ಮುಂಬೈ: ನಾಟಕೀಯ ಬೆಳವಣಿಗೆಯೊಂದರಲ್ಲಿ ನ್ಯಾಷನಲಿಷ್ಟ್ ಕಾಂಗ್ರೆಸ್ ಪಾರ್ಟಿ (ಎನ್ಸಿಪಿ) ನಾಯಕ ಅಜಿತ್ ಪವಾರ್ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ ಅವರ ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ಘೋಷಿಸಿದ್ದಾರೆ. ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಅಜಿತ್ ಪವಾರ್ ಸರಕಾರಕ್ಕೆ ಸೇರ್ಪಡೆಯಾಗಿದ್ದಾರೆ. 10ಕ್ಕೂ ಹೆಚ್ಚು ಶಾಸಕರ ಜೊತೆ ಬೆಂಬಲ ನೀಡಿರುವ ಅಜಿತ್ ಪವಾರ್, ಜೊತೆ
ಒಂಭತ್ತು ಮಂದಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಅಜಿತ್ ಪವಾರ್ ಜೊತೆ ಎನ್ಸಿಪಿ ನಾಯಕ ಛಗನ್ ಭುಜಬಲ್ ಹಾಗೂ ದಿಲೀಪ್ ವಾಲ್ಸೆ, ಧನಂಜಯ್ ಮುಂಡೆ, ಹಸನ್ ಮುಶ್ರಿಫ್, ಧರ್ಮ್ರಾವ್ ಬಾಬಾ, ಆದಿತಿ ತಟಕಾರೆ, ಅನಿಲ್ ಪಾಟೀಲ, ಸಂಜಯ್ ಬನ್ಸೊಡೆ ಸೇರಿ 9 ಎನ್ಸಿಪಿ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ರಮೇಶ್ ಬೈಸ್ ಅವರು ಪ್ರಮಾಣವಚನ ಬೋಧಿಸಿದರು.ಇನ್ನೊಂದೆಡೆ ಅಜಿತ್ ಪವಾರ್ ಅವರು ತಮಗೆ 40 ಶಾಸಕರ ಬೆಂಬಲ ಇದೆ ಎಂದು ಹೇಳಿಕೊಂಡಿದ್ದಾರೆ.
ಇದಕ್ಕೂ ಮುನ್ನ ಭಾನುವಾರ ಬೆಳಿಗ್ಗೆ ಅಜಿತ್ ಪವಾರ್ ಅವರು ಎನ್ಸಿಪಿ ಶಾಸಕರ ಸಭೆ ಕರೆದಿದ್ದರು. ಆ ನಂತರ ಅವರು ಶಿಂದೆ ಸರ್ಕಾರಕ್ಕೆ ಬೆಂಬಲ ನೀಡುವ ಘೋಷಣೆ ಮಾಡಿದರು. ಇತ್ತೀಚೆಗೆ ಎನ್ಸಿಪಿ ಅಧ್ಯಕ್ಷ ಶರದ್ ಪವಾರ್ ಅವರು ಅಧ್ಯಕ್ಷ ಸ್ಥಾನ ಬೇಡ ಎಂದು ಹೇಳಿದ್ದರು. ಅದಾದ ನಂತರ ಅಜಿತ್ ಪವಾರ್ ಅವರು ಎನ್ಸಿಪಿಯ ಕಾರ್ಯಾಧ್ಯಕ್ಷರಾಗಿ ಶರದ್ ಅವರಿಗೆ ಅಧ್ಯಕ್ಷರಾಗಿ ಮುಂದುವರೆಯುವಂತೆ ಮನವೊಲಿಸಿದ್ದರು.
2022 ರ ಜೂನ್ನಲ್ಲಿ ನಡೆದಿದ್ದ ರಾಜಕೀಯ ಬೆಳವಣಿಗೆಗಳಿಂದ ಶಿವಸೇನೆಯ ಏಕನಾಥ್ ಶಿಂದೆ ಅವರು ತಮ್ಮ ಗುಂಪಿನೊಂದಿಗೆ ಎನ್ಸಿಪಿ, ಶಿವಸೇನೆ, ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಕಿತ್ತೊಗೆದು ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿದ್ದರು.ಏಕನಾಥ ಶಿಂದೆ ಜೂನ್ 30, 2022 ರಂದು ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು. ಅದಾದ ಒಂದು ವರ್ಷದ ಬಳಿಕ ಎನ್ಸಿಪಿಯ ಅಜಿತ್ ಪವಾರ್ ಸರಕಾರ ಸೇರಿದ್ದಾರೆ. 2019ರ ಅಕ್ಟೋಬರ್ನಲ್ಲಿ ಮಹಾರಾಷ್ಟ್ರ ವಿಧಾನಸಭೆಯ 288 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಅದರಲ್ಲಿ ಬಿಜೆಪಿ 105, ಶಿವಸೇನೆ 56, ಎನ್ಸಿಪಿ 54, ಕಾಂಗ್ರೆಸ್ 44 ಹಾಗೂ ಇತರರು 29 ಸ್ಥಾನಗಳನ್ನು ಗೆದ್ದಿದ್ದರು. ಆ ಬಳಿಕ ಮಹಾರಾಷ್ಟ್ರದಲ್ಲಿ ಹಲವು ರಾಜಕೀಯ ಹೈಡ್ರಾಮಾಗಳು ನಡೆದಿದ್ದವು.