ಸುಳ್ಯ:ಮಹಾತ್ಮಾಗಾಂಧಿ ಉದ್ಯೋಗ ಖಾತರಿ ಯೋಜನೆಗೆ ತಿದ್ದುಪಡಿ ತಂದು ಹೆಸರು ಬದಲಾವಣೆ, ಯೋಜನೆ ಬದಲಾವಣೆ
ಮಾಡಿರುವುದನ್ನು ವಿರೋಧಿಸಿ ಕಾಂಗ್ರೆಸ್ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ (ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ) ನರೇಗಾ ಬಚವೋ ಸಂಗ್ರಾಮ್ ಪಾದಯಾತ್ರೆ ಎರಡು
ದಿನ ಪೂರ್ತಿಗೊಳಿಸಿದೆ. ಫೆ.9ರಂದು ಸುಳ್ಯದಲ್ಲಿ ಚಾಲನೆ ದೊರೆತಿದ್ದ ಪಾದಯಾತ್ರೆ ಕುಂಬ್ರದಲ್ಲಿ ಸಮಾಪನಗೊಂಡಿತ್ತು. ಎರಡನೇ ದಿನ ಫೆ.10ರಂದು ಕುಂಬ್ರದಿಂದ ಆರಂಭಗೊಂಡ ಪಾದಯಾತ್ರೆ ಪುತ್ತೂರು, ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಯಾಣಿಸಿ ಮಾಣಿಯಲ್ಲಿ ಸಾರ್ವಜನಿಕ ಸಮಾವೇಶದೊಂದಿಗೆ ಸಮಾಪನಗೊಂಡಿತು.ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಸುಳ್ಯ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ, ಕಾವು ಹೇಮನಾಥ ಶೆಟ್ಟಿ, ಎಂ.ಎಸ್.ಮಹಮ್ಮದ್,ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ ಸೇರಿ ವಿವಿಧ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು, ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.
ಫೆ.9ರಂದು ಸುಳ್ಯದಿಂದ ಆರಂಭಗೊಂಡ ಪಾದಯಾತ್ರೆಯ ಮೂರನೇ ದಿನ ಮಾಣಿಯಿಂದ ಆರಂಭಗೊಂಡು ಸಂಜೆ ಮಂಗಳೂರು ಅಡ್ಯಾರಿನಲ್ಲಿ ಸಮಾರೋಪಗೊಳ್ಳಲಿದೆ. 12ರಂದು ಅಡ್ಯಾರ್ನಿಂದ ಆರಂಭವಾಗಿ ಮೂಲ್ಕಿಯಲ್ಲಿ ಸಾರ್ವಜನಿಕ ಸಮ್ಮೇಳನದೊಂದಿಗೆ ಸಮಾಪನಗೊಳ್ಳಲಿದೆ.







