ಸುಳ್ಯ: ಪ್ರಕೃತಿ ಹಾಗು ಕಾಡಿನಂಚಿನ ಗ್ರಾಮಗಳನ್ನು ಯಥಾ ಪ್ರಕಾರ ಉಳಿಸಿಕೊಂಡು ಕಸ್ತೂರಿರಂಗನ್ ವರದಿಯನ್ನು ಜಾರಿ ಮಾಡಬೇಕು ಎಂದು ಮಲೆನಾಡು ಜಂಟಿ ಕ್ರಿಯಾ ಸಮಿತಿ ಒತ್ತಾಯಿಸಿದೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಸಂಚಾಲಕರಾದ ಕೆ.ಎಲ್.ಪ್ರದೀಪ್ ಕುಮಾರ್ ಹಾಗೂ ಅಶೋಕ್ ಎಡಮಲೆ ವರದಿ ಅನುಷ್ಠಾನ ಮಾಡಲು ಕೇಂದ್ರ ಹಾಗೂ ರಾಜ್ಯ ಸರಕಾರ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ. ಗೋದಾವರಿ ನದಿ ತಟದಿಂದ
ಕನ್ಯಾಕುಮಾರಿ ತನಕ ಆರು ರಾಜ್ಯಗಳನ್ನು ಒಳಗೊಂಡಂತೆ ಇರುವ ಪಶ್ಚಿಮ ಘಟ್ಟದ ಸಾಲು ಪ್ರಪಂಚದ ಅತ್ಯಮೂಲ್ಯ ಮತ್ತು ಅತೀ ಸೂಕ್ಷ್ಮ ಪ್ರದೇಶ. ಮಳೆ ಕಾಡು ಹಾಗೂ ಪ್ರಪಂಚದ ಎಲ್ಲಾ ರೀತಿಯ ಸಸ್ಯ ಮತ್ತು ಪ್ರಾಣಿ ಸಂಕುಲಗಳ ಆಗರವಾಗಿರುತ್ತದೆ. ಈ ಪರಿಸರದ ಉಳಿವಿಗೆ ಪರಿಸರ ಸೂಕ್ಷ್ಮ ವರದಿ ಜಾರಿ ಅತೀ ಅಗತ್ಯ. ಕಳೆದ ಒಂದೂವರೆ ದಶಕಗಳಿಂದ ಪರಿಸರ ಸೂಕ್ಷ್ಮ ವರದಿಯನ್ನು ಜನ ವಿರೋದಿಸಿದ ಕಾರಣ ಸೂಕ್ಷ್ಮ ಪ್ರದೇಶದಲ್ಲಿ ಲೀಸ್ ಆಧಾರದಲ್ಲಿ ಭೂಮಿ ಪಡೆದ ಶ್ರೀಮಂತರು ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ವಿವಿಧ ಅವೈಜ್ಞಾನಿಕ ಯೋಜನೆ ಅನುಷ್ಠಾನದ ಮೂಲಕ ಹಲವು ಮಂದಿ ಲಾಭ ಪಡೆಯುತ್ತಿದ್ದಾರೆ. ಆದ್ದರಿಂದ ಕಸ್ತೂರಿ ರಂಗನ್ ವರದಿಯನ್ನು ಜಾರಿ ಮಾಡಲು ನಮ್ಮ ಸಮಿತಿಯ ಸಂಪೂರ್ಣ ಬೆಂಬಲ ಇರುತ್ತದೆ. ಆದರೆ ಈ ವರದಿಯಲ್ಲಿ ಕೆಲವೊಂದು ಬೇಡಿಕೆಗಳನ್ನು ಸೇರ್ಪಡೆಗೊಳಿಸಬೇಕು ಅವರು ಎಂದು ಹೇಳಿದರು.
ಈ ವರದಿಯನ್ನು ಪರಿಸ್ಕರಿಸಲು ಸ್ಥಳೀಯ ನಾಗರಿಕರ ಭಾಗವಹಿಸುವಿಕೆಗೆ ಮತ್ತು ಗ್ರಾಮ ಪಂಚಾಯತ್ಗಳ ಭಾಗವಹಿಸುವಿಕೆಗೆ ಅವಕಾಶ ಕೊಡತಕ್ಕದ್ದು. ಆಯಾಯ ರಾಜ್ಯದ ಆಯಾಯ ಮಲೆನಾಡಿನ ಜಿಲ್ಲೆಗಳ ಹಾಗು ತಾಲೂಕು (ಡಿಸ್ಟ್ರಿಕ್ಟ್ ಕೌನ್ಸಿಲ್ ) ರಕ್ಷಣೆಯನ್ನು ಈಶಾನ್ಯ ರಾಜ್ಯಗಳಂತೆ ಮಾಡಬೇಕು. ಮತ್ತು ಆ ಪ್ರಕಾರ ಪಶ್ಚಿಮ ಘಟ್ಟದ ರಕ್ಷಣೆಯಲ್ಲಿ ಇಲ್ಲಿನ ಭಾಷೆ, ಆಹಾರ ಪದ್ಧತಿ, ಧಾರ್ಮಿಕ ಪದ್ಧತಿ, ಸಂಸ್ಕೃತಿ ಉಳಿಸುವಿಕೆಗೆ ಈ ವರದಿಯಲ್ಲಿ ಸೇರ್ಪಡೆ ಮಾಡಿ ಆಯಾಯ ಜಿಲ್ಲೆಗಳಿಗೆ ಕೊಡಬೇಕು. ಈ ಹಿಂದಿನ ಅನುಭೋಗ ಹಕ್ಕು ಜಮ್ಮ ಕಾನ ಬಾನ ಸೊಪ್ಪಿನಬೆಟ್ಟ ಈ ಹಿಂದಿನಂತೆ ಊರ್ಜಿತಗೊಳಿಸಿ 100 ಮೀಟರ್ಗೆ ನಿರ್ಬಂದಿಸಬೇಕು. ಈ ಯೋಜನೆ ಶೀಘ್ರದಲ್ಲಿ ಜಾರಿಗೊಳಿಸಿ ಈ ಯೋಜನೆ 6 ನೇ ಕರಡು ಮಸೂದೆಯಲ್ಲಿ ಸಂವಿಧಾನದ 371 ವಿಧಿಯನ್ನು ಅಳವಡಿಸಬೇಕು. ಇಲ್ಲಿ ಎಲ್ಲಾ ತರದ ರಸ್ತೆ ಡ್ಯಾಂ ಕಟ್ಟಡಗಳ ಕಟ್ಟುವಿಕೆಗೆ ಸ್ಥಳೀಯ ತಿಳಿದ ವೈಜ್ಞಾನಿಕ ಜನರನ್ನು ಸೇರಿಸಿ ಮಾದರಿ ಕರಡು ಮಾಡಿ ಯಥಾವತ್ತಾಗಿ ಅಭಿವೃದ್ಧಿ ಮಾಡಿ ನಿಬಂಧನೆಗಳನ್ನು ಸೇರ್ಪಡೆ ಮಾಡಬೇಕು. 2000 ಇಸವಿಯಿಂದ ಮಲೆನಾಡಿನ ಸೂಕ್ಷ್ಮ ಪ್ರದೇಶದಲ್ಲಿ ಪರಭಾರೆ ಮಾಡುವುದನ್ನು ರದ್ದು ಮಾಡುವುದು ಸೇರಿದಂತೆ ಪರಿಸರ ಪೂರಕ ಅಂಶಗಳನ್ನು ಸೇರಿಸಿ ಜನ ಸಾಮಾನ್ಯರಿಗೆ ಸಮಸ್ಯೆ ಉಂಟಾಗದ ರೀತಿಯಲ್ಲಿ ಕೂಡಲೇ ಕಸ್ತೂರಿ ರಂಗನ್ ವರದಿಯನ್ನು ಕೇಂದ್ರ ಹಾಗು ರಾಜ್ಯ ಸರಕಾರ ಜಾರಿಗೊಳಿಸಬೇಕು ಎಂದು
ಪ್ರದೀಪ್ ಕುಮಾರ್ ಹಾಗೂ ಅಶೋಕ್ ಎಡಮಲೆ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಚೇತನ್ ಪಾನತ್ತಿಲ ಉಪಸ್ಥಿತರಿದ್ದರು