ಮಂಗಳೂರು:ಮಂಗಳೂರಿನಲ್ಲಿ ಶುಕ್ರವಾರ ಮಳೆಯಾಗಿದೆ. ಮಂಗಳೂರು ನಗರದ ಕೆಲವು ಭಾಗಗಳಲ್ಲಿ ಸುಮಾರು 15 ನಿಮಿಷಕ್ಕೂ ಹೆಚ್ಚು ಸಮಯ ಉತ್ತಮ ಮಳೆಯಾಗಿದೆ. ಮೋಡ ಕವಿದ ವಾತಾವರಣ ಇದ್ದು ಮಳೆ ಸುರಿದಿದೆ. ಸುಳ್ಯದಲ್ಲಿ ಬೆಳಗ್ಗಿನಿಂದಲೇ ಮೋಡ ಕವಿದ ವಾತಾವರಣ ಇದೆ. ಜಿಲ್ಲೆಯ ವಿವಿಧ ಕಡೆ ಮೋಡ ಇದ್ದು ಮಳೆ ಬರುವ ಸಾಧ್ಯತೆ ಇದೆ ಎಂಬ ಸೂಚನೆ ಇದೆ. ಈ ಮಧ್ಯೆ ರಾಜ್ಯದ ವಿವಿಧೆಡೆ ಶುಕ್ರವಾರ ಗುಡುಗು ಸಹಿತ
ಮಳೆಯಾಗಲಿದ್ದು, ಭಾನುವಾರದಿಂದ ಮಳೆಯ ತೀವ್ರತೆ ಹೆಚ್ಚುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಹಾಗೂ ವಿಜಯನಗರದಲ್ಲಿ ಶುಕ್ರವಾರ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಒಳನಾಡಿನ ಕಲಬುರಗಿ, ರಾಯಚೂರು, ಯಾದಗಿರಿ, ಬೀದರ್, ವಿಜಯಪುರ ಜಿಲ್ಲೆಯ ಒಂದೆರಡು ಕಡೆ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ಹೇಳಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ.