*ಗಂಗಾಧರ ಕಲ್ಲಪಳ್ಳಿ.
ಸುಳ್ಯ:ಅಡಿಕೆ,ತೆಂಗು,ರಬ್ಬರ್ ಹೀಗೆ ಒಂದೊಂದು ಕೃಷಿಯನ್ನು ಮಾತ್ರ ನಂಬಿ ಬದುಕು ಕಟ್ಟಿಕೊಳ್ಳುವುದು ಇಂದಿನ ಕಾಲದಲ್ಲಿ ಕೃಷಿಕರಿಗೆ ಕಷ್ಟವೇ ಸರಿ. ಒಂದೇ ಬೆಳೆ ಬೆಳೆಯುವ ಕಾಲ ಇದಲ್ಲ. ಮಿಶ್ರ ಬೆಳೆಯ ಯುಗ. ಮುಖ್ಯ ಬೆಳೆಯ ಜೊತೆಗೆ ತಮ್ಮ ತೋಟದಲ್ಲಿ ಸ್ಥಳ ಇರುವಲ್ಲೆಲ್ಲಾ ಏನಾದರೂ ಉಪ ಬೆಳೆಗಳನ್ನು ಬೆಳೆಸುವುದನ್ನು ರೈತರು ರೂಢಿಸಿ ಕೊಳ್ಳುತ್ತಿದ್ದಾರೆ. ಹಲವು ಮಂದಿ ಕೃಷಿಕರು ಹಲವು ರೀತಿಯ ಮಿಶ್ರ ಬೆಳೆಗಳನ್ನು ಬೆಳೆಸಲು ಆಸಕ್ತಿ ವಹಿಸಿದ್ದಾರೆ.ಕಡಿಮೆ ಖರ್ಚಿನಲ್ಲಿ, ಕಡಿಮೆ ನಿರ್ವಹಣೆಯಲ್ಲಿ ಹೆಚ್ಚು ಶ್ರಮ ಪಡದೆ ಹೆಚ್ಚು ಆದಾಯ ಗಳಿಸಬಹುದಾದ
ಕೃಷಿಯೆಂದರೆ ಪಪ್ಪಾಯ ಕೃಷಿ. ಕಳೆದ ಎರಡು ವರ್ಷಗಳಿಂದ ಪಪ್ಪಾಯಿ ಕೃಷಿ ಮಾಡುವ ಮೂಲಕ ಒಂದಷ್ಟು ಆದಾಯ ಗಳಿಸಿದವರು ಪ್ರಗತಿಪರ, ಕ್ರಿಯಾಶೀಲ ಕೃಷಿಕ ಸುಳ್ಯ ತಾಲೂಕಿನ ಐವರ್ನಾಡಿನ ನವೀನ್ ಚಾತುಬಾಯಿ. ಕಳೆದ ವರ್ಷ ನವೀನ್ ಉಳ್ಳಾಳದ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದಿಂದ 200 ತೈವಾನ್ ರೆಡ್ ಲೇಡಿ ಪಪ್ಪಾಯ ಗಿಡಗಳನ್ನು ತಂದು ಕೃಷಿ ಮಾಡಿದ್ದಾರೆ. ಅದಕ್ಕಿಂತ ಮೊದಲು ಸುಳ್ಯ ತೋಟಗಾರಿಕಾ ಇಲಾಖೆಯಿಂದ 100 ಗಿಡಗಳನ್ನು ತಂದು ನೆಟ್ಟು ಪ್ರಾಯೋಗಿಕವಾಗಿ ಕೃಷಿ ಆರಂಭಿಸಿದ್ದರು. ಇದರಲ್ಲಿ ರೆಡ್ ಲೇಡಿ ಪಪ್ಪಾಯ ಉತ್ತಮ ಆದಾಯ ತಂದು ಕೊಡುತಿದೆ.
ನವೀನ್ ಚಾತುಬಾಯಿ, ನಮಿತಾ ದಂಪತಿಗಳು
ಅಡಿಕೆ ಗಿಡಗಳ ಮಧ್ಯೆ ಇದನ್ನು ಬೆಳೆಯಲಾಗಿದೆ.4 ಅಡಿಕೆ ಗಿಡಗಳ ಮಧ್ಯೆ ಒಂದು ಪಪ್ಪಾಯ ಗಿಡದಂತೆ ನೆಟ್ಟರು.
ಕುರಿ ಗೊಬ್ಬರ, ಕಾಂಪೋಸ್ಟ್ ಸೇರಿಸಿ ಗಿಡ ನಾಟಿ ಮಾಡಿದರು. ಪಪ್ಪಾಯಿ ಗಿಡಗಳಿಗೆ ನೀರು ಅಗತ್ಯ ಇದೆ. ಅಡಿಕೆ ಗಿಡಗಳಿಗೆ ನೀರುಣಿಸುವ ಸಂದರ್ಭದಲ್ಲಿ ಇದಕ್ಕೂ ಯಥೇಚ್ಛ ನೀರು ದೊರೆಯುತ್ತದೆ. ಇದರಿಂದ ಗಿಡಗಳು ಪಸಂದಾಗಿ ಬೆಳೆದವು.
ನಿರಂತರ ಆದಾಯ:
ಚೆನ್ನಾಗಿ ಬೆಳೆದ ಪಪ್ಪಾಯ ಗಿಡ ಮೂರು ತಿಂಗಳಲ್ಲಿ ಬೆಳೆದು ಹೂ ಬಿಡಲು ಆರಂಭಿಸುತ್ತದೆ. ಮತ್ತೆ ನಿರಂತರ ಒಂದೂವರೆ ವರ್ಷಗಳ ತನಕ ಪಪ್ಪಾಯಿ ಫಸಲು ನೀಡುತ್ತದೆ. ಗಿಡ ತುಂಬಾ ಫಸಲು ಬರುವ ಪಪ್ಪಾಯಿ ಹಣ್ಣು ಕೈ ತುಂಬಾ ಆದಾಯ ತಂದು ಕೊಡುತ್ತದೆ ಎನ್ನುತ್ತಾರೆ ನವೀನ್.
ಉತ್ತಮ ಮಾರುಕಟ್ಟೆ:
ರೆಡ್ ಲೇಡಿ ಪ್ರಭೇದದ ಪಪ್ಪಾಯಿ ದೊಡ್ಡ ಗಾತ್ರದಲ್ಲಿ ಬೆಳೆಯುತ್ತದೆ. ಹಣ್ಣು ಕೂಡ ಕಲರ್ಪುಲ್ ಆಗಿದ್ದು ಉತ್ತಮ ಸಿಹಿ ಮತ್ತು ರುಚಿಕರವಾಗಿ ಇರುತ್ತದೆ. ಆದುದರಿಂದಲೇ ಪಪ್ಪಾಯಿ ಹಣ್ಣಿಗೆ ಬೇಡಿಕೆಯೂ ತುಂಬಾ ಇದೆ. ಸರಾಸರಿ ಕೆಜಿಗೆ 20-25 ರೂ ದರ ಸಿಗುತ್ತದೆ. ಕೆಲವೊಮ್ಮೆ ಕೆಜಿಗೆ 30 ರೂ ಸಿಕ್ಕಿದ್ದೂ ಇದೆ. ಬೇಸಿಗೆಯಲ್ಲಿ ಪ್ರೂಟ್ ಸಲಾಡ್ ಮತ್ತಿತರ ಐಸ್ಕ್ರೀಂ ಉತ್ಪನ್ನಗಳಿಗೆ ಬಳಸಲು ಪಪ್ಪಾಯಿ ಹಣ್ಣಿಗೆ ಭಾರೀ ಡಿಮಾಂಡ್ ಇದೆ. ರೆಡ್ ಲೇಡಿ ಪಪ್ಪಾಯಿ ಹಣ್ಣು 10-15 ದಿನಗಳ ಕಾಲ ಕೆಟ್ಟು ಹೋಗದೇ ಉಳಿಯುತ್ತದೆ ಎಂಬುದು ಸಹಕಾರಿ. ಈ ವರ್ಷ ತನಗೆ ಪಪ್ಪಾಯ ಕೃಷಿಯಿಂದ ಸುಮಾರು 50 ಸಾವಿರಕ್ಕಿಂತಲೂ ಹೆಚ್ಚು ಆದಾಯ ಬಂದಿದೆ ಎನ್ನುತ್ತಾರೆ ನವೀನ್ ಚಾತುಬಾಯಿ.ಸುಳ್ಯ,ಪುತ್ತೂರು, ಮಂಗಳೂರು ಎಲ್ಲೆಡೆ ಪಪ್ಪಾಯಿಗೆ
ಮಾರುಕಟ್ಟೆ ಇದೆ. ನವೀನ್ ಹಾಗೂ ಪತ್ನಿ ನಮಿತಾ ಪಪ್ಪಾಯಿ ಕೃಷಿಯ ನಿರ್ವಣೆ ಮಾಡುತ್ತಾರೆ. ಪಪ್ಪಾಯಿ ಕೃಷಿಗೆ ವಿಶೇಷ ನಿರ್ವಹಣೆ ಏನೂ ಅಗತ್ಯ ಇಲ್ಲ. ಕಡಿಮೆ ಖರ್ಚು, ಕಡಿಮೆ ಶ್ರಮದಲ್ಲಿ ಕೃಷಿಕರಿಗೆ ಉತ್ತಮ ಆದಾಯ ಪಡೆಯಬಹುದು ಎನ್ನುತ್ತಾರೆ ನವೀನ್ ಹಾಗು ನಮಿತಾ ದಂಪತಿಗಳು.
ಮಳೆಯಿಂದ ಗಿಡಗಳು ನಾಶ:
ಈ ವರ್ಷ ಮಳೆಯ ಪ್ರಮಾಣ ಹೆಚ್ಚಾದ ಪರಿಣಾಮ ಹಲವು ಕೃಷಿಗಳಿಗೆ ಸಮಸ್ಯೆ ಉಂಟಾಗಿದೆ. ಪಪ್ಪಾಯಿ ಬೆಳೆಗೂ ಅಧಿಕ ಮಳೆ ಮಾರಕವಾಗಿ ಪರಿಣಮಿಸಿದೆ. ಜುಲೈ, ಆಗಸ್ಟ್ ನಲ್ಲಿ ಸುರಿದ ಧಾರಾಕಾರ ಮಳೆಗೆ ಪಪ್ಪಾಯಿ ಮರಗಳು ನಾಶವಾಗಿವೆ. ಈ ಬಾರಿ ವಿವಿಧೆಡೆ ಪಪ್ಪಾಯಿ ಮರಗಳು ನಾಶವಾಗಿ ಬೆಳೆ ನಷ್ಟವಾಗಿದೆ ಎನ್ನುತ್ತಾರೆ ಕೃಷಿಕರು. ನವೀನ್ ಚಾತುಬಾಯಿ ಅವರ ತೋಟದಲ್ಲಿ ಮಳೆಗೆ ಸುಮಾರು
100ರಷ್ಟು ಮರಗಳು ಕರಗಿ, ಒಣಗಿ ಹೋಗಿದೆ. ಮಳೆಗೆ ಮರ ನಾಶವಾದರೂ ಪಪ್ಪಾಯ ನಷ್ಟದ ಬೆಳೆ ಅಲ್ಲಾ. ಉತ್ಪಾದಿಸಿದ ಎಲ್ಲಾ ಪಪ್ಪಾಯಿ ಮಾರಾಟವಾಗಿದೆ. ಉತ್ತಮ ಆದಾಯವೂ ಬಂದಿದೆ. ತನ್ನ ತೋಟದಲ್ಲಿ ಇನ್ನಷ್ಟು ಜಾಗದಲ್ಲಿ ಪಪ್ಪಾಯ ಬೆಳೆ ವಿಸ್ತರಿಸುವ ಯೋಚನೆ ಇದೆ. ಪಪ್ಪಾಯ
ಸಸಿಗಳನ್ನು ನೆಡಲು ಇದು ಸೂಕ್ತ ಸಮಯ ಎನ್ನುತ್ತಾರೆ ನವೀನ್ ಚಾತುಬಾಯಿ.