೆಸಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.









