ಪಂಚಕುಲ:ಪ್ರೊ ಕಬಡ್ಡಿ ಲೀಗ್ 10ನೇ ಆವೃತ್ತಿಯಲ್ಲಿ ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನ ಪಡೆದ ಪುಣೇರಿ ಪಲ್ಟನ್ ಮತ್ತು ಜೈಪುರ ಪಿಂಕ್ಪ್ಯಾಂಥರ್ಸ್ ತಂಡಗಳು ಸೆಮಿಫೈನಲ್ಸ್ಗೆ ನೇರ ಅರ್ಹತೆ ಗಳಿಸಿದೆ. ದಬಾಂಗ್ ದಿಲ್ಲಿ, ಗುಜರಾತ್ ಜಯಂಟ್ಸ್ , ಹರಿಯಾಣ ಸ್ಟೀಲಸ್ ಮತ್ತು ಪಾಟ್ನಾ ಪೈರೇಟ್ಸ್ ತಂಡಗಳು ಪ್ಲೇಆಫ್ ಹಂತದಲ್ಲಿ ಹೋರಾಟ ನಡೆಸಲಿದೆ. ಪ್ಲೇಆಫ್ನಲ್ಲಿ ಗೆಲ್ಲುವ ಎರಡು ತಂಡಗಳು ಸೆಮಿಫೈನಲ್ ಆಡಲು
ಅರ್ಹತೆ ಪಡೆಯಲಿದೆ. ಪ್ಲೇ ಆಫ್ನಲ್ಲಿ ದಬಾಂಗ್ ಡೆಲ್ಲಿ ಮತ್ತು ಪಾಟ್ನಾ ಪೈರೇಟ್ಸ್ ಮಧ್ಯೆ ನಡೆಯುವ ಪಂದ್ಯದ ವಿಜೇತರನ್ನು ಸೆಮಿಫೈನಲ್ನಲ್ಲಿ ಪುಣೇರಿ ಪಲ್ಟಾನ್ ತಂಡ ಎದುರಿಸಲಿದೆ. ಎರಡನೇ ಪ್ಲೇಆಫ್ನ ಗುಜರಾತ್ ಜೈಂಟ್ಸ್ ಮತ್ತು ಹರ್ಯಾನ ಸ್ಟೀಲರ್ಸ್ ಮಧ್ಯೆ ವಿಜೇತರನ್ನು ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ ಸೆಮಿಯಲ್ಲಿ ಎದುರಿಸಲಿದೆ. ಪ್ಲೇ ಆಫ್ ಪಂದ್ಯಗಳು ಫೆ.26 ರಂದು, ಸೆಮಿಫೈನಲ್ ಪಂದ್ಯಗಳು ಫೆ.28ರಂದುಮತ್ತು ಫೈನಲ್ ಮಾ.1ರಂದು ನಡೆಯಲಿದೆ.
ಈ ಮಧ್ಯೆ ಹರಿಯಾಣ ಸ್ಟೀಲರ್ಸ್ ತಂಡದ ವಿರುದ್ಧ ಗೆಲುವು ಸಾಧಿಸಿದ ಬೆಂಗಳೂರು ಬುಲ್ಸ್ 10ನೇ ಆವೃತ್ತಿಯಲ್ಲಿ ಗೆಲುವಿನೊಂದಿಗೆ ಅಭಿಯಾನ ಮುಗಿಸಿದೆ. ಈ ಫಲಿತಾಂಶದೊಂದಿಗೆ ಒಟ್ಟಾರೆ 53 ಅಂಕ ಗಳಿಸಿದ ಬೆಂಗಳೂರು ಬುಲ್ಸ್ 12 ತಂಡಗಳ ಅಂಕಪಟ್ಟಿಯಲ್ಲಿ 8ನೇ ಸ್ಥಾನ ಪಡೆಯಿತು. ಅತ್ತ ಹರಿಯಾಣ ಐದನೇ ಸ್ಥಾನದೊಂದಿಗೆ ಪ್ಲೇಆಫ್ ಹಂತದಲ್ಲಿ ಸೆಣಸಾಟ ನಡೆಸಲು ವೇದಿಕೆ ಸಿದ್ದಪಡಿಸಿಕೊಂಡಿದೆ. ಬುಲ್ಸ್ 53-39 ಅಂಕಗಳಿಂದ ಸ್ಟೀಲರ್ಸ್ ವಿರುದ್ಧ ಜಯ ಗಳಿಸಿತು.