ಸುಳ್ಯ:ಕಡು ಬೇಸಿಗೆಯಲ್ಲಿ ಜೀವ ನದಿ ಪಯಸ್ವಿನಿ ಬತ್ತಿ ಬರಡಾಗಿದೆ. ಮಳೆಯಿಲ್ಲದೆ, ನೀರಿಲ್ಲದೆ ನದಿ ಹರಿವು ನಿಲ್ಲಿಸಿದೆ. ಇದೀಗ ಕೆಲವೊಂದು ಹೊಂಡಗಳಲ್ಲಿ ಮಾತ್ರ ಅಲ್ಪ ಸ್ವಲ್ಪ ನೀರು ಉಳಿದಿದೆ. ಈ ನೀರಿನಲ್ಲಿ ಆಶ್ರಯ ಪಡೆದಿರುವ ಜಲ ಚರಗಳಿಗೂ ಈಗ ಕಂಠಕ ಎದುರಾಗಿದೆ. ಗಡಿ ಪ್ರದೇಶವಾದ ಮುರೂರು ಭಾಗದಲ್ಲಿ ನದಿ ಬತ್ತಿ ಹೋಗಿದೆ. ಹೊಂಡಗಳಲ್ಲಿ ಮಾತ್ರ ಅಲ್ಪ ಸ್ವಲ್ಪ ನೀರಿದೆ. ಈ ಹೊಂಡಗಳಲ್ಲಿ ಇರುವ ಮೀನುಗಳ
ಮಾರಣ ಹೋಮ ನಡೆದಿದೆ. ಅಲ್ಲಲ್ಲಿ ಮೀನುಗಳು ಸತ್ತು ತೇಲುತ್ತಿರುವುದು ಕಂಡು ಬಂದಿದೆ. ಅಲ್ಪ ಸ್ವಲ್ಪ ನೀರು ಇರುವ ಹೊಂಡದಲ್ಲಿ ವಿಷ ಬೆರೆಸಿ ಮೀನು ಹಿಡಿಯುವುದರಿಂದ ಈ ರೀತಿ ಮೀನುಗಳು ಸಾಯಲು ಕಾರಣವಾಗುತಿದೆ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ನದಿ ಹರಿವು ನಿಲ್ಲಿಸಿದ ಕಾರಣ ಹೊಂಡದಲ್ಲಿರುವ ನೀರಿನಲ್ಲಿ ಮೀನುಗಳು ಬದುಕುತ್ತವೆ. ಈ ಹೊಂಡಗಳಿಗೆ ವಿಷಕಾರಕ ವಸ್ತುಗಳು ಬಳಸಿ ಮೀನು ಹಿಡಿಯುತ್ತಾರೆ ಇದರಿಂದ ಅಲ್ಲಿರುವ ಮೀನುಗಳು ಸಂಪೂರ್ಣ
ಸಾಯುತ್ತವೆ. ಇದೀಗ ಅಲ್ಲಲ್ಲಿ ಮೀನುಗಳು ಸತ್ತು ತೇಲುತ್ತಿರುವುದು ಕಂಡು ಬಂದಿದೆ. ನೀರು ಕಲುಷಿತವಾಗುವುದರ ಜೊತೆಗೆ ಮೀನುಗಳು ಸತ್ತು ತೇಲುವುದರಿಂದ ಪರಿಸರವಿಡೀ ದುರ್ವಾಸನೆ ಬೀರುತಿದೆ ಎನ್ನುತ್ತಾರೆ ಸ್ಥಳೀಯರು.
ಇದೀಗ ಕೆರೆ, ಬಾವಿಗಳು ಬತ್ತಿರುವುದರಿಂದ ಎಲ್ಲೆಡೆ ನೀರಿಗೆ ಹಾಹಾಕಾರ ಉಂಟಾಗಿದೆ. ಈ ಸಂದರ್ಭದಲ್ಲಿ ನದಿಯಲ್ಲಿರುವ ನೀರನ್ನು ಸಮೀಪದ ಜನರು ದಿನ ನಿತ್ಯದ ಅಗತ್ಯತೆಗಳಿಗೆ ಬಳಕೆ ಮಾಡುತ್ತಾರೆ.ಇದೀಗ ನೀರು ಕಲುಷಿತಗೊಂಡರೆ ಜನರಿಗೂ ಸಮಸ್ಯೆ ಆಗುತಿದೆ. ಆದುದರಿಂದ ನದಿಯ
ನೀರನ್ನು ಕಲುಷಿತಗೊಳಿಸುವವರನ್ನು, ಮೀನು ಹಿಡಿಯುವವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಇರುವ ಸ್ವಲ್ಪ ನೀರು ಕೂಡ ಕೆಂಪು ಬಣ್ಣಕ್ಕೆ ತಿರುಗಿದೆ.
ಮುರೂರು, ಪಂಜಿಕಲ್ಲು, ದೇವರಗುಂಡ ಭಾಗದಲ್ಲಿ ಪಯಸ್ವಿನಿ ನದಿ ನೀರು ಹರಿವು ನಿಲ್ಲಿಸಿದೆ. ಹೊಂಡಗಳಲ್ಲಿ ಮಾತ್ರ ಸ್ವಲ್ಪ ನೀರಿದೆ.
ಈ ಭಾಗದಲ್ಲಿ ಸ್ಥಳೀಯರು ನದಿಯ ನೀರನ್ನೇ ಬಳಸುತ್ತಾರೆ. ಇದೀಗ ಕೆಲವು ದಿನಗಳಿಂದ ಇಲ್ಲಿ ಮೀನುಗಳು ಸಾಯುತ್ತಿರುವುದು ಕಂಡು ಬಂದಿದೆ. ವಿಷ ಬೆರೆಸಿ ಮೀನು ಹಿಡಿಯುವುದರಿಂದ ಈ ರೀತಿ ಮೀನುಗಳು ಸಾಯುವ ಶಂಕೆ ಇದೆ ಎನ್ನುತ್ತಾರೆ ಸ್ಥಳೀಯರಾದ ಚಂದ್ರಜಿತ್ ಮಾವಂಜಿ.