ಚಂಡೀಗಢ: ಇಂಡಿಯನ್ ಪ್ರೀಮಿಯರ್ ಲೀಗ್ 2024ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ನಾಲ್ಕು ವಿಕೆಟ್ ಅಂತರದ ಜಯ ಗಳಿಸಿದೆ. ಡೆಲ್ಲಿ ಒಡ್ಡಿದ 175 ರನ್ಗಳ ಗುರಿ ಬೆನ್ನಟ್ಟಿದ ಪಂಜಾಬ್ 19.2 ಓವರ್ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.ಬಿರುಸಿನ ಅರ್ಧಶತಕ ಗಳಿಸಿದ ಸ್ಯಾಮ್ ಕರನ್ (63) ಪಂಜಾಬ್ ಗೆಲುವನ್ನು ಸುಲಭಗೊಳಿಸಿದರು. 47 ಎಸೆತಗಳಲ್ಲಿ
63 ರನ್ (6 ಬೌಂಡರಿ, 1 ಸಿಕ್ಸರ್) ಗಳಿಸಿದರು. ಸ್ಫೋಟಕ ಬ್ಯಾಟರ್ ಲಿವಿಂಗ್ಸ್ಟೋಗ್ ಕೇವಲ 21 ಎಸೆತಗಳಲ್ಲಿ ಅಜೇಯ 38 ರನ್ ಗಳಿಸಿ (2 ಬೌಂಡರಿ, 3 ಸಿಕ್ಸರ್) ತಂಡವನ್ನು ಗೆಲುವಿನ ದಡ ಸೇರಿಸಿದರು.ನಾಯಕ ಶಿಖರ್ ಧವನ್ (22) ಹಾಗೂ ಪ್ರಭಸಿಮ್ರಾನ್ ಸಿಂಗ್ (26) ಉಪಯುಕ್ತ ಕಾಣಿಕೆ ನೀಡಿದರು.ಡೆಲ್ಲಿ ಪರ ಕುಲದೀಪ್ ಯಾದವ್ ಎರಡು ವಿಕೆಟ್ ಗಳಿಸಿದರು.ಈ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ, ನಿಗದಿತ 20 ಓವರ್ಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿತು.ಡೇವಿಡ್ ವಾರ್ನರ್ (29) ಹಾಗೂ ಮಿಷಲ್ ಮಾರ್ಷ್ (20) ಶಾಯ್ ಹೋಪ್ (33),ರಿಷಭ್ ಪಂತ್ (18)
ಅಕ್ಷರ್ ಪಟೇಲ್ (21) ರನ್ ಗಳಿಸಿದರು. ರಿಕಿ ಭುಯಿ 3, ಟ್ರಿಸ್ಟನ್ ಸ್ಟಬ್ಸ್ 5 ರನ್ ಗಳಿಸಿ ಔಟ್ ಆದರು.ಕೊನೆಯ ಹಂತದಲ್ಲಿ ‘ಇಂಪ್ಯಾಕ್ಟ್ ಪ್ಲೇಯರ್’ ಆಗಿ ಕಣಕ್ಕಿಳಿದ ಅಭಿಷೇಕ್ ಪೊರೆಲ್ ಕೇವಲ 10 ಎಸೆತಗಳಲ್ಲಿ ಅಜೇಯ 32 ರನ್ ಗಳಿಸಿ ಡೆಲ್ಲಿ ತಂಡವು ಸ್ಪರ್ಧಾತ್ಮಕ ಮೊತ್ತ ಗಳಿಸಲು ನೆರವಾದರು. ಅವರ ಇನಿಂಗ್ಸ್ನಲ್ಲಿ ನಾಲ್ಕು ಬೌಂಡರಿ ಹಾಗೂ ಎರಡು ಸಿಕ್ಸರ್ ಸೇರಿದ್ದವು.ಪಂಜಾಬ್ ಪರ ಅರ್ಷದೀಪ್ ಸಿಂಗ್ ಹಾಗೂ ಹರ್ಷಲ್ ಪಟೇಲ್ ತಲಾ ಎರಡು ವಿಕೆಟ್ ಗಳಿಸಿದರು.









