ಲಖನೌ: ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ ನಡೆಯುತ್ತಿರುವ ಜಗತ್ತಿನಲ್ಲೇ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮವಾದ ಮಹಾ ಕುಂಭಮೇಳವು ಮಹಾ ಶಿವರಾತ್ರಿಯ ದಿನವಾದ ಇಂದು (ಬುಧವಾರ) ಸಂಪನ್ನಗೊಳ್ಳಲಿದೆ.144 ವರ್ಷಕ್ಕೆ ಒಮ್ಮೆ ಮಹಾಕುಂಭಮೇಳ ನಡೆಯುತ್ತದೆ. ತ್ರಿವೇಣಿ ಸಂಗಮ ಸ್ಥಾನದಲ್ಲಿ ಈ ಬಾರಿಯ ಕೊನೆಯ
‘ಅಮೃತ ಸ್ನಾನ’ ಮಾಡಲು ದೇಶದಾದ್ಯಂತ ಜನರು ಪ್ರಯಾಗರಾಜ್ನತ್ತ ಹರಿದುಬಂದಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ತ್ರಿವೇಣಿ ಸಂಗಮದಲ್ಲಿ ಮಾತ್ರವಲ್ಲದೆ ಇನ್ನಿತರ ಘಾಟ್ಗಳ ಬಳಿ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೋಟ್ಯಂತರ ಜನರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುತ್ತಿದ್ದಾರೆ. ಮಂಗಳವಾರ ಮಧ್ಯಾಹ್ನದಿಂದಲೇ ಸಾಗರೋಪಾದಿಯಲ್ಲಿ ಜನರು ಸಂಗಮಕ್ಕೆ ತೆರಳುವ ದೃಶ್ಯಗಳು ಕಂಡುಬಂದಿದ್ದವು.ಅಂತಿಮ ದಿನದ ‘ಅಮೃತ ಸ್ನಾನ’ಕ್ಕೆ ಮಾಡಿಕೊಳ್ಳಲಾದ ತಯಾರಿಗಳ ಬಗ್ಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಮಂಗಳವಾರ ಪರಿಶೀಲನೆ ನಡೆಸಿದ್ದರು.ಪ್ರಯಾಗರಾಜ್ ಮಾತ್ರವಲ್ಲದೇ ಅಯೋಧ್ಯೆ ಮತ್ತು ವಾರಾಣಸಿಯಲ್ಲಿಯೂ ಭಕ್ತರ ಸಂಖ್ಯೆ ಅತ್ಯಧಿಕವಾಗಿದೆ. ಮಹಾ ಕುಂಭಮೇಳವು ಜನವರಿ 13ರಂದು ಪ್ರಾರಂಭವಾಗಿತ್ತು. ಈ ಬಾರಿ ಕುಂಭಮೇಳಕ್ಕೆ 64 ಕೋಟಿ ಭಕ್ತರು ಬಂದಿದ್ದಾರೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ. ‘ನಿರ್ದಿಷ್ಟ ಅವಧಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದಕ್ಕೆ ಬೃಹತ್ ಸಂಖ್ಯೆಯ ಜನರು ಸೇರಿದ್ದು ಶತಮಾನದ ಅಪರೂಪದ ಘಟನೆಗಳಲ್ಲಿ ಒಂದಾಗಿದೆ’ ಎಂದು ತಿಳಿಸಿದ್ದಾರೆ.