ಸುಳ್ಯ:ಮರ್ಕಂಜ ಗ್ರಾಮದ ಅಲವು ಪಾರೆ ಎಂಬಲ್ಲಿ ಕಾರ್ಯಾಚರಿಸುತ್ತಿರುವ ಜಲ್ಲಿ ಕಲ್ಲಿನ ಗಣಿಗಾರಿಕೆ ತಕ್ಷಣ ನಿಲ್ಲಿಸದಿದ್ದರೆ ಚುನಾವಣಾ ಬಹಿಷ್ಕಾರ ಸೇರಿದಂತೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಮರ್ಕಂಜ ಗ್ರಾಮಸ್ಥರು ಹೇಳಿದ್ದಾರೆ. ಗಣಿಗಾರಿಕೆ ನಿಲ್ಲಿಸಬೇಕು ಎಂದು ಅಗ್ರಹಿಸಿ ಸುಳ್ಯ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಬಳಿಕ ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಹೋರಾಟ ಸಮಿತಿಯ
ಪ್ರಮುಖರಾದ ನವೀನ್ ನಳಿಯಾರು ಮಾತನಾಡಿ ‘ಒಂದು ವರ್ಷದಿಂದ ಸ್ಥಗಿತವಾಗಿದ್ದ ಗಣಿಗಾರಿಕೆ ಕಳೆದ ಕೆಲವು ದಿನಗಳಿಂದ ಮತ್ತೆ ಪ್ರಾರಂಭಗೊಂಡಿದೆ. ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗಿದೆ. ಕಲ್ಲುಗಳನ್ನು ಸ್ಪೋಟಿಸುವದರಿಂದ ಸಮೀಪದ ಮನೆಗಳು, ಅಂಗಡಿಗಳಿಗೆ, ದೇವಸ್ಥಾನಗಳಿಗೆ ಹಾನಿ ಉಂಟಾಗುತ್ತಿದೆ. ಸಮೀಪದಲ್ಲಿ ಸರಕಾರಿ ಶಾಲೆ, ಕುಡಿಯುವ ನೀರಿನ ಟ್ಯಾಂಕ್, ಬೋರ್ವೆಲ್ಗಳು, ದೇವಸ್ಥಾನಗಳು, ಜನ ವಸತಿ ಪ್ರದೇಶ, ಸಹಕಾರಿ ಸಂಘ ಕಟ್ಟಡ, ಸರಕಾರಿ ಆಸ್ಪತ್ರೆ ಇದ್ದು ತೀವ್ರ ಸಮಸ್ಯೆ ಎದುರಾಗುತಿದೆ. ಪರಿಸರದಲ್ಲಿ ಜಲ್ಲಿಕಲ್ಲು, ಹುಡಿ ಹರಡಿ ಆರೋಗ್ಯಕ್ಕೂ ಸಮಸ್ಯೆ ಆಗಿದೆ. ಆದುದರಿಂದ ಕೂಡಲೇ ಗಣಿಗಾರಿಕೆ ನಿಲ್ಲಿಸಬೇಕು ಎಂದು ಒತ್ತಾಯಿಸಿದರು. ಈ ಬೇಡಿಕೆ ಮುಂದಿರಿಸಿ ಜಿಲ್ಲಾಧಿಕಾರಿ, ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಗಿದೆ. ಮುಂದಿನ ದಿನದಲ್ಲಿ ತೀವ್ರ ಹೋರಾಟ ನಡೆಸುವುದಾಗಿ ಅವರು ಹೇಳಿದರು.
ಸದ್ದಿಗೋಷ್ಠಿಯಲ್ಲಿ ವೆಂಕಟ್ರಮಣ ಗೌಡ ಅಂಗಡಿಮಜಲು, ಭೋಜಪ್ಪ ಗೌಡ ಕೊಚ್ಚಿ,ಮಹೇಶ್ ಪುರ, ನವೀನ್ ದೊಡ್ಡಿಹಿತ್ಲು, ರಮೇಶ್ ಪಡ್ಡಂಬೈಲು, ನಯನ್ ಕುಮಾರ್ ಬಲ್ನಾಡುಪೇಟೆ ಉಪಸ್ಥಿತರಿದ್ದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.