ಮಂಗಳೂರು: ಏ. 26ರಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ನಡೆಯುವ ಚುನಾವಣಾ ಮತದಾನಕ್ಕೆ ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಜ್ಜುಗೊಂಡಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ತಿಳಿಸಿದರು. ಅವರು ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಏ. 23ರ ಮಂಗಳವಾರ ಸಂಜೆ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.ಜಿಲ್ಲೆಯಾದ್ಯಂತ
1,876 ಮತಗಟ್ಟೆಗಳಿದ್ದು, 524 ಸರ್ವಿಸ್ ವೋಟರ್ ಗಳು ಸೇರಿದಂತೆ ಒಟ್ಟು 18,18,127 ಮಂದಿ ಮತದಾರರಿದ್ದಾರೆ. 2,251 ಪ್ರಿಸೈಡಿಂಗ್ ಅಧಿಕಾರಿಗಳು, 2,251 ಎಪಿಆರ್ಓಗಳು, 4,502 ಪಿಓಗಳು, 2,251 ಗ್ರೂಪ್ ಡಿ ನೌಕರರು ಸೇರಿದಂತೆ ಒಟ್ಟಾರೆ 11,255 ಅಧಿಕಾರಿ, ಸಿಬ್ಬಂದಿಗಳು ಈ ಚುನಾವಣೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
40 ಸಖಿ, ವಿಕಲಚೇತನರೇ ನಿರ್ವಹಿಸುವ 8, ವಿಷಯಾಧಾರಿತ 8, ಯುವ ಮತದಾರರ 8 ಹಾಗೂ ಪಾರಂಪರಿಕತೆ ಬಿಂಬಿಸುವ 8 ಬೂತ್ ಗಳು ಸೇರಿದಂತೆ ಒಟ್ಟಾರೆ 72 ಮಾದರಿ ಮತಗಟ್ಟೆಗಳನ್ನು ಈ ಬಾರಿ ನಿರ್ಮಿಸಲಾಗಿದೆ, ವಿಕಲಚೇತನರೇ ನಿರ್ವಹಿಸುವ ಮತಗಟ್ಟೆಗಳಿಗೆ ಪ್ರತ್ಯೇಕ ವಾಹನಗಳ ವ್ಯವಸ್ಥೆ ಮಾಡಲಾಗಿದೆ, 938 ಮತಗಟ್ಟೆಗಳಿಗೆ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ, 200 ಮೈಕ್ರೋ ಒಬ್ಸರ್ವೆರ್ ಗಳನ್ನು ನೇಮಕ ಮಾಡಲಾಗಿದೆ, ಒಟ್ಟು 171 ಕ್ರಿಟಿಕಲ್ ಮತಗಟ್ಟೆಗಳನ್ನು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.
72 ಗಂಟೆಗಳ ಅವಧಿಯಲ್ಲಿ ಮಾದರಿ ನೀತಿ ಸಂಹಿತೆಗಾಗಿ 24 ವಿಡಿಯೋ ಸರ್ವೆಲೆನ್ಸ್ ತಂಡ, 72 ಫ್ಲೈಯಿಂಗ್ ಸ್ಕ್ವಾಡ್, 69 ಸ್ಟ್ಯಾಟಿಸ್ಟಿಕ್ಸ್ ಸರ್ವೆಲೆನ್ಸ್ ತಂಡ, 186 ಸೆಕ್ಟರ್ ಅಧಿಕಾರಿಗಳು, 8 ವಿಡಿಯೋ ವಿವಿಂಗ್ ಟೀಮ್, 8 ಮಾದರಿ ನೀತಿ ಸಂಹಿತೆ ತಂಡ, 8 ವೆಚ್ಚ ನಿರ್ವಹಣಾ ತಂಡ ಹಾಗೂ 8 ಸಹಾಯಕ ಖರ್ಚು ವೆಚ್ಚಗಳ ವೀಕ್ಷಕರನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.
ಮತಗಟ್ಟೆಗಳಲ್ಲಿ ಮತದಾರರ ಸಹಾಯ ಕೇಂದ್ರ ಸೌಲಭ್ಯಕ್ಕಾಗಿ ಪ್ರತಿ ಮತಗಟ್ಟೆಗಳಲ್ಲಿ ಮತದಾರರ ಕ್ರಮ ಸಂಖ್ಯೆ ಮತ್ತು ಮತಗಟ್ಟೆಗಳನ್ನು ಗುರುತಿಸಲು ಸಹಾಯವಾಗುವಂತೆ ಬಿಎಲ್ಓ ಅವರನ್ನು ಒಳಗೊಂಡ ಮತದಾರರ ಸಹಾಯ ಕೇಂದ್ರ ತೆರೆಯಲಾಗಿದೆ. ಜಿಲ್ಲೆಯ ಎಲ್ಲಾ 1,876 ಮತಗಟ್ಟೆಗಳಲ್ಲಿ ಮೂಲಭೂತ ಸೌಲಭ್ಯ ಒದಗಿಸಲಾಗಿದೆ ಎಂದರು.
ಮನೆಮನೆ ಮತದಾನದಲ್ಲಿ 85 ವರ್ಷ ಮೇಲ್ಪಟ್ಟ 6,053 ಮತದಾರರ ಪೈಕಿ 5,878 ಮಂದಿ ಮತಚಲಾಯಿಸಿದ್ದರೆ. 1,975 ವಿಕಲಚೇತನ ಮತದಾರರ ಪೈಕಿ 1,929 ಮಂದಿ ಮತಚಲಾಯಿಸಿರುತ್ತಾರೆ.
ಏಪ್ರಿಲ್ 26ರ ಬೆಳಿಗ್ಗೆ 7 ಸಂಜೆ 6 ರವರೆಗೆ ಮತದಾನ ನಡೆಯಲಿದ್ದು, ಈಗಾಗಲೇ ಮನೆ ಮನೆಗೆ
ವೋಟರ್ ಸ್ಲಿಪ್ ಅನ್ನು ವಿತರಿಸಲಾಗಿದೆ, ಅದರೊಂದಿಗೆ ಮತದಾರರು ಮತದಾನ ಮಾಡಲು ಮತದಾರರ ಪಟ್ಟಿಯಲ್ಲಿ ಹೆಸರು ಇದ್ದು ಮತದಾರರು ಎಪಿಕ್ ಕಾರ್ಡ್ ತೋರಿಸಿ ಮತದಾನ ಮಾಡಬಹುದು ಹಾಗೂ ಎಪಿಕ್ ಕಾರ್ಡ್ ಹೊರತುಪಡಿಸಿ ಕೇಂದ್ರ ಚುನಾವಣಾ ಆಯೋಗವು ನಿಗದಿಪಡಿಸಿರುವ ಆಧಾರ್ ಕಾರ್ಡ್, ಎಂಜಿ ನರೇಗಾ ಜಾಬ್ ಕಾರ್ಡ್, ಬ್ಯಾಂಕ್ ಅಥವಾ ಅಂಚೆ ಕಚೇರಿಯ ಪಾಸ್ ಬುಕ್, ಅಂಚೆ ವಿಮೆ, ಚಾಲನ ಪರವಾನಿಗೆ, ಪಾನ್ ಕಾರ್ಡ್, ಆರ್ ಜಿ ಐ ನೀಡಿರುವ ಸ್ಮಾರ್ಟ್ ಕಾರ್ಡ್, ಪಾಸ್ಪೋರ್ಟ್, ಪಿಂಚಣಿ ದಾಖಲಾತಿ, ಕೇಂದ್ರ ಅಥವಾ ರಾಜ್ಯ ಸರ್ಕಾರದ ಸೇವಾ ಗುರುತಿನ ಚೀಟಿ, ಎಂಪಿ, ಎಂ ಎಲ್ ಎ, ಎಂಎಲ್ಸಿ ಅವರಿಗೆ ವಿತರಿಸಲಾಗಿರುವ ಅಧಿಕೃತ ಗುರುತಿನ ಚೀಟಿಗಳು, ಯುನಿಕ್ ಡಿಸಬೆಲಿಟಿ ಐಡಿ ಕಾರ್ಡ್ ತೋರಿಸಿ ಮತ ಚಲಾಯಿಸಬಹುದಾಗಿದೆ.
ಮತಗಟ್ಟೆಯ 200 ನೂರು ಮೀಟರ್ ಪ್ರದೇಶದ ಒಳಗೆ ಅಭ್ಯರ್ಥಿಗಳ ಚುನಾವಣಾ ಬೂತ್ ಸ್ಥಾಪಿಸಲು ಅವಕಾಶವಿರುವುದಿಲ್ಲ ಮತ್ತು ಚುನಾವಣಾ ಸಂಬಂಧಿಸಿದ ಪ್ರಚಾರ ಅಥವಾ ಚಟುವಟಿಕೆಗಳಿಗೆ ಅವಕಾಶವಿರುವುದಿಲ್ಲ ಮತದಾನದ ದಿನದಂದು ಮತಗಟ್ಟೆಯೊಳಗೆ ಮೊಬೈಲ್ ಫೋನ್ ಗಳನ್ನು ಚುನಾವಣಾ ಕರ್ತವ್ಯ ಅಧಿಕಾರಿ ಹೊರತುಪಡಿಸಿ ಉಳಿದವರು ಕೊಂಡೊಯ್ಯುವಂತಿಲ್ಲ ಅಲ್ಲದೆ ಮತದಾರರಿಗೆ ಮತಗಟ್ಟೆಗಳಲ್ಲಿಯೇ ಮೊಬೈಲ್ ಫೋನ್ ಇರಿಸಲು ಮೊಬೈಲ್ ಫೋನ್ ಡೆಪಾಸಿಟರ್ ಸೆಂಟರ್ ಗಳನ್ನು ತೆರೆಯಲು ಕ್ರಮವಹಿಸಲಾಗುವುದು,
ಮತಗಟ್ಟೆಯ 100 ಮೀಟರ್ ಪ್ರದೇಶದೊಳಗೆ ಯಾವುದೇ ಚುನಾವಣಾ ಪ್ರಚಾರದ ಪೋಸ್ಟರ್, ಬ್ಯಾನರ್ ಇರುವಂತಿಲ್ಲ, ಅಂತರಾಜ್ಯ ಗಡಿ ಪ್ರದೇಶಗಳಲ್ಲಿ ಎಫ್ ಎಸ್ ಟಿ ತಂಡಗಳಿಂದ ಮತ್ತು ಚೆಕ್ ಪೋಸ್ಟ್ ಗಳಲ್ಲಿ ಎಸ್ ಎಸ್ ಟಿ ತಂಡಗಳಿಂದ ಭದ್ರತಾ ಮತ್ತು ಚುನಾವಣಾ ಅಕ್ರಮ ಚಟುವಟಿಕೆ ದೃಷ್ಟಿಯಿಂದ ಹೆಚ್ಚಿನ ಕಣ್ಗಾವಲು ಕೈಗೊಳ್ಳಲಾಗಿದೆ. ಇವಿಎಂ ಮತ್ತು ವಿವಿಪ್ಯಾಟ್ ಸಾಗಾಣಿಕ ವಾಹನಗಳಿಗೆ ಭದ್ರತಾ ಹಿತದೃಷ್ಟಿಯಿಂದ ಜಿಪಿಎಸ್ ಅಳವಡಿಸಲಾಗಿದೆ ಎಂದು ಹೇಳಿದರು.ಮತದಾನ ಮುಕ್ತಾಯಗೊಳ್ಳುವ 48 ಗಂಟೆಗಳ ಮುಂಚೆ ಬಹಿರಂಗ ಪ್ರಚಾರವನ್ನು ಮುಕ್ತಾಯಗೊಳಿಸಬೇಕು ಅಂದರೆ ಏಪ್ರಿಲ್ 24ರ ಸಂಜೆ 6 ಗಂಟೆಗೆ ಸಾರ್ವಜನಿಕ ಸಭೆಗಳು, ಮೆರವಣಿಗೆಗಳು ಇತ್ಯಾದಿ ಬಹಿರಂಗ ಪ್ರಚಾರವನ್ನು ಮುಕ್ತಾಯಗೊಳಿಸಬೇಕು ಅಲ್ಲದೇ ಚುನಾವಣಾ ಬಹಿರಂಗ ಪ್ರಚಾರ ಮುಕ್ತಾಯವಾದ ಗಡುವಿನ ನಂತರ ಚುನಾವಣಾ ಕ್ಷೇತ್ರದ ಮತದಾರರಲ್ಲದ ರಾಜಕೀಯ ಕಾರ್ಯಕರ್ತರು ಆ ಕ್ಷೇತ್ರದಲ್ಲಿ ಉಳಿಯುವಂತಿಲ್ಲ, ಹೊರಗಿನಿಂದ ಆಗಮಿಸಿದ ಮತದಾರರಲ್ಲದ ರಾಜಕೀಯ ಕಾರ್ಯಕರ್ತರು, ಮುಖಂಡರು ಬಹಿರಂಗ ಪ್ರಚಾರದ ಗಡುವು ಮುಕ್ತಾಯವಾದ ನಂತರ ಕ್ಷೇತ್ರದಲ್ಲಿ ಇರುವಂತಿಲ್ಲ. ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷದವರು ಮತದಾರರಿಗೆ ಮತಗಟ್ಟೆಗಳಿಗೆ ಕರೆದುಕೊಂಡು ಬರಲು ಮತ್ತು ಹೋಗಲು ವಾಹನದ ವ್ಯವಸ್ಥೆ ಮತ್ತು ತಿಂಡಿ, ಊಟದ ವ್ಯವಸ್ಥೆ ಮಾಡುವಂತಿಲ್ಲ,
ಮತದಾನದ ದಿನದಂದು ಏ. 26ರಂದು ವೇತನ ಸಹಿತ ರಜೆಯನ್ನು ಸರ್ಕಾರ ಘೋಷಿಸಿದ್ದು, ಸರ್ಕಾರಿ ಮತ್ತು ಖಾಸಗಿ ವಲಯಗಳಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲಾ ಅಧಿಕಾರಿ, ನೌಕರರು ಮತದಾನ ಮಾಡಬಹುದಾಗಿದೆ. ಏ. 24ರ ಸಂಜೆ 6 ಏಪ್ರಿಲ್ 26ರ ಮಧ್ಯರಾತ್ರಿವರೆಗೆ ಎಲ್ಲಾ ಹೋಟೆಲ್, ರೆಸ್ಟೋರೆಂಟ್ ಮತ್ತು ಪರವಾನಿಗೆ ಹೊಂದಿರುವ ಅಂಗಡಿಗಳಲ್ಲಿ ಯಾವುದೇ ರೀತಿಯ ಮದ್ಯಪಾನ, ಮಾರಾಟವನ್ನು ನಿಷೇಧ ಮಾಡಲಾಗಿದೆ, ಪರವಾನಗಿ ಪಡೆಯದ ಆವರಣಗಳಲ್ಲಿ ಮದ್ಯ ಶೇಖರಣೆ ನಿಷೇಧವಿದೆ. ಜಿಲ್ಲೆಯಾದ್ಯಂತ ಸಿಆರ್ಪಿಸಿ ಕಲಂ 144ರ ಅನ್ವಯ ಏಪ್ರಿಲ್ 24ರ ಸಂಜೆ 6ರಿಂದ ಪ್ರಾರಂಭಿಸಿ ಏಪ್ರಿಲ್ 26ರ ಮತದಾನ ಮುಕ್ತಾಯದ ವರೆಗೂ ಸೆಕ್ಷನ್ 144 ರಡಿ ಪ್ರತಿಬಂದಕಾಜ್ಞೆಯನ್ನು ಜಿಲ್ಲೆಯಾದ್ಯಂತ ಹೊರಡಿಸಲಾಗಿದೆ. ಅದೇ ರೀತಿ ಏ. 24ರ ಸಂಜೆ 6 ರಿಂದ ಮತದಾನ ಕೊನೆಗೊಳ್ಳುವ ಏ.26ರ ಅವಧಿಯಲ್ಲಿ ಧ್ವನಿವರ್ಧಕಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದರು.
ಪ್ರತಿ ವಿಧಾನಸಭಾ ಕ್ಷೇತ್ರವಾರು ಮತಗಟ್ಟೆ ಕಾರ್ಯ ಪೂರ್ಣಗೊಂಡು ಡಿ ಮಾಸ್ಟರಿಂಗ್ ಕಾರ್ಯ ಪೂರ್ಣಗೊಂಡ ನಂತರ ಡಿ ಮಾಸ್ಟರಿಂಗ್ ಕೇಂದ್ರಗಳಿಂದ ಇವಿಎಂ, ವಿವಿಪ್ಯಾಟ್ ಮತ್ತು ದಾಖಲೆಗಳನ್ನು ಮತ ಎಣಿಕೆ ಕೇಂದ್ರವಾದ ಸುರತ್ಕಲ್ ನ ಎನ್ಐಟಿಕೆಯಲ್ಲಿ ದಾಸ್ತಾನಿ ಇರಿಸಲಾಗುವುದು ಎಂದು ಅವರು ಹೇಳಿದರು.
ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಅನುಪಮ್ ಅಗರ್ವಾಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಸಿ.ಬಿ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಪ್ರೊಬೇಷನರಿ ಐಎಎಸ್ ಅಧಿಕಾರಿ ಮುಕುಲ್ ಜೈನ್, ಅಪರ ಜಿಲ್ಲಾಧಿಕಾರಿ ಸಂತೋಷ್ ಕುಮಾರ್ ಗೋಷ್ಠಿಯಲ್ಲಿದ್ದರು.