ಚಿತ್ರಗಳು:ಶಿವಸುಬ್ರಹ್ಮಣ್ಯ ಕಲ್ಮಡ್ಕ.
ವಸಂತ ಕಾಲದಲ್ಲಿ ಪ್ರಣಯ ಗೀತೆ ಹಾಡುತ್ತಿವೆ.. ಈ ಜೋಡಿ ಹಕ್ಕಿಗಳು..! ಈ ಲೋಕದ ಯಾವುದೇ ಪರಿವಿಲ್ಲದೆ ತಮ್ಮ ಪ್ರೇಮಲೋಕದಲ್ಲಿ ವಿಹರಿಸುವ ಜೋಡಿ ಹಕ್ಕಿಗಳು ಸದ್ದಿಲ್ಲದೆ ಎಲ್ಲೋ ಅವಿತು ಕುಳಿತ ಕ್ಯಾಮರಾ ಕಣ್ಣುಗಳಲ್ಲಿ ಸೆರೆಯಾಗಿದೆ.ಗಿಳಿಯಂತೆ ಮುದ್ದಿಸುವ ಹಿನ್ನೋಟದ ಹಸಿರಿಗೆ ಸೋಪಾನ ಹಾಸುವ ಪ್ರಣಯದ ಲಹರಿಯಲ್ಲೇ
ಕಣಿವೆ, ಕಾಡು, ಬೆಟ್ಟ ದಾಟಿ ಹಾರುತ್ತ ಹಾರುತ್ತಾ ಮೈಮರೆಯುವ ಈ
ಮಂಗಟ್ಟೆ ಜೋಡಿ ಹಕ್ಕಿಗಳ ಪ್ರೇಮ ಕಾವ್ಯದ ಅದ್ಭುತ ದೃಶ್ಯಗಳನ್ನು ಹಿರಿಯ ಪತ್ರಕರ್ತರು ಹಾಗು ಪರಿಸರ, ವನ್ಯಜೀವಿ ಛಾಯಾ ಚಿತ್ರಗಾರರಾದ ಶಿವಸುಬ್ರಹ್ಮಣ್ಯ ಕಲ್ಮಡ್ಕ ಅವರು ಸೆರೆ ಹಿಡಿದಿದ್ದಾರೆ.
ಮಂಗಟ್ಟೆ ಜೋಡಿಯ ಪ್ರಣಯ ಸಲ್ಲಾಪದ ಸಾವಿರಕ್ಕೂ ಅಧಿಕ ಚಿತ್ರಗಳು ಇವರ ಕ್ಯಾಮರಾ ಸೆರೆ ಹಿಡಿದಿದೆ.ಅದರಲ್ಲಿ ಕೆಲವನ್ನು ಇಲ್ಲಿ ‘ಸುಳ್ಯ ಮಿರರ್’ ಓದುಗರಿಗಾಗಿ ಪ್ರಕಟಿಸುತ್ತಿದ್ದೇವೆ.

ಪಶ್ಚಿಮ ಘಟ್ಟದ ಶರಾವತಿ ಕಣಿವೆ ಪ್ರದೇಶದ ಖಗಾಲಯ ಪಕ್ಷಿಧಾಮದಲ್ಲಿ ಈ ಜೋಡಿಗಳನ್ನು ಸೆರೆ ಹಿಡಿಯಲಾಗಿದೆ.
ಪ್ರೇಮ ಸಲ್ಲಾಪದ ಝಲಕ್:
ಗಂಡು ಮಲೆ ದಾಸ ಮಂಗಟ್ಟೆಯ ಪ್ರೀತಿಗೆ ಮನಸೋತು ಗಂಡಿಗೆ ಅಷ್ಟೇ ಪ್ರೀತಿಯಿಂದ ಸ್ಪಂದಿಸುತ್ತಿರುವ ಹೆಣ್ಣು ಮಂಗಟ್ಟೆ. ಮುಂಜಾನೆಯ ಸ್ವರ್ಣ ಬೆಳಕಿನೊಂದಿಗೆ ಆರಂಭವಾಗುವ ಗಂಡು ಹೆಣ್ಣಿನ ಪ್ರಣಯದ ಗೀತೆ ಅಡವಿಯಲ್ಲಿ ದಿನವಿಡೀ ಪ್ರತಿಧ್ವನಿಸುತ್ತದೆ. ಪಶ್ಚಿಮ ಘಟ್ಟದ ಅರಣ್ಯದೊಳಗಿನ ಜೀವ ವೈವಿಧ್ಯದ ಒಂದು ಭಾಗವಿದು.

ಮಲೆ ದಾಸ ಮಂಗಟ್ಟೆ:
ಮಲೆ ದಾಸ ಮಂಗಟ್ಟೆ (Malabar pied Hornbill) ಪಶ್ಚಿಮ ಘಟ್ಟಗಳಲ್ಲಿ ಕಂಡುಬರುವ ವಿಶಿಷ್ಟ ದೊಡ್ಡ ಗಾತ್ರದ ಹಕ್ಕಿಯಾಗಿದ್ದು, ದೊಡ್ಡ ಕೊಕ್ಕು, ಕಪ್ಪು-ಬಿಳಿ ಮೈಬಣ್ಣ ಮತ್ತು ಬಿಳಿ ಬಾಲ ಹೊಂದಿದೆ. ಶರಾವತಿ ಕಣಿವೆ, ಕಾಳಿ ನದಿ ಬಳಿಯ ಅರಣ್ಯ, ದಾಂಡೇಲಿ, ಮಹಾರಾಷ್ಟ್ರದಲ್ಲಿ ಮಲೆ ದಾಸ ಮಂಗಟ್ಟೆಹಕ್ಕಿಗಳು ಇವೆ.
ಮರಗಳ ಹಣ್ಣುಗಳನ್ನು ತಿನ್ನುವ ಇವು, ಗಟ್ಟಿ ಧ್ವನಿಯಲ್ಲಿ ಕೂಗುತ್ತವೆ ಮತ್ತು ಹಾರುವಾಗ ರೆಕ್ಕೆ ಬಡಿದು ತೇಲುತ್ತವೆ. ಇವು ಹೆಚ್ಚಾಗಿ ಜೋಡಿಗಳಲ್ಲಿ ಕಂಡುಬರುತ್ತವೆ. ಒಂದು ಜೋಡಿ ಜೀವನಪೂರ್ತಿ ಜತೆಯಾಗಿಯೇ ಇರುತ್ತವೆ. ಒಂದು ಬಾರಿ ಜೊಡಿಯಾದರೆ ಮತ್ತೆ ಸಂಸಾರದ ಜಗಳದ ಪ್ರಶ್ನೆಯೇ ಇಲ್ಲ!

ಸುಮಾರು 45-58 ಸೆಂ.ಮೀ ಉದ್ದ, ಉದ್ದನೆಯ ಕೊಕ್ಕು ಇರುತ್ತದೆ.ಆದರೆ ಕೊಕ್ಕಿನ ಮೇಲೆ ಕೊಂಬಿನಂತಹ ರಚನೆ ಇರುವುದೇ ಮಲೆ ದಾಸ ಮಂಗಟ್ಟೆಯ ಆಕರ್ಷಣೆ. ದೊಡ್ಡ ಮರಗಳ ಪೊಟರೆಗಳಲ್ಲಿ ಗೂಡು ಮಾಡುತ್ತವೆ.ಗಂಡು ಹಕ್ಕಿಯು ಹೆಣ್ಣು ಹಕ್ಕಿಯನ್ನು ಗೂಡಿನೊಳಗೆ ಹಾಕಿ ಮುಚ್ಚಿ, ಆಹಾರ ಪೂರೈಸುತ್ತದೆ. ದಟ್ಟವಾದ ಕಾಡುಗಳು, ಕಾಫಿ ಮತ್ತು ಅಡಿಕೆ ತೋಟಗಳಲ್ಲಿ ಇವುಗಳ ವಾಸ. ಈ ಹಕ್ಕಿಗಳು ಹೆಚ್ಚಾಗಿ ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಕಂಡುಬರುವ ಸ್ಥಳೀಯ ಪ್ರಭೇದಗಳಾಗಿವೆ.

(ಶಿವಸುಬ್ರಹ್ಮಣ್ಯ ಕಲ್ಮಡ್ಕ ಅವರು
ಹಿರಿಯ ಪತ್ರಕರ್ತರು, ಪರಿಸರ ಹಾಗೂ ವನ್ಯಜೀವಿ ಛಾಯಾ ಚಿತ್ರಗಾರರು)








