ಸುಳ್ಯ: ಸುಳ್ಯಕ್ಕೆ ಭಾನುವಾರ ದಿನಪೂರ್ತಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು ವಿದ್ಯುತ್ ಇಲ್ಲದೆ ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣ ಆಗಿದೆ. ಇಂದು ಬೆಳಿಗ್ಗೆ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಜಾಲ್ಸೂರು ಸಮೀಪ 33 ಕೆವಿ ಲೈನ್ ಮೇಲೆ ಮರ ಬಿದ್ದು ಸುಳ್ಯಕ್ಕೆ ವಿದ್ಯುತ್ ಸರಬರಾಜು ಕಡಿತಗೊಂಡಿತ್ತು. ಬೆಳಿಗ್ಗೆ 8 ಗಂಟೆಗೂ
ಮುನ್ನ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಯಾವುದೇ ಸೂಚನೆ ಇಲ್ಲದೆ ವಿದ್ಯುತ್ ಕಡಿತಗೊಂಡ ಕಾರಣ ಟ್ಯಾಂಕಿಗೆ ಕುಡಿಯುವ ನೀರು ಶೇಖರಣೆ ಕೂಡ ಮಾಡುವುದು ಸೇರಿದಂತೆ ಯಾವುದೇ ಸಿದ್ಧತೆ ಮಾಡಲು ಸಾಧ್ಯವಾಗಿರಲಿಲ್ಲ. ಇದರಿಂದ ಕುಡಿಯು ನೀರು ಇಲ್ಲದೆ ಜನರು ಪರದಾಡುವ ಸ್ಥಿತಿ ಉಂಟಾಗಿದೆ. ಮರ ತೆರವು ಮಾಡಿ ಮೈನ್ ಲೈನ್ ಸರಿಪಡಿಸಲಾಗಿ ಚಾರ್ಜ್ ಮಾಡಲಾಗಿದೆ. ಸುಳ್ಯದಲ್ಲಿತೂ ಕೆಲವು ಕಡೆ ವಿದ್ಯುತ್ ಚಾರ್ಜ್ ಮಾಡಲಾಗಿತ್ತು. ಆದರೆ ಹಳೆಗೇಟು, ಜಯನಗರ ಸೇರಿದಂತೆ ವಿವಿಧ ಭಾಗಗಳಲ್ಲಿ ವಿದ್ಯುತ್ ಸಂಪರ್ಕ ಸರಿಪಡಿಸಲಾಗಿಲ್ಲ. ಮೈನ್ ಲೈನ್ ಸರಿ ಆಗಿದ್ದರೂ ಸ್ಥಳೀಯ ಕೆಲವು ಲೈನ್ಗಳಲ್ಲಿ ಸಮಸ್ಯೆ ಇರುವ ಕಾರಣ ಎಲ್ಲೆಡೆ ಚಾರ್ಜ್ ಮಾಡಲು ಆಗಿಲ್ಲ ಎಂದು ಮೆಸ್ಕಾಂ ಇಂಜಿನಿಯರ್ಗಳು ತಿಳಿಸಿದ್ದಾರೆ. ಒಟ್ಟಿನಲ್ಲಿ ಸುಳ್ಯ ತಾಲೂಕಿನ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಕರೆಂಟ್ ಇಲ್ಲದೆ ಜನರು ಪರದಾಡುವ ಸ್ಥಿತಿ ನಿರ್ಮಾಣ ಆಗಿದೆ.