*ಗಂಗಾಧರ ಕಲ್ಲಪಳ್ಳಿ.
ಸುಳ್ಯ:ಒಂದಲ್ಲಾ, ಎರಡಲ್ಲಾ, ಐದು, ಹತ್ತು ಅಲ್ಲವೇ ಅಲ್ಲಾ.. ಬರೋಬರಿ 21 ಕಿಲೋಮೀಟರ್ ಹಾಪ್ ಮ್ಯಾರಥಾನ್ ಕೇವಲ ಒಂದು ಗಂಟೆ 25 ನಿಮಿಷದಲ್ಲಿ ಓಡಿ ಮುಟ್ಟುವ ಸರದಾರ ಇವರು.. ಮ್ಯಾರಥಾನ್ ಓಟವನ್ನು ಉಸಿರಾಗಿಸಿದ, ಅದನ್ನೇ ಜೀವನದ ಭಾಗವಾಗಿಸಿದ ಗ್ರಾಮೀಣ ಕ್ರೀಡಾ ಪ್ರತಿಭೆ ವಿನಯ ನಾರಾಲು.
ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ನಾರಾಲು ಮನೆಯ ವಿನಯ ಇದುವರೆಗೆ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ದೂರ ಓಟ ಸೇರಿ 150ಕ್ಕೂ ಹೆಚ್ಚು ಮ್ಯಾರಥಾನ್ಗಳಲ್ಲಿ ಭಾಗವಹಿಸಿದ ದೈತ್ಯ ಪ್ರತಿಭೆ. ಯಾವುದೇ
ಪ್ರೋತ್ಸಾಹ ಇಲ್ಲದಿದ್ದರೂ ನಿರಂತರ ಪರಿಶ್ರಮ, ಕಠಿಣ ಅಭ್ಯಾಸದಿಂದ ಮ್ಯಾರಥಾನ್ ಓಟದಲ್ಲಿ ಕ್ರಿಯಾಶೀಲರು ವಿನಯ್. 42 ಕಿ.ಮಿ ಫುಲ್ ಮ್ಯಾರಥಾನ್ನಲ್ಲಿ 5 ಬಾರಿ , 75 ಕಿ.ಮಿ.ಮ್ಯಾರಥಾನ್ನಲ್ಲಿ 2 ಬಾರಿ, 50 ಕಿ.ಮಿ.ಮ್ಯಾರಥಾನ್ ನಲ್ಲಿ 2 ಬಾರಿ ಸ್ಪರ್ಧಿಸಿರುವ ಇವರು ಗ್ರಾಮೀಣ, ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಮ್ಯಾರಥಾನ್ ಸೇರಿ 150ಕ್ಕೂ ಮಿಕ್ಕಿ ದೂರ ಓಟದಲ್ಲಿ ಭಾಗವಹಿಸಿದ್ದಾರೆ. 2022ರ ಪುಣೆ ಇಂಟರ್ನ್ಯಾಷನಲ್ ಮ್ಯಾರಥಾನ್ನಲ್ಲಿ 11ನೇ ಸ್ಥಾನ ಪಡೆದಿದ್ದರು. ಹಲವು ಮ್ಯಾರಥಾನ್ಗಳಲ್ಲಿ 10ರ ಒಳಗಿನ ಸ್ಥಾನ ಗಿಟ್ಟಿಸಿಕೊಂಡಿದ್ದರು. 2023 ರಲ್ಲಿ ಅಂದರೆ ಈ ವರ್ಷ 7 ಮ್ಯಾರಥಾನ್ಗಳಲ್ಲಿ ಭಾಗವಹಿಸಿದ್ದಾರೆ. ನಾರಾಲು ಮನೆಯ ಉಮೇಶ್ ಗೌಡ-ಚಿನ್ನಮ್ಮ ದಂಪತಿಗಳ ಪುತ್ರ ವಿನಯ್ ನಾರಾಲು.
ಬಾಲ್ಯದಿಂದಲೇ ದೂರ ಓಟ ಇಷ್ಟ:
ಚಿಕ್ಕದಿರುವಾಗಲೇ ಚಿಕ್ಕ ಓಟಗಳಲ್ಲಿ ಅವರಿಗೆ ಆಸಕ್ತಿ ಇರಲಿಲ್ಲ. ಅಂದಿನಿಂದಲೇ ಅವರು ದೂರದ ಓಟದಲ್ಲಿ ದೃಷ್ಠಿ ನೆಟ್ಟಿದ್ದರು. ಪ್ರಾಥಮಿಕ, ಹೈಸ್ಕೂಲು, ಪಿಯುಸಿಯಲ್ಲಿ ಇದ್ದಾಗ 3 ಸಾವಿರ, 5 ಸಾವಿರ ಮೀಟರ್ ಓಟದಲ್ಲಿ ಭಾಗವಹಿಸುತ್ತಿದ್ದ ವಿನಯ ಸುಳ್ಯ ನೆಹರೂ ಸ್ಮಾರಕ ಮಹಾವಿದ್ಯಾಲಯದಲ್ಲಿ ಪಿಯುಸಿ ಓದುವ ಸಂದರ್ಭದಲ್ಲಿ ಪ್ರಥಮ ಬಾರಿಗೆ ದೂರ ಓಟದಲ್ಲಿ ಭಾಗವಹಿಸಿದ್ದರು. ಕೊಡಗಿನ ಗೋಣಿಕೊಪ್ಪಲಿನಲ್ಲಿ ನಡೆದ ಮ್ಯಾರಥಾನ್ನಲ್ಲಿ ಪ್ರಥಮವಾಗಿ ಭಾಗವಹಿಸಿದ್ದರು.ಬಳಿಕ ಪದವಿ ಕಲಿಯುತ್ತಿದ್ದಾಗ, ಪದವಿ ಶಿಕ್ಷಣ ಅರ್ಧದಲ್ಲಿ ನಿಲ್ಲಿಸಿ ಐಟಿಐ ಶಿಕ್ಷಣ ಪಡೆಯುವ ಸಂದರ್ಭದಲ್ಲಿ ನಿರಂತರ ಮ್ಯಾರಥಾನ್ನಲ್ಲಿ ಭಾಗವಹಿಸಿದ್ದರು. ಬಳಿಕ ವಿದೇಶದಲ್ಲಿನ ಉದ್ಯೋಗ, ಕಾಲಿಗೆ ಆದ ಗಾಯ ಮತ್ತಿತರ ಕಾರಣಗಳಿಂದ ಸುಮಾರು 5 ವರ್ಷಗಳ ಕಾಲ ಮ್ಯಾರಥಾನ್ನಿಂದ ದೂರ ಉಳಿದಿದ್ದ ವಿನಯ ಬಳಿಕ ಊರಿನಲ್ಲಿ ಸೆಟ್ಲ್ ಆದಾಗ ತನ್ನ ಇಷ್ಟದ ಮ್ಯಾರಥಾನ್ಗೆ ಮರಳಿ ಮತ್ತೆ ಸಕ್ರೀಯರಾಗಿದ್ದಾರೆ. ಅಜ್ಜಾವರ ಹೈಸ್ಕೂಲ್ನಲ್ಲಿ ಇದ್ದಾಗ ದೈಹಿಕ ಶಿಕ್ಷಕರಾದ ಬಾಲಕೃಷ್ಣ ನಾಯ್ಕ್ ದೂರ ಓಟದ ಬಾಲ ಪಾಠ ಕಲಿಸಿದ್ದರು. ಬಳಿಕ ಪಿಯುಸಿ ಶಿಕ್ಷಣ ಪಡೆಯುವ ಸಂದರ್ಭದಲ್ಲಿ ಈಗ ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಸತೀಶ್ ಕೊಯಿಂಗಾಜೆ ಅವರು ದೈಹಿಕ ಶಿಕ್ಷಣ ನಿರ್ದೇಶಕರಾಗಿದ್ದ ಸಂದರ್ಭದಲ್ಲಿ ಮ್ಯಾರಥಾನ್ ಓಟದ ಮಾರ್ಗದರ್ಶನ, ತರಬೇತಿ ನೀಡಿದ್ದರು ಎನ್ನುತ್ತಾರೆ ವಿನಯ ನಾರಾಲು.
ನಿರಂತರ ಕಠಿಣ ಅಭ್ಯಾಸ:
ಮ್ಯಾರಥಾನ್ ಓಟದಲ್ಲಿ ಭಾಗವಹಿಸಲು ಫಿಟ್ನೆಸ್ ಕಾಯ್ದುಕೊಳ್ಳಲು ನಿರಂತರ ಅಭ್ಯಾಸ ಅಗತ್ಯ. ಆದುದರಿಂದಲೇ ಇವರು ನಿರಂತರ ಅಭ್ಯಾಸ ನಡೆಸುತ್ತಾರೆ. ಅದಕ್ಕಾಗಿ ಪ್ರತಿ ದಿನ ಐದು ಕಿಲೋಮೀಟರ್ ಓಡುತ್ತಾರೆ. ಪೇರಾಲು ಶಾಲಾ ಗ್ರೌಂಡ್ನಲ್ಲಿ ಪ್ರತಿ ದಿನ ಬೆಳಿಗ್ಗೆ ಇವರು ಕಠಿಣ ಅಭ್ಯಾಸ ನಿರತರಾಗುವ ಮೂಲಕ ಇವರು ತಮ್ಮ ಫಿಟ್ನೆಸ್ ಕಾಯ್ದುಕೊಳ್ಳುತ್ತಾರೆ. ಅಲ್ಲದೆ ಹೊಸ ಮ್ಯಾರಥಾನ್ ಓಟಗಾರರಿಗೆ ಪ್ರೋತ್ಸಾಹವನ್ನೂ ನೀಡುತ್ತಾರೆ.
ಪ್ರೋತ್ಸಾಹದ ಕೊರತೆ…
ಮ್ಯಾರಥಾನ್ ಓಟಗಾರರಿಗೆ ಯಾವುದೇ ಪ್ರೋತ್ಸಾಹ ಸಿಗುವುದಿಲ್ಲ ಎಂಬುದು ವಿನಯ್ ನಾರಾಲು ಅವರ ಅನುಭವದ ಮಾತು. ಕಳೆದ 14-15 ವರ್ಷ ಮ್ಯಾರಥಾನ್ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದರೂ ಯಾವುದೇ ಪ್ರೋತ್ಸಾಹ ಸಿಕ್ಕಿಲ್ಲ.ಫುಲ್ ಮ್ಯಾರಥಾನ್, ಹಾಪ್ ಮ್ಯಾರಥಾನ್ ಓಡುವ ಹಲವು ಮಂದಿ ಕ್ರೀಡಾ ಪ್ರತಿಭೆಗಳು ಗ್ರಾಮೀಣ ಭಾಗದಲ್ಲಿ ಇದ್ದಾರೆ. ಆದರೆ ಅವರಿಗೆ ಅಭ್ಯಾಸ ನಡೆಸುವುದಕ್ಕೆ, ಮ್ಯಾರಥಾನ್ಗಳಲ್ಲಿ ಭಾಗವಹಿಸಲು ಯಾವುದೇ ಪ್ರೋತ್ಸಾಹ ಇಲ್ಲದ ಸ್ಥಿತಿ ಇದೆ. ವಿದೇಶಗಳಲ್ಲಿ ಮ್ಯಾರಥಾನ್ ಓಟಗಾರರಿಗಡ ಉತ್ತಮ ಪ್ರೋತ್ಸಾಹ ದೊರೆಯುತ್ತದೆ ಎನ್ನುತ್ತಾರೆ ಅವರು.