ಮೈಸೂರು: ಮಂಗಳೂರು ಡ್ರ್ಯಾಗನ್ಸ್ ‘ಮಹಾರಾಜ ಟ್ರೋಫಿ’ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಚೊಚ್ಚಲ ಪ್ರಶಸ್ತಿ ಎತ್ತಿ ಹಿಡಿಯಿತು.
ಇಲ್ಲಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ಗುರುವಾರ ರಾತ್ರಿ ನಡೆದ ಫೈನಲ್ನಲ್ಲಿ 155 ರನ್ ಗುರಿ ಬೆನ್ನತ್ತಿದ ಮಂಗಳೂರು 10.4 ಓವರ್ಗಳಲ್ಲಿ 2 ವಿಕೆಟ್ಗೆ 85 ರನ್ ಗಳಿಸಿದ್ದಾಗ
ಪಂದ್ಯಕ್ಕೆ ಮಳೆ ಅಡ್ಡಿಯಾಯಿತು. ಒಂದು ಗಂಟೆ ನಂತರವೂ ಮಳೆ ಮುಂದುವರಿದಾಗ ಅಂಪೈರ್ಗಳು ಪಂದ್ಯ ಮುಗಿಸುವ ನಿರ್ಣಯ ಕೈಗೊಂಡರು. ವಿಜೆಡಿ ನಿಯಮದಂತೆ ಮಂಗಳೂರು 15 ರನ್ ಅಂತರದಿಂದ ಗೆಲುವು ಸಾಧಿಸಿತು.ಮಂಗಳೂರು ತಂಡದ ಆರಂಭಿಕರಾದ ಲೋಚನ್ ಗೌಡ (18) ಹಾಗೂ ಬಿ.ಆರ್. ಶರತ್ (49 ರನ್, 35 ಎ, 4X4, 6X3) ಉತ್ತಮ ಆರಂಭ ಒದಗಿಸಿದರು. ಶರತ್ ಅರ್ಧಶತಕದ ಹೊಸ್ತಿಲಲ್ಲಿ ಎಡವಿದರು. ರಿತೇಶ್ ಭಟ್ಕಳ್ 14ಕ್ಕೆ 2 ವಿಕೆಟ್ ಪಡೆದರು.
ಉತ್ತಮ ಆರಂಭ: ನಾಯಕ ದೇವದತ್ತ ಪಡಿಕ್ಕಲ್ ಹಾಗೂ ಮೊಹಮ್ಮದ್ ತಾಹಾ ಜೋಡಿಯು ಹುಬ್ಬಳ್ಳಿಗೆ ಕೇವಲ 2.3 ಓವರ್ಗಳಲ್ಲಿ 38 ರನ್ಗಳ ಅಬ್ಬರದ ಆರಂಭ ಒದಗಿಸಿತು. ಆದರೆ ಬಳಿಕ ಡ್ರ್ಯಾಗನ್ಸ್ನ ಬೌಲರ್ಗಳ ಕರಾರುವಕ್ ಎಸೆತಗಳ ಎದುರು ಹುಬ್ಬಳ್ಳಿ ಬ್ಯಾಟರ್ಗಳು ತಿಣುಕಾಡಿದರು.
ಕೆ.ಎಲ್. ಶ್ರೀಜಿತ್ ಅರ್ಧಶತಕದ ಮೂಲಕ ( 52 ರನ್, 45 ಎ, 4X4, 6X1 ) ತಂಡಕ್ಕೆ ಆಸರೆ ಆದರು. ಕೊನೆಗೆ ಹುಬ್ಬಳ್ಳಿ 20 ಓವರ್ಗಳಲ್ಲಿ 8 ವಿಕೆಟ್ಗೆ 154 ರನ್ ಗಳಿಸಿತು. ಮಹಾರಾಜ ಟ್ರೋಫಿಯ ನಾಲ್ಕನೇ ಆವೃತ್ತಿ ಇದಾಗಿದ್ದು, ಹುಬ್ಬಳ್ಳಿ ಟೈಗರ್ಸ್ ಎರಡನೇ ಬಾರಿಗೆ ಫೈನಲ್ ತಲುಪಿತ್ತು. 2023ರಲ್ಲಿ ತಂಡವು ಕಪ್ ಎತ್ತಿ ಹಿಡಿದಿತ್ತು.
ಮಂಗಳೂರು ಡ್ರ್ಯಾಗನ್ಸ್ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿತ್ತು. ಬಿ.ಆರ್. ಶರತ್ ಪಂದ್ಯದ ಆಟಗಾರ ಹಾಗೂ ದೇವದತ್ತ ಪಡಿಕ್ಕಲ್ ಸರಣಿ ಆಟಗಾರ ಪ್ರಶಸ್ತಿ ಪಡೆದರು.












