ಬೆಂಗಳೂರು: ವಿಶ್ವಕಪ್ನ ನಿರ್ಣಾಯಕ ಪಂದ್ಯದಲ್ಲಿ ಡಿಎಲ್ಎಸ್ ನಿಯಮದ ಪ್ರಕಾರ ಪಾಕಿಸ್ತಾನ ಕ್ರಿಕೆಟ್ ತಂಡವು ನ್ಯೂಝಿಲ್ಯಾಂಡ್ ತಂಡವನ್ನು 21 ರನ್ ಅಂತರದಿಂದ ಪರಾಭವಗೊಳಿಸಿದೆ. ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ 50 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 401 ರನ್ ಗಳಿಸಿತು. 402 ರನ್ ಚೇಸ್ ಮಾಡಿದ ಪಾಕಿಸ್ತಾನ ಭರ್ಜರಿ ಆರಂಭ ಪಡೆಯಿತು. 21 ಓವರ್ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ
162 ರನ್ ಗಳಿಸಿದ್ದ ಸಂದರ್ಭ ಮಳೆ ಆಗಮಿಸಿತು. ಪಂದ್ಯ ಪುನರಾರಂಭಗೊಂಡಾಗ ಪಾಕ್ಗೆ 41 ಓವರ್ಗಳಲ್ಲಿ 342 ರನ್ ಪರಿಷ್ಕೃತ ಗುರಿ ನೀಡಲಾಯಿತು. ಮತ್ತೊಮ್ಮೆ ಮಳೆ ಅಡ್ಡಿಪಡಿಸಿದಾಗ ಪಾಕಿಸ್ತಾನ ತಂಡ 25.3 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿತ್ತು. ಡಿಎಲ್ಎಸ್ ನಿಯಮದ ಪ್ರಕಾರ 21 ರನ್ ಮುನ್ನಡೆಯಲ್ಲಿತ್ತು. ಈ ಹಿನ್ನಲೆಯಲ್ಲಿ ಪಾಕಿಸ್ತಾನವನ್ನು ವಿಜಯಿ ಎಂದು ಘೋಷಿಸಲಾಯಿತು. ಪಾಕ್ ಪರ ಆರಂಭಿಕ ಬ್ಯಾಟರ್ ಫಖರ್ ಝಮಾನ್ 81 ಎಸೆತಗಫಲ್ಲಿ 11 ಭರ್ಜರಿ ಸಿಕ್ಸರ್ ಹಾಗೂ 8 ಬೌಂಡರಿ ನೆರವಿನಿಂದ
ಔಟಾಗದೆ 126 ರನ್ ಗಳಿಸಿದರು. ನಾಯಕ ಬಾಬರ್ ಆಝಮ್ 63 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ ಔಟಾಗದೆ 66 ರನ್ ಗಳಿಸಿದರು.
ಮೊದಲು ಬ್ಯಾಟ್ ಮಾಡಿದ ಕಿವೀಸ್ ಪರ ರಚಿನ್ ರವೀಂದ್ರ ಸಿಡಿಸಿದ ಅಮೋಘ ಶತಕದ ನೆರವಿನಿಂದ ನ್ಯೂಜಿಲೆಂಡ್ 50 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 401 ರನ್ಗಳ ಬೃಹತ್ ಮೊತ್ತ ಪೇರಿಸಿದೆ.ರಚಿನ್ ರವೀಂದ್ರ 108, ಕೇನ್ ವಿಲಿಯಮ್ಸನ್ 95, ಗ್ಲೆನ್ ಫಿಲಿಪ್ಸ್ 41, ಮಾರ್ಕ್ ಚಾಪ್ಮನ್ 39, ಡೆವಾನ್ ಕಾನ್ವೆ 35, ಡೇರಿಲ್ ಮಿಚೆಲ್ 29, ಮಿಚೆಲ್ ಸ್ಯಾಂಟ್ನರ್ ಔಟಾಗದೆ 26 ರನ್ ಗಳಿಸಿದ್ದರು. ಈ ಗೆಲುವಿನೊಂದಿಗೆ 8 ಪಂದ್ಯಗಳಲ್ಲಿ 8 ಪಡೆದ ಪಾಕಿಸ್ತಾನ ಸೆಮಿ ಫೈನಲ್ ಆಸೆ ಜೀವಂತವಾಗಿರಿಸಿದೆ. ಪಾಕಿಸ್ತಾನ ಹಾಗೂ ನ್ಯೂಝಿಲೆಂಡ್ 8 ಪಂದ್ಯಗಳಿಂದ ತಲಾ 8 ಅಂಕ ಗಳಿಸಿದೆ.





