*ಗಂಗಾಧರ ಕಲ್ಲಪಳ್ಳಿ.
ಸುಳ್ಯ:ನಾಗರಿಕತೆ,ಸಂಸ್ಕೃತಿ, ಸಂಸ್ಕಾರ, ಆಚಾರ, ವಿಚಾರಗಳು ಹೀಗೆ ಒಂದು ತಲೆಮಾರಿನ ಸಂಪೂರ್ಣ ಚಿತ್ರಣವನ್ನು ಈ ಚಿತ್ರಗಳು ಕಟ್ಟಿ ಕೊಡುತ್ತಿವೆ.. ಹಳ್ಳಿ ಬದುಕಿನ ಅಪರೂಪತೆ, ಗ್ರಾಮೀಣ ಬದುಕಿನ ಸೊಗಡು, ಕೃಷಿ ಜೀವನದ ಸೌಂದರ್ಯಗಳನ್ನು ಕಣ್ಣಿಗೆ ಕಟ್ಟುವಂತೆ ಕ್ಯಾನ್ವಾಸ್ನಲ್ಲಿ ಅರಳಿಸಿದ ತೈಲವರ್ಣ ಚಿತ್ರಗಳು ಮನ ಸೆಳೆಯುತಿದೆ. ಸುಳ್ಯ ತಾಲೂಕಿನ ಸೋಣಂಗೇರಿಯ ನಡುಮನೆಯಲ್ಲಿ ತೆರೆದ ಮೋಹನ್ ಸೋನ ಆರ್ಟ್ ಗ್ಯಾಲರಿಯಲ್ಲಿ ಖ್ಯಾತ ಚಿತ್ರಕಲಾವಿದ ಮೋಹನ್ ಸೋನ ಅವರು ತನ್ನ ಬದುಕಿನುದ್ದಕ್ಕೂ ಬಿಡಿಸಿದ ಅಪರೂಪದ ಚಿತ್ರಗಳ
ವರ್ಣಲೋಕ ಮೇಳೈಸಿದೆ.ಸೋನ ಅವರ ಅಗಲುವಿಕೆಯ ನಂತರ ಅವರ ಮನೆಯ ಮೇಲ್ಭಾಗದಲ್ಲಿ ಆರ್ಟ್ ಗ್ಯಾಲರಿ ತೆರೆಯಲಾಗಿದೆ. ಇಲ್ಲಿ ಸೋನ ಅವರು ರಚಿಸಿದ ಅಪರೂಪದ ಚಿತ್ರಗಳನ್ನು ಇರಿಸಲಾಗಿದ್ದು ಕಲಾಸಕ್ತರ ಮನ ಸೆಳೆಯುತ್ತಿವೆ. ತಮ್ಮ ಸುತ್ತಲ ಜಗತ್ತನ್ನು, ಹಳ್ಳಿಯ ಬದುಕನ್ನು ಸೋನರು ಅದ್ಭುತವಾಗಿ ಕ್ಯಾನ್ವಾಸ್ನಲ್ಲಿ ಚಿತ್ರಿಸಿದ್ದಾರೆ. ಪ್ರಕೃತಿಯ ಸೊಬಗು, ಮಾನವ ಸಹಜ ಬದುಕು, ಕಲಾವಿದನ ಕಾಲ್ಪನಿಕ ಜಗತ್ತಿನ ಚಿತ್ರಣದ ಜೊತೆಗೆ ತಮ್ಮ ಪ್ರೀತಿಯ ರಂಗಭೂಮಿಯನ್ನು ಹಾಗೂ ಹಲವು

ಪ್ರಸಿದ್ಧ ಕಾದಂಬರಿಗಳನ್ನು ಅವರು ತಮ್ಮ ಕಲಾ ಚಾಕಚಕ್ಯತೆಯಿಂದ ಚಿತ್ರಗಳಾಗಿಸಿದ್ದರು. ತಮ್ಮ ಮನೆಯಲ್ಲಿ ಒಂದು ಆರ್ಟ್ ಗ್ಯಾಲರಿ ತೆರೆಯಬೇಕು ಎಂಬುದು ಸೋನ ಅವರ ಕನಸಾಗಿತ್ತು. ಅದಕ್ಕಾಗಿ ಅವರ ಮನೆಯ ಮೇಲ್ಭಾಗವನ್ನು ಆರ್ಟ್ ಗ್ಯಾಲರಿ ರಚಿಸಲು ಪೂರಕವಾಗುವಂತೆ ನಿರ್ಮಿಸಿದ್ದರು. ಅವರ ಅಗಲುವಿಕೆಯ ನಂತರ ಅವರ ಪತ್ನಿ ಮಾಧವಿ, ಮಕ್ಕಳಾದ ಮೃಣಾಲಿನಿ ಸೋನ, ಗಗನ್ ಸೋನ ಮತ್ತು ಕುಟುಂಬಸ್ಥರು ಹಾಗೂ ಸೋನ ಅವರ ಗೆಳೆಯರ ಸಹಕಾರದಲ್ಲಿ ಮೂರು ವರ್ಷದ ಹಿಂದೆ ಆರ್ಟ್ ಗ್ಯಾಲರಿ ಸ್ಥಾಪಿಸಿ ಸೋನ ಚಿತ್ರಗಳನ್ನು ಪ್ರದರ್ಶಿಸಿದ್ದಾರೆ. ಅಡಿಕೆ ಕೊಯ್ಯುವುದು, ಉಳುಮೆ ಸೇರಿ ವಿವಿಧ ಕೃಷಿ ಬದುಕಿನ ಚಿತ್ರಣಗಳು, ಗೇರು ಬೀಜ ಸುಡುವುದು, ಕಳ್ಳಭಟ್ಟಿ ತಯಾರಿಸುವಿಕೆ, ಶೇಂದಿ ತೆಗೆಯುವುದು, ಕೋಳಿ ಅಂಕ ಹೀಗೆ ಗ್ರಾಮೀಣ ಬದುಕಿನ

ಮೋಹನ್ ಸೋನ
ವೈಶಿಷ್ಟ್ಯತೆಗಳು, ಗೋವಿನ ಹಾಡು, ಮುಂಜಾವಿನ ಬೆಳಗು, ವಿದ್ಯಾಶಾರದೆ ಹೀಗೆ ದೈನಂದಿನ ಬದುಕಿನ ಹಲವು ಚಿತ್ರಣಗಳನ್ನು ಚಿತ್ರಗಳನ್ನಾಗಿಸಿದ್ದಾರೆ. ರಂಗಭೂಮಿಯನ್ನು ಚಿತ್ರದ ಮೂಲಕ ಅರಳಿಸಿದ್ದರು. ಕಾದಂಬರಿ ಆಧಾರಿತ ಕಂಬಾರರ ಜೋಕುಮಾರಸ್ವಾಮಿ, ಶಿವರಾಮ ಕಾರಂತರ ಚೋಮನ ದುಡಿ, ಪುತಿನರ ಗೋಕುಲ ನಿರ್ಗಮನ ಹೀಗೆ ಸೋನರು ರಚಿಸಿದ ಹಲವು ವೈಶಿಷ್ಟ್ಯಪೂರ್ಣ ವರ್ಣ ಚಿತ್ರಗಳು ಮನ ಸೆಳೆಯುತ್ತವೆ.
ಮೋಹನ್ ಸೋನ ಅವರು ವಿವಿಧ ಪುಸ್ತಗಳಿಗೆ ರಚಿಸಿದ ಮುಖಪುಟ ಹಾಗೂ ಪುಸ್ತಕಗಳಲ್ಲಿರುವ ಚಿತ್ರಗಳನ್ನು ಒಳಗೊಂಡ ಪುಸ್ತಕಗಳ ಸಂಗ್ರಹವೂ ಆರ್ಟ್ ಗ್ಯಾಲರಿಯಲ್ಲಿದೆ.

ಆರ್ಟ್ ಗ್ಯಾಲರಿಯ ಚಿತ್ರಗಳು
ದೇಶದ ಗಮನ ಸೆಳೆದಿತ್ತು ಬಯಲು ಚಿತ್ರಾಲಯ:
1993ರಲ್ಲಿ ಸೋಣಂಗೇರಿಯಲ್ಲಿ ಮೋಹನ್ ಸೋನಾ ಅವರ ನೇತೃತ್ವದಲ್ಲಿ ನಡೆದ ಬಯಲು ಚಿತ್ರಾಲಯ ದೇಶದ ಗಮನ ಸೆಳೆದಿತ್ತು.ದೇಶದ ವಿವಿಧ ಭಾಗಗಳಿಂದ ಆಗಮಿಸಿದ 40 ಮಂದಿ ಪ್ರಸಿದ್ಧ ಚಿತ್ರ ಕಲಾವಿದರು ಭಾಗವಹಿಸಿದ್ದ ಬಯಲು ಚಿತ್ರಾಲಯದ ನೆನಪುಗಳು ಇಂದಿಗೂ ನಾಡಿನ ಕಲಾ ಪ್ರೇಮಿಗಳ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿದೆ. ಪ್ರತಿಯೊಬ್ಬ ಕಲಾವಿದನೂ ಸೋಣಂಗೇರಿಯ 40 ಮನೆಗಳಲ್ಲಿ ಒಂದು ವಾರಗಳ ಕಾಲ ಉಳಿದು ಅಲ್ಲಿನ ಸಂಸ್ಕೃತಿ, ಆಚಾರ ವಿಚಾರಗಳನ್ನು ಅರಿತು

ಬಯಲು ಚಿತ್ರಾಲಯದಲ್ಲಿ ರಚನೆಯಾದ ಚಿತ್ರ
ಅಲ್ಲಿಯೇ ಕ್ಯಾನ್ವಾಸ್ಗಳಲ್ಲಿ ಚಿತ್ರಗಳನ್ನು ರಚಿಸಿ ಆ ಚಿತ್ರಗಳನ್ನು ಅದೇ ಮನೆಗೆ ನೀಡಿದ್ದರು. ಈ ಅಪರೂಪದ ಬಯಲು ಚಿತ್ರಾಲಯದಲ್ಲಿ ಅರಳಿದ ಚಿತ್ರಗಳು ಮೂರು ದಶಕಗಳ ಬಳಿಕವೂ ಸೋಣಂಗೇರಿಯ ಸೋನ ಅವರ ಮನೆಯಲ್ಲಿ ಹಾಗೂ ಸುತ್ತಮುತ್ತಲ ಮನೆಗಳಲ್ಲಿ ಅದರ ವೈಶಿಷ್ಟ್ಯಗಳನ್ನು ಸಾರಿ ಹೇಳುತ್ತಾ ಅರಳಿ ನಿಂತಿವೆ. ಖಂಡೇ ರಾವ್,ವಿ.ಜಿ.ಅಂದಾನಿ, ಕೆ.ಕೆ.ಮಕಾಳಿ, ಬಾಬುರಾವ್ ನುಡೋಣಿ, ರಮೇಶ್ ರಾವ್, ಎಂ.ಜಿ.ಕಜೆ,ಎಂ.ಎಸ್.ಮೂರ್ತಿ, ಸುದೇಶ್ ಮಹಾನ್ ಸೇರಿ 40 ಮಂದಿ ಪ್ರಸಿದ್ಧ ಕಲಾವಿದರು 40 ಮನೆಗಳಲ್ಲಿ ಚಿತ್ರಗಳನ್ನು ರಚಿಸಿ ಸೋಣಂಗೇರಿಯನ್ನು ಕಲಾ ಗ್ರಾಮವಾಗಿ ಪರಿವರ್ತಿಸಿದ್ದರು. ಖ್ಯಾತ ರಂಗ ನಿರ್ದೇಶಕರಾಗಿದ್ದ ಬಿ.ವಿ.ಕಾರಂತ್ ಅವರು ಕೂಡ ಅಂದು ಆಗಮಿಸಿದ್ದರು ಎಂದು ಸೋನ ಅವರ ಕುಟುಂಬಸ್ಥರು ನೆನಪಿಸುತ್ತಾರೆ.

ಬಯಲು ಚಿತ್ರಾಲಯದಲ್ಲಿ ರಚನೆಯಾದ ಚಿತ್ರ
“ಮೋಹನ್ ಸೋನ ಅವರ ಚಿತ್ರಕಲಾ ಪರಂಪರೆಯನ್ನು ಮುಂದುವರಿಸುವ ಉದ್ದೇಶದಿಂದ ಆರ್ಟ್ ಗ್ಯಾಲರಿ ಸ್ಥಾಪಿಸಲಾಗಿದೆ. ಇಲ್ಲಿ ಸೋನ ಅವರ ನೆನಪಿನಲ್ಲಿ ವಿವಿಧ ಕಲಾವಿದರ ಚಿತ್ರ ಪ್ರದರ್ಶನ ಸೇರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತಿದೆ.ಇದೀಗ ಸೋನ ಅವರ 3ನೇ ವರ್ಷದ ನೆನಪಿನಲ್ಲಿ ಖ್ಯಾತ ಚಿತ್ರ ಕಲಾವಿದ ಸುದೇಶ್ ಮಹಾನ್ ಹಾಗೂ ಆದ್ಯಾ ರಾಜೇಶ್ ಮಹಾನ್ ಅವರ ಚಿತ್ರಕಲಾ ಪ್ರದರ್ಶನ ನಡೆಯುತಿದೆ. ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಬಯಲು ಚಿತ್ರಾಲಯ ಮಾಡುವ ಯೋಚನೆ ಇದೆ ಎನ್ನುತ್ತಾರೆ ಮೋಹನ್ ಸೋನ ಅವರ ಮಕ್ಕಳಾದ ಮೃಣಾಲಿನಿ ಸೋನ, ಗಗನ್ ಸೋನ ಹಾಗೂ ಸೋನ ಅವರ ಸಹೋದರನ ಪುತ್ರ ನಂದನ್ ಸೋನ.