ನವದೆಹಲಿ:ಇಂದು ಸಂಜೆ 7.15ಕ್ಕೆ ನಡೆಯುವ ಸಮಾರಂಭದಲ್ಲಿ ನರೇಂದ್ರ ಮೋದಿ ಅವರು 3ನೇ ಭಾರಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಎನ್ಡಿಎ ಮೈತ್ರಿ ಸರ್ಕಾರದ ಸಂಪುಟಕ್ಕೆ ಸುಮಾರು 30 ಮಂದಿ ಸೇರ್ಪಡೆಯಾಗಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಮೊದಲ ಹಂತದಲ್ಲಿ ಮಿತ್ರ ಪಕ್ಷಗಳ 12ರಿಂದ 15 ಸದಸ್ಯರು ಸಂಪುಟಕ್ಕೆ ಸೇರುವ ಸಂಭವ ಇದೆ. ಸಂಭಾವ್ಯ ಸಚಿವರ ಪಟ್ಟಿಯನ್ನು
ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಬೆಳಿಗ್ಗೆ ರಾಷ್ಟ್ರಪತಿ ಭವನಕ್ಕೆ ಕಳುಹಿಸಲಿದ್ದಾರೆ.
ತೆಲುಗು ದೇಶಂ ಪಕ್ಷವು 16 ಹಾಗೂ ಜೆಡಿಯು 12 ಸ್ಥಾನಗಳಲ್ಲಿ ಗೆದ್ದು ಕಿಂಗ್ ಮೇಕರ್ಗಳಾಗಿ ಹೊರ ಹೊಮ್ಮಿವೆ. ಟಿಡಿಪಿ ಹಾಗೂ ಜೆಡಿಯುಗೆ ತಲಾ ಒಂದು ಸಂಪುಟ ದರ್ಜೆ ಸೇರಿದಂತೆ ತಲಾ ಮೂರು ಖಾತೆಗಳನ್ನು ಪಡೆಯುವ ಸಾಧ್ಯತೆ ಇದೆ. ಶಿವಸೇನೆಯು (ಏಕನಾಥ ಶಿಂದೆ ಬಣ) ಏಳು ಸ್ಥಾನಗಳಲ್ಲಿ ಜಯ ಸಾಧಿಸಿದೆ. ಈ ಪಕ್ಷಕ್ಕೆ ಒಂದು ಸಂಪುಟ ದರ್ಜೆ ಹಾಗೂ ಒಂದು ರಾಜ್ಯ ಖಾತೆ ನೀಡುವ ಸಾಧ್ಯತೆ ಇದೆ. ಚಿರಾಗ್ ಪಾಸ್ವಾನ್ ನೇತೃತ್ವದ ಎಲ್ಜೆಪಿ ಸಹ ಎರಡು ಖಾತೆಗಳನ್ನು ಪಡೆಯಲಿದೆ. ಜೆಡಿಎಸ್, ಅಪ್ನಾ ದಳ, ಆರ್ಎಲ್ಡಿ, ಎಚ್ಎಎಂ, ಜನಸೇನಾ ಪಕ್ಷಗಳಿಗೆ ತಲಾ ಒಂದು ಖಾತೆ ಸಿಗಲಿದೆ.
ಗೃಹ, ಹಣಕಾಸು, ವಿದೇಶಾಂಗ ವ್ಯವಹಾರ, ರಕ್ಷಣೆ, ರಸ್ತೆ ಹಾಗೂ ಹೆದ್ದಾರಿ ವ್ಯವಹಾರ, ರೈಲ್ವೆ, ಮಾಹಿತಿ ತಂತ್ರಜ್ಞಾನ, ಶಿಕ್ಷಣ ಸೇರಿ ಪ್ರಮುಖ ಖಾತೆಗಳನ್ನು ಬಿಜೆಪಿಯೇ ಉಳಿಸಿಕೊಳ್ಳಲಿದೆ. ರೈಲ್ವೆ ಖಾತೆ ಮೇಲೆ ಜೆಡಿಯು ಹಾಗೂ ಮಾಹಿತಿ ತಂತ್ರಜ್ಞಾನ ಖಾತೆ ಮೇಲೆ ಟಿಡಿಪಿ ಕಣ್ಣಿಟ್ಟಿದೆ. ಗ್ರಾಮೀಣಾಭಿವೃದ್ಧಿ ಖಾತೆಯನ್ನು ಜೆಡಿಯುವಿಗೆ ನೀಡುವ ಸಂಭವ ಇದೆ. ಲೋಕಸಭಾಧ್ಯಕ್ಷ ಸ್ಥಾನವನ್ನು ತಮ್ಮ ಪಕ್ಷಕ್ಕೆ ನೀಡುವಂತೆ ಟಿಡಿಪಿ ಮುಖ್ಯಸ್ಥ ಎನ್.ಚಂದ್ರಬಾಬು ನಾಯ್ಡು ಒತ್ತಡ ಹೇರಿದ್ದಾರೆ. ಇದಕ್ಕೆ ಬಿಜೆಪಿ ವರಿಷ್ಠರು ಒಪ್ಪಿಲ್ಲ. ಕೃಷಿ ಖಾತೆ ಮೇಲೆ ಎಚ್.ಡಿ.ಕುಮಾರಸ್ವಾಮಿ ಒಲವು ತೋರಿದ್ದಾರೆ.
ಇಂದು ಅಧಿಕಾರ ವಹಿಸಲಿರುವ ಸಂಭವನೀಯ ಸಚಿವರು:
ಬಿಜೆಪಿಯಿಂದ ಅಮಿತ್ ಶಾ,ರಾಜನಾಥ್ ಸಿಂಗ್, ನಿತಿನ್ ಗಡ್ಕರಿ,ನಿರ್ಮಲಾ ಸೀತಾರಾಮನ್,ಪಿಯೂಷ್ ಗೋಯಲ್ ,ಶಿವರಾಜ್ ಸಿಂಗ್ ಚೌಹಾಣ್ ಅಥವಾ ಜೆ.ಪಿ.ನಡ್ಡಾ,ಜ್ಯೋತಿರಾದಿತ್ಯ ಸಿಂಧಿಯಾ,ಧರ್ಮೇಂದ್ರ ಪ್ರಧಾನ್ ,ಗಜೇಂದ್ರ ಸಿಂಗ್ ಶೆಖಾವತ್ ,ಜಿತಿನ್ ಪ್ರಸಾದ್
ಡಿ.ಪುರಂದೇಶ್ವರಿ,ಕಿರಣ್ ರಿಜಿಜು,ಸುರೇಶ್ ಗೋಪಿ,ಸಂಜಯ್ ಜೈಸ್ವಾಲ್,ಜಿ.ಕಿಶನ್ ರೆಡ್ಡಿ ಅಥವಾ ಬಂಡಿ ಸಂಜಯ್
ಶಂತನು ಠಾಕೂರ್, ಬಸವರಾಜ ಬೊಮ್ಮಾಯಿ,ಪ್ರಲ್ಹಾದ ಜೋಶಿ, ಗೋವಿಂದ ಕಾರಜೋಳ
ಎನ್ಡಿಎ ಒಕ್ಕೂಟದ
ಎಚ್.ಡಿ.ಕುಮಾರಸ್ವಾಮಿ (ಜೆಡಿಎಸ್),ಅನುಪ್ರಿಯಾ ಪಟೇಲ್ (ಅಪ್ನಾದಳ),ಜಯಂತ್ ಚೌಧರಿ (ಆರ್ಎಲ್ಡಿ), ಚಿರಾಗ್ ಪಾಸ್ವಾನ್ (ಎಲ್ಜೆಪಿ)ಲಲನ್ ಸಿಂಗ್ (ಜೆಡಿಯು)ಸಂಜಯ್ ಕುಮಾರ್ ಝಾ (ಜೆಡಿಯು),ರಾಮನಾಥ್ ಠಾಕೂರ್ (ಜೆಡಿಯು)
ಜಿತನ್ ರಾಮ್ ಮಾಂಝಿ (ಎಚ್ಎಎಂ),ಕೆ.ರಾಮ್ ಮೋಹನ್ ನಾಯ್ಡು (ಟಿಡಿಪಿ) ಸಚಿವರಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.