ಕಂದಡ್ಕ:ಅಮರಮುಡ್ನೂರು ಗ್ರಾಮದ ಕಂದಡ್ಕ , ಮುಂಡಕಜೆ ಮತ್ತು ದುಗ್ಗಲಡ್ಕದ ನೀರಬಿದಿರೆ, ಕುಂಬೆತ್ತಿ ಬನ ಭಾಗದಲ್ಲಿ ಕಳೆದ ಐದು ದಿನಗಳಿಂದ ವಿದ್ಯುತ್ ಕಡಿತಗೊಂಡಿದ್ದು ಸುಮಾರು 150 ಕ್ಕೂ ಅಧಿಕ ಕುಟುಂಬಗಳು ಕತ್ತಲಲ್ಲಿ ದಿನ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಶನಿವಾರ ಸಂಜೆ ಸುರಿದ ಗಾಳಿ ಮಳೆಗೆ ಸುಳ್ಯ ತಾಲೂಕಿನ
ದುಗ್ಗಲಡ್ಕ, ಕೊಯಿಕುಳಿ, ಕಂದಡ್ಕ, ಮುಂಡಕಜೆ ಭಾಗದಲ್ಲಿ ವಿದ್ಯುತ್ ಕಂಬಗಳು ತುಂಡಾಗಿ ವಿದ್ಯುತ್ ಸಂಪರ್ಕ ಅಸ್ತವ್ಯಸ್ತವಾಗಿತ್ತು.
ದುಗ್ಗಲಡ್ಕ, ಕಂದಡ್ಕವರೆಗೆ ವಿದ್ಯುತ್ ಸಂಪರ್ಕ ಸರಿಯಾಗಿದ್ದು, ದುಗ್ಗಲಡ್ಕ ಪೇಟೆ ಮತ್ತು ಕೆಲವು ಭಾಗಗಳಲ್ಲಿ ಸಂಪರ್ಕ ನೀಡಲಾಗಿದೆ.ಕಂದಡ್ಕದಿಂದ ಮುಂಡಕಜೆ ಮತ್ತು ದುಗ್ಗಲಡ್ಕ ಭಾಗದ ನೀರಬಿದಿರೆ ಮತ್ತು ಕುಂಬೆತ್ತಿಬನ ಭಾಗದಲ್ಲಿ ಗಾಳಿ ಮಳೆಗೆ ವಿದ್ಯುತ್ ಕಡಿತಗೊಂಡು ಐದು ದಿನ ಕಳೆದರೂ ಹಾನಿಯಾದ ವಿದ್ಯುತ್ ಕಂಬಗಳನ್ನು ಸರಿಪಡಿಸಲಾಗಿಲ್ಲ. ವಿದ್ಯುತ್ ಕಂಬಗಳನ್ನು ಸರಬರಾಜು ಕೂಡ ಮಾಡದೇ ಇರುವುದು ಪರಿಸ್ಥಿತಿ ಶೋಚನೀಯವಾಗಿಸಿದೆ.
ಈ ಪ್ರದೇಶದ ಸುಮಾರು 150 ಕ್ಕೂ ಹೆಚ್ಚು ಕುಟುಂಬಗಳಿಗೆ ವಿದ್ಯುತ್ ಇಲ್ಲದೆ ಸಮಸ್ಯೆ ಉಂಟಾಗಿದೆ. ಐದು ದಿನಗಳಾದರೂ ಸರಿಪಡಿಸಿಲ್ಲ, ಜನರು ಕತ್ತಲಲ್ಲಿ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಕರೆಂಟ್ ಇಲ್ಲದೆ ಕುಡಿಯುವ ನೀರಿಗೂ ಸಮಸ್ಯೆ ಎದುರಾಗಿದೆ ನಿರಂತರ ಐದು ದಿನಗಳಿಂದ ಈ ಭಾಗದಲ್ಲಿ ವಿದ್ಯುತ್ ಕಡಿತ ಉಂಟಾದ ಕಾರಣ ಜನರು ರೋಸಿ ಹೋಗಿದ್ದಾರೆ ಎಂದು ಈ ಭಾಗದ ಜನರು ಹೇಳುತ್ತಾರೆ.









