ಪಲೆಕೆಲೆ: ಶನಿವಾರ ಇಲ್ಲಿ ಸುರಿದ ಮಳೆಯಿಂದ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳ ಮಧ್ಯೆ ನಡೆಯಬೇಕಾಗಿದ್ದ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 8 ಪಂದ್ಯ ರದ್ದುಗೊಂಡಿದೆ. ಎರಡು ತಂಡಗಳಿಗೂ ತಲಾ ಒಂದು ಅಂಕ ನೀಡಲಾಗಿದೆ. ಇದು ಈ ತಂಡಗಳ ಸೆಮಿಫೈನಲ್ ಹಾದಿಯನ್ನು ಜಟಿಲಗೊಳಿಸಿತು. 7 ಗಂಟೆಯ ಸುಮಾರಿಗೆ
ಮಳೆ ಕಡಿಮೆಯಾಗಿದ್ದ ಕಾರಣ ಟಾಸ್ ಮಾಡಲಾಯಿತು. ಅದರಲ್ಲಿ ಗೆದ್ದ ಪಾಕಿಸ್ತಾನ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಹನ್ನೊಂದರ ಬಳಗವನ್ನು ಪ್ರಕಟಿಸಿತ್ತು.
ಕಿವೀಸ್ ಮತ್ತು ಪಾಕ್ ತಂಡಗಳಿಗೆ ಗುಂಪಿನಲ್ಲಿ ತಲಾ ಎರಡು ಪಂದ್ಯಗಳನ್ನು ಆಡಬೇಕಿದ್ದು, ಅದರಲ್ಲಿ ಯಾವುದಾದರೂ ಹಣಾಹಣಿಯು ಮಳೆಯಿಂದಾಗಿ ರದ್ದಾದರೆ ತಂಡದ ನಿರ್ಗಮನ ಖಚಿತ. ಯಾಕೆಂದರೆ ಶ್ರೀಲಂಕಾದ ಪ್ರಸ್ತುತ ಹವಾಮಾನ ಮುನ್ಸೂಚನೆಯ ವರದಿಗಳ ಪ್ರಕಾರ ಮುಂಬರುವ ದಿನಗಳಲ್ಲಿ ಮಳೆ ಸುರಿಯುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಪಾಕ್ ತಂಡವು 24ರಂದು ಇಂಗ್ಲೆಂಡ್ ಮತ್ತು ಕಿವೀಸ್ ಬಳಗವು 25ರಂದು ಕೊಲಂಬೊದಲ್ಲಿ ಆತಿಥೇಯ ಶ್ರೀಲಂಕಾ ತಂಡವನ್ನು ಎದುರಿಸಲಿವೆ.
ಒಂದೊಮ್ಮೆ ಪಾಕ್ ಅಥವಾ ನ್ಯೂಜಿಲೆಂಡ್ ತಂಡಗಳು ತಮ್ಮ ಪಾಲಿನಲ್ಲಿ ಉಳಿದಿರುವ ಇನ್ನೆರಡು ಪಂದ್ಯಗಳಲ್ಲಿ ಒಂದರಲ್ಲಿ ಸೋತರೂ ಸೆಮಿಫೈನಲ್ ಅವಕಾಶ ಕೈತಪ್ಪುವ ಸಾಧ್ಯತೆ ಇದೆ. ಅದರಿಂದಾಗಿ ಉಳಿದಿರುವ ಎರಡೂ ಪಂದ್ಯಗಳಲ್ಲಿ ಗೆಲ್ಲಬೇಕಾದ ಒತ್ತಡವೂ ಇದೆ.
ಇದೇ ಗುಂಪಿನಲ್ಲಿರುವ ಇಂಗ್ಲೆಂಡ್ ಮತ್ತು ಶ್ರೀಲಂಕಾ ತಂಡಗಳು ತಲಾ ಮೂರು ಪಂದ್ಯಗಳನ್ನು ಆಡಬೇಕಿದೆ. ಈ ಪೈಕಿ ಎರಡೂ ತಂಡಗಳ ನಡುವಣ ಮೊದಲ ಪಂದ್ಯವು ಭಾನುವಾರ ನಡೆಯಲಿದೆ.






