*ಚೈತನ್ಯ ರೈ.
ಈ ಭೂಮಿಯಲ್ಲಿ ಕಣ್ಣು ಬಿಡುವ ಪ್ರತಿಯೊಂದು ಮಗುವಿನ ಮೊದಲ ಮಾತು ಅಮ್ಮಾ.. ಆ ಮಗುವಿನ ಪ್ರಪಂಚವೇ ಅಪ್ಪ. ತನ್ನೊಡಲಿನಲ್ಲಿ ಸಾವಿರಾರು ನೋವಿದ್ದರೂ ಮಕ್ಕಳ ಭವಿಷ್ಯ, ಸಂತೋಷ, ಸಾಧನೆಗೆ ಸದಾ ಹಾತೊರೆಯುವ ನಿಷ್ಕಲ್ಮಶ ಜೀವಗಳು ತಂದೆ-ತಾಯಿ. ಪ್ರತಿ ಮನುಷ್ಯನ, ಜೀವಿಯ ಪ್ರತ್ಯಕ್ಷ ದೇವರುಗಳು.
ಮಗು ಗರ್ಭದಲ್ಲಿರುವಾಗಲೇ ಪ್ರೀತಿ ನೀಡಿ ,ಕನಸು ಕಂಡು ಮಗುವಿನ ಪ್ರತಿ ಹೆಜ್ಜೆಗೂ ಬೆಂಗಾವಳಾಗಿ ನಿಲ್ಲುವ ಅದ್ಭುತ ಶಕ್ತಿ ತಂದೆ ತಾಯಿ.
ಆದರೆ ಪ್ರಸ್ತುತ ಸಮಾಜದಲ್ಲಿ ಎಲ್ಲಾ ತಂದೆ ತಾಯಂದಿರು ನೆಮ್ಮದಿ ಸಂತೋಷದಿಂದ ಇದ್ದಾರಾ. ವೃದ್ಧಾಪ್ಯದಲ್ಲಿ ಸಂತೋಷದಿಂದ ನೆಮ್ಮದಿಯಿಂದ, ಖುಷಿ ಖುಷಿಯಾಗಿ ಇರಬೇಕಾದ ಈ ಜೀವಗಳು ಎಲ್ಲೋ
ವೃದ್ಧಾಶ್ರಮ ಸೇರುತ್ತಿರುವುದು ಯಾಕೆ..?
ಪ್ರೀತಿ, ವಾತ್ಸಲ್ಯ ನೀಡಿ ಸಲಹ ಬೇಕಾದ ಮಕ್ಕಳು ಈ ನಿಟ್ಟಿನಲ್ಲಿ ಎಲ್ಲೋ ಎಡವುತ್ತಿದ್ದಾರಾ. ಬದಲಾದ ಜೀವನ ಶೈಲಿ, ಅವಿಭಕ್ತ ಕುಟುಂಬಗಳು ಮರೆಯಾಗಿ ವಿಭಕ್ತ ಕುಟುಂಬಗಳಾಗಿ ಪರಿವರ್ತನೆ ಆಗುತ್ತಿರುವುದು ನಮ್ಮ ಕೌಟುಂಬಿಕ ವ್ಯವಸ್ಥೆಯ ಅಡಿಪಾಯವನ್ನೇ ಕದಲುವಂತೆ ಮಾಡುತಿದೆ. ಅವಿಭಕ್ತ ಕುಟುಂಬಗಳಲ್ಲಿ ಇದ್ದ ಆ ಪ್ರೀತಿ, ವಿಶ್ವಾಸ, ಬದುಕಿನ ಭದ್ರತೆ ಇಲ್ಲವಾಗಿ ಪ್ರತಿಯೊಬ್ಬರೂ ಅಭದ್ರತೆಯಲ್ಲಿ ಬದುಕಿನ ಬಂಡಿ ಮುನ್ನಡೆಸುಬ ಸ್ಥಿತಿ ಉಂಟಾಗಿದೆ.
ಅಂದೊಂದು ಕಾಲವಿತ್ತು ಹತ್ತು ಜನ ಮಕ್ಕಳನ್ನು ತಂದೆ ತಾಯಿ ಪ್ರೀತಿಯಿಂದ ಸಲಹುತ್ತಿದ್ದರು.. 25-30 ಮಂದಿ ಇದ್ದ ಕುಟುಂಬದ ಸದಸ್ಯರು ಪರಸ್ಪರ ಅನ್ಯೂನ್ಯತೆಯಿಂದ ಬದುಕುತ್ತಿದ್ದರು. ಅತ್ತಾಗ ಸಂತೈಸಿ ,ಬಿದ್ದಾಗ ಮುದ್ದಿಸಿ ,ಪ್ರತಿ ಗೆಲುವಿಗೂ ಹಾರೈಸಿದ ತಂದೆ ತಾಯಿಗಳು. ಅವರು ನೀಡಿದ ಬಿಸಿ ಅಪ್ಪುಗೆಯ ಪ್ರೀತಿಗೆ ಬದಲಾಗಿ ಅವರ ಇಳಿ ವಯಸ್ಸಿನಲ್ಲಿ ತುತ್ತು ಅನ್ನ, ಲಾಲನೆ ಪಾಲನೆಯ ಪ್ರೀತಿಯ ಎರಡು ಮಾತುಗಳು.. ನೆಮ್ಮದಿ ಯ ದಿನಗಳು. ಇವಿಷ್ಟನ್ನೇ ಬಯಸುತ್ತಾರೆ ಅವರು.
ಲಾಲಿಸಿ, ಪಾಲಿಸಿ ವಿದ್ಯೆಬುದ್ಧಿ ನೀಡಿ ಬೆಳೆಸಿ ಹರಸಿದ ತಂದೆ ತಾಯಿಯರಿಗೆ ಒಂದಿಷ್ಟು ನೆಮ್ಮದಿಯ ದಿನಗಳನ್ನು ನೀಡುವುದು ಮಕ್ಕಳ ದೊಡ್ಡ ಜವಾಬ್ದಾರಿ. ತಂದೆ ತಾಯಿಯ ಕಣ್ಣಂಚಿನಲ್ಲಿ ನೋವಿನ ಕಣ್ಣೀರು ಬಾರದಿರಲಿ..ಬದಲಿಗೆ ಸಂತೋಷದ ಆನಂದ ಭಾಷ್ಪ ಸದಾ ತುಂಬಿರಲಿ.
ನೋಡಲು, ಆರೈಕೆ ಮಾಡಲು ಜನರಿಲ್ಲದೆ ತಂದೆ ತಾಯಿ, ಹಿರಿ ಜೀವಗಳು ವೃದ್ಧಾಶ್ರಮಗಳು ಸೇರುವ ಪ್ರಸಂಗಗಳು ಅಲ್ಲಲ್ಲಿ ಕೇಳಿ ಬರುತಿದೆ. ತಂದೆ ತಾಯಿಗೆ ಮಕ್ಕಳು ನೀಡದ, ಹೊಟ್ಟೆ ಬಟ್ಟೆ ಕಟ್ಟಿ ಸಲುಹಿದ ಮಕ್ಕಳಿಂದ ಸಿಗದ ಪ್ರೀತಿಯನ್ನು ಮತ್ಯಾರೋ ನೀಡಲು ಸಾಧ್ಯವೇ.. ವೃದ್ಧಾಶ್ರಮ ಎಂಬುದು ನಮ್ಮ ಸಂಸ್ಕೃತಿಯಲ್ಲ ಪಶ್ಚಿಮಾತ್ಯ ಸಂಸ್ಕೃತಿಯದು ಅಲ್ಲಿ ಭಾವನೆಗಳಿಗೆ ಬೆಲೆ ಇಲ್ಲ. ಆದರೆ ಭಾರತೀಯರಾದ ನಾವು ಸಂಸ್ಕೃತಿ ಆಚಾರ ವಿಚಾರಗಳ ಪರಿಪಾಲಕರಾಗಿ ಈ ವೃದ್ಧಾಶ್ರಮಗಳಿಗೆ ತಂದೆ-ತಾಯಿಯನ್ನು ಕಳುಹಿಸುವ ಸ್ಥಿತಿ ಈ ಸಮಾಜಕ್ಕೆ ಬಾರದಿರಲಿ.
ಅತ್ತಾಗ ಆಕಾಶದಲ್ಲಿನ ಚಂದ್ರನನ್ನು ತೋರಿಸಿ ತುತ್ತು ನೀಡಿದಾಕೆಗೆ ಅವರ ಇಳಿವಯಸ್ಸಿನಲ್ಲಿ ಒಂದು ತುತ್ತು ಅನ್ನ ನೀಡಲು ಸಾಧ್ಯವಾಗಬೇಕು. ವೃದ್ಧಾಶ್ರಮದಲ್ಲಿ ತಮ್ಮ ಮಕ್ಕಳು ಇಂದಲ್ಲ ನಾಳೆ ಬರುತ್ತಾರೆ. ನಮ್ಮನ್ನು ಇಲ್ಲಿಂದ ಕರೆದುಕೊಂಡು ಹೋಗುತ್ತಾರೆ ಎಂದು ಆಸೆ ಕಂಗಳಲ್ಲಿ ಕಾಯುವ ಪರಿಸ್ಥಿತಿ ಬಾರದಿರಲಿ.
ಎಷ್ಟೇ ಕಷ್ಟ ಆದರೂ ಅವರನ್ನು ಜೊತೆಯಲ್ಲಿಯೇ ಸಲಹಬೇಕು.
ಕಾಲಕ್ಕಿಂತ ವೇಗವಾಗಿ ಓಡುವ ಬದುಕಿನ ಜಂಜಾಟದಲ್ಲಿ ಜನ್ಮ ನೀಡಿದ ತಂದೆ ತಾಯಿಗೆ ಮಮತೆ ,ವಾತ್ಸಲ್ಯ ನೀಡಬೇಕು.
ಅತ್ತೆ ಮಾವ ಎಂದರೆ ತಂದೆ ತಾಯಿಗೆ ಸಮಾನರು ಅವರನ್ನೂ ಪ್ರೀತಿ ವಾತ್ಸಲ್ಯದಿಂದ ಸಾಕಿ ಸಲಹುವ ಮನಸ್ಥಿತಿ ರೂಪಿಸಿಕೊಳ್ಫಬೇಕು. ಅವಿಭಕ್ತ ಕುಟುಂಬವನ್ನು ಒಡೆದು ವಿಭಕ್ತ ಕುಟುಂಬವಾಗಿ ಮಾಡಲು ಅವಕಾಶ ನೀಡಬಾರದು. ಪ್ರತಿ ಮನೆಯಲ್ಲಿ ಅಜ್ಜ ಅಜ್ಜಿ ಅಪ್ಪ ಅಮ್ಮ ಎಂಬ ಪ್ರೀತಿ, ವಾತ್ಸಲ್ಯದ ಬೆಳಕು ಸದಾ ಉರಿಯುತ್ತಿರಬೇಕು.. ಆಗ ಆ ಮನೆ ಭೂಮಿಯ ಸ್ವರ್ಗವಾಗುತ್ತದೆ. ವಸುದೈವ ಕುಟುಂಬಕಂ ಎಂದು ಸಾರಿದ
ತಂದೆ-ತಾಯಿ ದೇವರಿಗೆ ಸಮ ಎಂದು ತಿಳಿಸಿಕೊಟ್ಟ ಸಂಸ್ಕೃತಿ ನಮ್ಮದು. ಅಲ್ಲಿ ಈ ವೃದ್ಧಾಶ್ರಮ ಎಂಬ ಪರಿಕಲ್ಪನೆಯೇ ಇಲ್ಲ.
ಮತ್ತೆ ಯಾಕೆ ನಮ್ಮ ನಾಡಿನಲ್ಲಿ ವೃದ್ಧಾಶ್ರಮಗಳು ತಲೆ ಎತ್ತಿದವು.
ನೋಟಿನ ಮೌಲ್ಯದಲ್ಲಿಯೇ ಬದುಕನ್ನು ಅಳೆಯುವ ಇಂದಿನ ಕಾಲ ಘಟ್ಟದಲ್ಲಿ ಜೀವನ ಮೌಲ್ಯಕ್ಕೆ ಕೊರತೆಯಾಗಿದೆ. ಸಂಬಂಧಗಳ ಬೆಲೆ ಕುದಿಸಿದೆ.
ತಮ್ಮ ಮಕ್ಕಳು ಮುಪ್ಪಿನ ಕಾಲಕ್ಕೆ ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂದು ಭಾವಿಸಿದ್ದ ತಂದೆ ತಾಯಿಗೆ ಮಕ್ಕಳು ವೃದ್ದಾಶ್ರಮದಲ್ಲಿ ಬಿಟ್ಟು ಬರುವಾಗ ಆಗುವ ನೋವು ,ಕಣ್ಣಂಚಿನಲ್ಲಿ ನೀರು ಯಾವ ಮನಸ್ಥಿತಿ, ಯಾವ ಪರಿಸ್ಥಿತಿ..
ವಸುದೈವ ಕುಟುಂಬಕಂ ಎಂಬಂತೆ ತಂದೆ ತಾಯಿಯನ್ನು ಪ್ರೀತಿಸಿ, ಗೌರವಿಸಿ ,ಆರಾಧಿಸಿ. ಅವರಿಗೂ ಪುಟ್ಟ ಮನಸಿದೆ ಅದರಲ್ಲಿಯು ಭಾವನೆಗಳಿವೆ ಎಂಬುದನ್ನು ಅರ್ಥೈಸಿಕೊಳ್ಳೋಣ .ಮಕ್ಕಳು ತಂದೆ ತಾಯಿಯನ್ನು ವೃದ್ದಾಶ್ರಮಕ್ಕೆ ಕಳುಹಿಸುವ ಪದ್ಧತಿ ಕೊನೆಯಾಗಲಿ. ವೃದ್ಧಾಶ್ರಮದಲ್ಲಿರುವ ಆ ನಿಷ್ಕಲ್ಮಶ ಹೃದಯಗಳು ಮರಳಿ ಮನೆ ಸೇರುವಂತಾಗಲಿ. ಬದುಕಿದ್ದಾಗ ತಂದೆ ತಾಯಿಯನ್ನು ಪ್ರೀತಿಸೋಣ .ಕಳೆದುಕೊಂಡಾಗ ಅಂಗಳಾಚಿ ಬೇಡಿದರು ಕೂಡ ಮತ್ತೆ ಬರಲಾರರು…
ಚೈತನ್ಯ ರೈ
(ಚೈತನ್ಯ ರೈ ಸುಳ್ಯದ ನೆಹರೂ ಸ್ಮಾರಕ ಮಹಾ ವಿದ್ಯಾಲಯದ ಅಂತಿಮ ಬಿ.ಎ. ವಿದ್ಯಾರ್ಥಿನಿ.)