ಸುಳ್ಯ:ಬೇಸಿಗೆಯ ಬಿರು ಬಿಸಿಲಿನ ತಾಪ, 40 ಡಿಗ್ರಿ ಸೆಲ್ಸಿಯಸ್ಗೆ ಏರುವ ಉಷ್ಣಾಂಶ. ಎಲ್ಲೆಡೆ ಬತ್ತಿ ಬರಡಾಗುವ ಭೂಮಿ. ಆವಿಯಾಗಿವ ಜೀವ ಜಲ. ಈ ಸಂದರ್ಭದಲ್ಲಿ ಎಲ್ಲೆಡೆ ನೀರಿಗೆ ಹಾಹಾಕಾರ ಉಂಟಾಗುತ್ತದೆ. ನೀರಿನ ಬರ ಕೇವಲ ಮನುಷ್ಯರಿಗೆ ಮಾತ್ರವಲ್ಲದೆ, ವನ್ಯ ಜೀವಿಗಳಿಗೂ ತಟ್ಟುತ್ತದೆ. ಇದರಿಂದ ನೀರು ಮತ್ತು ಆಹಾರವನ್ನು ಅರಸಿ ಕಾಡು ಪ್ರಾಣಿಗಳು ನಾಡಿಗೆ ಬರುವುದೂ ಇದೆ. ಬೇಸಿಗೆಯ ಕಾವು ಹೆಚ್ಚಾಗುತ್ತಿದ್ದಂತೆ, ನೀರಿನ ಮೂಲಗಳು ಬತ್ತಿಹೋಗುತ್ತವೆ. ಅರಣ್ಯ ಪ್ರದೇಶದಲ್ಲಿ ನೀರು ಬತ್ತಿ

ನೀರು ಸಿಗದೆ ಪ್ರಾಣಿ, ಪಕ್ಷಿಗಳು ಸಮಸ್ಯೆಗೆ ಸಿಲುಕೊಕೊಳ್ಳುತ್ತವೆ. ಇದನ್ನು ತಪ್ಪಿಸಿ ಬೇಸಿಗೆಯಲ್ಲಿ ವನ್ಯ ಜೀವಿಗಳಿಗೆ ನೀರನ್ನು ಒದಗಿಸಲು ಯೋಜನೆ ರೂಪಿಸಿರುವ ಅರಣ್ಯ ಇಲಾಖೆ ಅರಣ್ಯದಲ್ಲಿ ಕೆರೆಗಳನ್ನು ನಿರ್ಮಿಸುತಿದೆ. ಸುಳ್ಯ ವಲಯ ಅರಣ್ಯ ಇಲಾಖೆಯ ವತಿಯಿಂದ ಅರಣ್ಯ ಪ್ರದೇಶದಲ್ಲಿ ಅಲ್ಲಲ್ಲಿ ಕೆರೆಗಳನ್ನು ನಿರ್ಮಿಸಲಾಗುತ್ತಿದೆ. ಅರಣ್ಯದಲ್ಲಿ ಕೆಲವೆಡೆ ಈ ಹಿಂದೆ ಇದ್ದ ಕೆರೆಗಳನ್ನು ಪತ್ತೆ ಹಚ್ಚಿ ಅದರಲ್ಲಿ ಶೇಖರಣೆಯಾಗಿರುವ ಮಣ್ಣು, ಹೂಳನ್ನು ತೆಗೆದು ನವೀಕರಣ ಮಾಡಿ ನೀರು ಸಂಗ್ರಹಿಸಲಾಗುವುದು. ಅಲ್ಲದೆ, ನೀರಿನ ಲಭ್ಯತೆಗೆ ಅನುಗುಣವಾಗಿ ವಿವಿಧ ಸ್ಥಳಗಳಲ್ಲಿ ಹೊಸ ಕೆರೆಗಳನ್ನು ನಿರ್ಮಿಸಲಾಗುತ್ತದೆ. ಸುಳ್ಯ ವಲಯದ ಅರಂತೋಡು ಗ್ರಾಮದ ನೆಕ್ಕರೆ ಅರಣ್ಯ ಪ್ರದೇಶದಲ್ಲಿ ಮತ್ತು ಸಂಪಾಜೆಯ ನೆಲ್ಲಿಕುಮೇರಿಯಲ್ಲಿ ಹೊಸ ಕೆರೆಗಳನ್ನು ನಿರ್ಮಿಸಲಾಗಿದೆ. ಸಂಪಾಜೆ ಗ್ರಾಮದ ಬೈಲಿನಲ್ಲಿ ಹಳೆಯ ಕೆರೆಯನ್ನು ನವೀಕರಿಸಲಾಗಿದೆ. ಹೊಸ ಕೆರೆಯಲ್ಲಿ ಮತ್ತು ನವೀಕರಿಸಲಾದ ಕೆರೆಯಲ್ಲಿ ನೀರು ತುಂಬಿ ನಳ ನಳಿಸುತ್ತಿದೆ.

ಈ ಬಾರಿ ಆಲೆಟ್ಟಿ, ಮಂಡೆಕೋಲು ಸೇರಿದಂತೆ ವಿವಿಧೆಡೆ ಅರಣ್ಯದಲ್ಲಿ ಹೊಸ ಕೆರೆಗಳನ್ನು ನಿರ್ಮಿಸಲಾಗುವುದು ಎಂದು ಸುಳ್ಯ ವಲಯ ಅರಣ್ಯಾಧಿಕಾರಿ ಎನ್.ಮಂಜುನಾಥ್ ತಿಳಿಸಿದ್ದಾರೆ.
ಬೇಸಿಗೆಯಲ್ಲಿ ಕಾಡಿನಲ್ಲಿ ನೀರು ಮತ್ತು ಆಹಾರದ ಕೊರತೆಯಿಂದ ಕಾಡು ಪ್ರಾಣಿಗಳು ತೀವ್ರ ಸಮಸ್ಯೆಯನ್ನು ಎದುರಿಸುತ್ತವೆ. ಇದರಿಂದ ಆನೆ, ಕಾಡು ಕೋಣ, ಜಿಂಕೆ, ಕಡವೆ ಸೇರಿದಂತೆ ನಾನಾ ಕಾಡು ಪ್ರಾಣಿಗಳು ನೀರು, ಆಹಾರ ಅರಸಿ ನಾಡಿನತ್ತ ಬರುತ್ತಿವೆ. ವಿವಿಧ ಕಡೆ ಕೆರೆಗಳನ್ನು ನಿರ್ಮಿಸಿ ಪ್ರಾಣಿಗಳಿಗೆ ನೀರು ಒದಗಿಸಿದರೆ, ವನ್ಯ ಜೀವಿಗಳು ನಾಡಿಗೆ ಬರುವುದನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು ಎಂಬುದು ಅರಣ್ಯ ಅಧಿಕಾರಿಗಳ ಅಭಿಪ್ರಾಯ.

‘ಬೇಸಿಗೆಯಲ್ಲಿ ಎಲ್ಲಡೆ ನೀರಿಗೆ ಆಹಾಕಾರ ಉಂಟಾಗುವಂತೆ. ವನ್ಯ ಜೀವಿಗಳಿಗೂ ನೀರಿನ ಬರ ಎದುರಾಗುತ್ತದೆ. ಇದನ್ನು ತಪ್ಪಿಸಿ ಪ್ರಾಣಿಗಳಿಗೆ ನೀರು ಒದಗಿಸಲು ಅರಣ್ಯ ಇಲಾಖೆಯ ವತಿಯಿಂದ ಅರಣ್ಯದಲ್ಲಿ ಅಲ್ಲಲ್ಲಿ ಕೆರೆಗಳನ್ನು ನಿರ್ಮಾಣ ಮಾಡಲಾಗುತ್ತದೆ. ಕೆಲವು ಹಳೆಯ ಕೆರೆಗಳನ್ನು ನವೀಕರಣ ಮಾಡಲಾಗುತ್ತಿದೆ. ಈ ಮೂಲಕ ಅರಣ್ಯದಲ್ಲಿ ನೀರಿನ ಲಭ್ಯತೆ ಹೆಚ್ಚಿಸುವ ಪ್ರಯತ್ನ ನಡೆಸಲಾಗುತಿದೆ.
ಎನ್.ಮಂಜುನಾಥ್
ವಲಯ ಅರಣ್ಯಾಧಿಕಾರಿ
ಸುಳ್ಯ.

‘ಕಾಡಿನಲ್ಲಿ ಕೆರೆಗಳನ್ನು ನಿರ್ಮಿಸಿ ಪ್ರಾಣಿಗಳಿಗೆ ನೀರು ಒದಗಿಸುವುದು ಉತ್ತಮ ಪ್ರಯತ್ನ. ಅದೇ ರೀತಿ ಅರಣ್ಯದಲ್ಲಿ ಹಣ್ಣಿನ ಮತ್ತು ಪ್ರಾಣಿಗಳಿಗೆ ಆಹಾರ ಒದಗಿಸುವ ಗಿಡಗಳನ್ನು ಹೆಚ್ಚು ಬೆಳೆಸಿ ಪ್ರಾಣಿಗಳಿಗೆ ಆಹಾರ ಲಭಿಸುವಂತೆ ಮಾಡಬೇಕು. ಆಗ ಪ್ರಾಣಿಗಳು ನಾಡಿಗೆ ಬರುವುದು ಕಡಿಮೆಯಾಗಬಹುದು”
-ಜಿ.ಕೆ.ಹಮೀದ್
ಮಾಜಿ ಅಧ್ಯಕ್ಷರು.
ಸಂಪಾಜೆ ಗ್ರಾ.ಪಂ.





