ಕೊಲಂಬೊ:ಆರಂಭ ಆಟಗಾರ ಸಾಹಿಬ್ಝಾದಾ ಫರ್ಹಾನ್ ಅವರ ಆಕರ್ಷಕ ಅಜೇಯ ಶತಕದ ನೆರವಿನಿಂದ ಪಾಕಿಸ್ತಾನ ತಂಡ 102 ರನ್ಗಳ ಅಂತರದಿಂದ ನಮಿಬಿಯಾ ತಂಡವನ್ನು ಸೋಲಿಸಿ ಟಿ20 ವಿಶ್ವಕಪ್ ಸೂಪರ್ ಎಂಟರ ಹಂತಕ್ಕೆ ಮುನ್ನಡೆಯಿತು.
ಫರ್ಹಾನ್ ಕೇವಲ 58 ಎಸೆತಗಳಲ್ಲಿ
100 ರನ್ ಬಾರಿಸಿದರು. ಇದರಲ್ಲಿ ನಾಲ್ಕು ಸಿಕ್ಸರ್, ಹತ್ತು ಬೌಂಡರಿಗಳಿದ್ದವು. ಪಾಕಿಸ್ತಾನ 20 ಓವರುಗಳಲ್ಲಿ 3 ವಿಕೆಟ್ಗೆ 199 ರನ್ಗಳ ಉತ್ತಮ ಮೊತ್ತ ಗಳಿಸಿತು. ನಮೀಬಿಯಾ ತಂಡವನ್ನು 17.3 ಓವರುಗಳಲ್ಲಿ 97 ರನ್ಗಳಿಗೆ ಅಲ್ ಔಟ್ ಆಯಿತು.
ಈ ಗೆಲುವಿನಿಂದ ಪಾಕಿಸ್ತಾನ ಎ ಗುಂಪಿನಲ್ಲಿ 4 ಪಂದ್ಯಗಳಿಂದ ಆರು ಪಾಯಿಂಟ್ಸ್ ಸಂಗ್ರಹಿಸಿ ಗುಂಪಿನಿಂದ ಎರಡನೇ ತಂಡವಾಗಿ ಸೂಪರ್ ಎಂಟಕ್ಕೆ ಮುನ್ನಡೆದರು.
ಇನ್ನೊಂದು ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ, ಟಿ20 ವಿಶ್ವಕಪ್ನ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಯುಎಇ ತಂಡದ ವಿರುದ್ಧ ಆರು ವಿಕೆಟ್ಗಳ ನಿರಾಯಾಸ ಗೆಲುವು ಸಾಧಿಸಿತು. ಡಿ ಗುಂಪಿನಲ್ಲಿ ಆಡಿದ ನಾಲ್ಕೂ ಪಂದ್ಯಗಳನ್ನು ಗೆದ್ದ ಹರಿಣಗಳ ಪಡೆ ಅಜೇಯ ಸಾಧನೆ ದಾಖಲಿಸಿತು.
ಯುಎಇ 20 ಓವರುಗಳಲ್ಲಿ 6 ವಿಕೆಟ್ಗೆ 122 ರನ್ ಗಳಿಸಿತು. ದಕ್ಷಿಣ ಆಫ್ರಿಕಾ 13.1 ಓವರುಗಳಲ್ಲಿ 4 ವಿಕೆಟ್ಗೆ 123 ರನ್ ಬಾರಿಸಿ ಗೆಲುವಿನ ನಗೆ ಬೀರಿತು.
ಭಾರತ ವಿರುದ್ಧ ಭಾನುವಾರ ನಡೆಯಲಿರುವ ಸೂಪರ್ ಎಂಟರ ಮಹತ್ವದ ಪಂದ್ಯಕ್ಕೆ ಸಜ್ಜಾಗಲು ದಕ್ಷಿಣ ಆಫ್ರಿಕಾಕ್ಕೆ ಈ ಪಂದ್ಯ ನೆರವಾಯಿತು.






