ಬೆಂಗಳೂರು: ರಾಜ್ಯದ ಹಲವಡೆ ವಾರಾಂತ್ಯದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ಮೇ 21 ಮತ್ತು 22ರಂದು ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಗುಡುಗು, ಸಿಡಿಲು ಮತ್ತು ಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆಗಳಿವೆ. ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಸಾಧಾರಣ ಮಳೆ ಬಿದ್ದರೆ, ಇನ್ನು ಕೆಲವು ಭಾಗದಲ್ಲಿ
ಮಳೆಯಾಗುವ ಸಾಧ್ಯತೆ ಇದೆ. ಮುಂದಿನ ಎರಡು ದಿನ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಮೇ 20 ಮತ್ತು 21ರಂದು ಸಣ್ಣ ಅಥವಾ ಮಧ್ಯಮ ಪ್ರಮಾಣದಲ್ಲಿ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಎಂದು ಇಲಾಖೆ ತಿಳಿಸಿದೆ. ರಾಜ್ಯದಾದ್ಯಂತ ತಾಪಮಾನ ಏರಿಕೆಯಾಗಿದೆ. ಇದರಿಂದ ಮಳೆಯ ವಾತಾವರಣ ಸೃಷ್ಟಿಯಾಗುತ್ತಿದೆ. ಮೇ 21ರಿಂದ ಎರಡು ದಿನಗಳ ಕಾಲ ಮಳೆಯಾಗಲಿದೆ ಎಂದು ಹೇಳಿದೆ.
ರೂಪುಗೊಳ್ಳುತ್ತಿವೆ ಮಳೆ ಮಾರುತಗಳು:
ಆಗ್ನೇಯ ಬಂಗಾಳ ಕೊಲ್ಲಿ, ನಿಕೋಬಾರ್ ದ್ವೀಪಗಳು ಮತ್ತು ದಕ್ಷಿಣ ಅಂಡಮಾನ್ನ ಸಮುದ್ರದಲ್ಲಿ ನೈರುತ್ಯ ಮಾನ್ಸೂನ್ ಮಾರುತಗಳು ಏರ್ಪಟ್ಟಿದ್ದು, ನಾಲ್ಕು ತಿಂಗಳ ಮಳೆಗಾಲಕ್ಕೆ ವೇದಿಕೆ ಸಿದ್ಧವಾಗುತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
‘ನೈರುತ್ಯ ಮಾನ್ಸೂನ್ ಆಗ್ನೇಯ ಬಂಗಾಳ ಕೊಲ್ಲಿ, ನಿಕೋಬಾರ್ ದ್ವೀಪಗಳು ಮತ್ತು ದಕ್ಷಿಣ ಅಂಡಮಾನ್ ಸಮುದ್ರದ ಕೆಲವು ಭಾಗಗಳಲ್ಲಿ ಏರ್ಪಟ್ಟಿವೆ’ ಎಂದು ಹವಾಮಾನ ಇಲಾಖೆ ಹೇಳಿದೆ. ಮುಂದಿನ ಮೂರು–ನಾಲ್ಕು ದಿನಗಳಲ್ಲಿ ದಕ್ಷಿಣ ಬಂಗಾಳ ಕೊಲ್ಲಿ, ಅಂಡಮಾನ್ ಸಮುದ್ರ ಹಾಗೂ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಕೆಲವು ಭಾಗಗಳಲ್ಲಿ ನೈರುತ್ಯ ಮಾನ್ಸೂನ್ ಮಾರುತಗಳು ರೂಪುಗೊಳ್ಳಲು ಪರಿಸ್ಥಿತಿ ಅನುಕೂಲಕರವಾಗಿವೆ ಎಂದು ಅದು ಹೇಳಿದೆ. ಕೇರಳದಲ್ಲಿ ಜೂನ್ 4ರಂದು ಮುಂಗಾರು ಪ್ರಾರಂಭವಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿತ್ತು. ಕಳೆದ ವರ್ಷ 2022ರ ಮೇ 29ರಂದು, 2021ರಲ್ಲಿ ಜೂನ್ 3ರಂದು, 2020ರಲ್ಲಿ ಜೂನ್ 1ರಂದು, 2019ರಲ್ಲಿ ಜೂನ್ 8 ರಂದು ಮತ್ತು 2018ರಲ್ಲಿ ಮೇ 29ರಂದು ಮಾನ್ಸೂನ್ ಕೇರಳಕ್ಕೆ ಪ್ರವೇಶಿಸಿತ್ತು.