ಸುಳ್ಯ: ಸಂಸ್ಕಾರ, ಶಿಸ್ತು, ಸಂಯಮಗಳು ಜೊತೆಗಿದ್ದರೆ ಭವ್ಯ ಬದುಕಿನಲ್ಲಿ ದಿವ್ಯತೆಯ ಅನುಭವವನ್ನು ಸಾಧಿಸಬಹುದು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಮಹಾಸ್ವಾಮೀಜಿ ಹೇಳಿದರು.ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಯುಕ್ತ ಸೋಮವಾರ ಆಯೋಜಿಸಲಾದ ಮೂರನೇ ದಿನದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು
ನಾನು ಎಂಬ ಅಹಂಭಾವ ಹಾಗೂ ಆಸೆ ಇರುವಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ, ಆದುದರಿಂದ ಅಹಂ ತೊರೆದರೆ ಶಾಂತಿ, ನೆಮ್ಮದಿ ದೊರೆಯಲು ಸಾಧ್ಯ ಎಂದರು.
ಶ್ರೀಧಾಮ ಮಾಣಿಲ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ ‘ದುಷ್ಕೃತ್ಯಗಳ ನಿರ್ಮೂಲನೆಗಾಗಿ, ಸತ್ಕರ್ಮಗಳ ಆಚರಣೆಗಾಗಿ ದುಃಖಿತ ಸಮಾಜದ ಉದ್ಧಾರಕ್ಕಾಗಿ ದೇವಸ್ಥಾನ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಅವಶ್ಯಕತೆಯಿದೆ ಎಂದರು.
ಧಾರ್ಮಿಕ ಉಪನ್ಯಾಸ ನೀಡಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತ ಮಟ್ಟದ ಆಹ್ವಾನಿತ ಖಾಯಂ ಸದಸ್ಯ ಕಜಂಪಾಡಿ ಸುಬ್ರಹ್ಮಣ್ಯ ಭಟ್, ಸಂಸ್ಕಾರ ಕೊಡುವ ನಾಲ್ಕು ಕೇಂದ್ರಗಳಾದ ದೇವಸ್ಥಾನ, ಮನೆ, ಶಾಲೆ ಹಾಗೂ ಸಮಾಜದಿಂದ ಹೊರ ಬರುವ ಉತ್ತಮ ವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಅನಿವಾರ್ಯತೆ ಇದೆ ಎಂದರು.
ಮೇನಾಲದ ಶ್ರೀ ಕಾಳಿಕಾ ದುರ್ಗಾಪರಮೇಶ್ವರಿ ಕ್ಷೇತ್ರದ ಶ್ರೀ ಪದ್ಮನಾಭ ಸ್ವಾಮೀಜಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ದೇಗುಲದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸದಾನಂದ ಮಾವಜಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಮಾಜಿ ಜಿ. ಪಂ ಸದಸ್ಯ, ಸರಕಾರದ ಪಂಚ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ, ಜಿ.ಪಂ ಮಾಜಿ ಸದಸ್ಯೆ ಪುಷ್ಪಾವತಿ ಬಾಳಿಲ, ಜಿಲ್ಲಾ ಧಾರ್ಮಿಕ ಪರಿಷತ್ ನ ಮಾಜಿ ಸದಸ್ಯೆ ವಿಮಲಾ ರಂಗಯ್ಯ, ಸುಬ್ರಹ್ಮಣ್ಯ ದೇಗುಲದ ಮಾಜಿ ಟ್ರಸ್ಟಿ ರಾಜೀವಿ ರೈ, ಅಡ್ಕಾರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಜಯರಾಮ ರೈ, ನ್ಯಾಯವಾದಿ ಎಂ. ವೆಂಕಪ್ಪ ಗೌಡ, ಜಿಲ್ಲಾ ಧಾರ್ಮಿಕ ಪರಿಷತ್ ನ ಸದಸ್ಯ ಲಕ್ಷ್ಮೀಶ ಗಬ್ಬಲಡ್ಕ, ತಾ.ಪಂ ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕ, ಮಂಡೆಕೋಲು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಮಕೃಷ್ಣ ರೈ,
ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಶಿವಪ್ರಸಾದ್ ಉಗ್ರಾಣಿಮನೆ, ಪ್ರಧಾನ ಕಾರ್ಯದರ್ಶಿ ಸುರೇಶ್ ಕಣೆಮರಡ್ಕ ಮೊದಲಾದವರು ಉಪಸ್ಥಿತರಿದ್ದರು.
ಪತ್ರಕರ್ತ ಗಣೇಶ್ ಮಾವಂಜಿ ಸ್ವಾಗತಿಸಿದರು. ಮಾತೃ ಸಮಿತಿಯ ಸಂಚಾಲಕಿ ವಿನುತಾ ಪಾತಿಕಲ್ಲು ವಂದಿಸಿದರು. ಅಚ್ಚುತ ಅಟ್ಲೂರು ಹಾಗೂ ಗಣೇಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಮಂಡೆಕೋಲು ಗ್ರಂಥಾಲಯದ ಮಕ್ಕಳ ತಂಡ ಪ್ರಸ್ತುತ ಪಡಿಸಿದ ಯಕ್ಷಗಾನ ‘ಏಕಾದಶಿ ದೇವಿ ಮಹಾತ್ಮೆ’ ಹಾಗೂ ಮಂಗಳಾದೇವಿ ಮೇಳದ ಕಲಾವಿದರು ಪ್ರಸ್ತುತಪಡಿಸಿದ ‘ಸಾರ್ಲಪಟ್ಟೊದ ಸತ್ಯ’ ಯಕ್ಷಗಾನ ಕಾರ್ಯಕ್ರಮ ನೆರೆದವರ ಮನರಂಜಿಸಿತು.
ಇಂದು ‘ಕಲ್ಜಿಗದ ಮಾಯ್ಕಾರೆ ಪಂಜುರ್ಲಿ’
ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾಗುವ ಸಾಂಸ್ಕೃತಿಕ ಕಾರ್ಯಕ್ರಮಗಳ ಕೊನೆಯ ದಿನವಾದ ಇಂದು (ಎಪ್ರಿಲ್ 30) ರಾತ್ರಿ 8.30 ರ ಬಳಿಕ ಶಾರದಾ ಆರ್ಟ್ಸ್ ತಂಡದ ಐಸಿರಿ ಕಲಾವಿದೆರ್ ಮಂಜೇಶ್ವರ ಅರ್ಪಿಸುವ ‘ಕಲ್ಜಿಗದ ಮಾಯ್ಕಾರೆ ಪಂಜುರ್ಲಿ’ ಎಂಬ ನಾಟಕ ಪ್ರದರ್ಶನ ನಡೆಯಲಿದೆ.