ಸುಳ್ಯ: ಹೊಳೆ ನೀರಿಗೆ ಬಿದ್ದು ಮೃತಪಟ್ಟ ಜಿ.ಪಂ. ಮಾಜಿ ಸದಸ್ಯ, ಬಿಜೆಪಿ ಮುಖಂಡ ನವೀನ್ ಕುಮಾರ್ ರೈ ಮೇನಾಲ ಅವರ ಮೃತದೇಹದ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ಅವರ ಮೇನಾಲದ ಮನೆಯಲ್ಲಿ ಸಂಜೆ 6 ಗಂಟೆಯ ಬಳಿಕ ಅವಕಾಶ ನೀಡಲಾಗುವುದು ಎಂದು ಕುಟುಂಬದ ಮೂಲಗಳು ಹಾಗೂ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ತಿಳಿಸಿದ್ದಾರೆ. ಆಲೆಟ್ಟಿ ಗ್ರಾಮದ ತಯದಿಯಡ್ಕದಲ್ಲಿ
ಪಯಸ್ವಿನಿ ನದಿಗೆ ಅಳವಡಿಸಲಾದ ತನ್ನ ತೋಟಕ್ಕೆ ನೀರು ಸರಬರಾಜು
ಮಾಡುವ ಪಂಪ್ನ ಪುಟ್ ವಾಲ್ ರಿಪೇರಿಗೆಂದು ಇಳಿದಿದ್ದ ಸಂದರ್ಭ ಅವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು. ಮೃತದೇಹವನ್ನು ಸುಳ್ಯ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು ಪೋಸ್ಟ್ ಮಾರ್ಟಂ ಬಳಿಕ ಮೃತದೇಹವವನ್ನು ಮೇನಾಲದ ಮನೆಗೆ ಕೊಂಡೊಯ್ದು ಸಾರ್ವಜನಿಕ ಅಂತಿಮ ದರ್ಶನದ ಬಳಿಕ ಸಂಸ್ಕಾರ ನಡೆಯಲಿದೆ.
ಹಲವು ಮಂದಿ ಸುಳ್ಯ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಮೃತದೇಹದ ಅಂತಿಮ ದರ್ಶನ ಪಡೆದರು. ಮಾಜಿ ಸಚಿವ ಎಸ್.ಅಂಗಾರ, ಶಾಸಕಿ ಭಾಗೀರಥಿ ಮುರುಳ್ಯ,ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಸೇರಿದಂತೆ ಹಲವು ಮಂದಿ ಅಂತಿಮ ದರ್ಶನ ಪಡೆದರು.
ನಾಡಿಗೇ ನಾಡೇ ಕಂಬನಿ ಮಿಡಿಯುತಿದೆ:
ಜಿಲ್ಲಾ ಪಂಚಾಯತ್ ಸದಸ್ಯರಾಗಿ, ಜಿಲ್ಲಾ ಪಂಚಾಯತ್ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದರು.
ಜಿ.ಪಂ.ಸದಸ್ಯರಾಗಿದ್ದ ಸಂದರ್ಭ ತನ್ನ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದ ನವೀನ್ ಕುಮಾರ್ ರೈ ಮೇನಾಲ ಬಿಜೆಪಿಯ ಪ್ರಭಾವೀ ಮುಖಂಡರಾಗಿದ್ದರು. ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ, ಶಕ್ತಿ ಕೇಂದ್ರದ ಪ್ರಮುಖ್, ಬಿಜೆಪಿ ಮಂಡಲ ಸಮಿತಿ ಸದಸ್ಯರಾಗಿದ್ದರು. ಅಜ್ಜಾವರ ಗ್ರಾ.ಪಂ.ಸದಸ್ಯರಾಗಿದ್ದರು. ರಾಜಕೀಯ, ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ಸಕ್ರೀಯರಾಗಿದ್ದ ಅವರು ಜನಾನುರಾಗಿಯಾಗಿದ್ದರು. ಅವರ ಅಕಾಲಿಕ ಅಗಲುವಿಕೆಯಿಂದ ಸುಳ್ಯದ ಜನತೆ ದಿಗ್ಭ್ರಮೆಗೊಳಗಾಗಿದ್ದಾರೆ. ನಾಡಿಗೆ ನಾಡೇ ಕಂಬನಿ ಮಿಡಿಯುತಿದೆ.