ಬರ್ಮಿಂಗ್ಹ್ಯಾಮ್:’ವರ್ಲ್ಡ್ ಚಾಂಪಿಯನ್ಷಿಪ್ ಆಫ್ ಲೆಜೆಂಡ್ಸ್ 2024′ ಟಿ20 ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಚಾಂಪಿಯನ್ಸ್ ತಂಡವನ್ನು 5 ವಿಕೆಟ್ ಅಂತರದಿಂದ ಮಣಿಸಿದ ಭಾರತ ಚಾಂಪಿಯನ್ಸ್ ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡಿತು.ಇಲ್ಲಿನ ಎಜ್ಬಾಸ್ಟನ್ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಚಾಂಪಿಯನ್ಸ್, ನಿಗದಿತ 20 ಓವರ್ಗಳಲ್ಲಿ
6 ವಿಕೆಟ್ಗೆ 156 ರನ್ ಗಳಿಸಿತು. ಈ ಗುರಿಯನ್ನು ಭಾರತ 19.1 ಓವರ್ಗಳಲ್ಲಿ ತಲುಪಿತು.ಯುವರಾಜ್ ಸಿಂಗ್ ನಾಯಕತ್ವದ ಟೀಂ ಇಂಡಿಯಾಗೆ ಗುರುಕೀರತ್ ಸಿಂಗ್ ಮಾನ್ (33 ಎಸೆತಗಳಲ್ಲಿ 34 ರನ್) ಅಂಬಾಟಿ ರಾಯುಡು 30 ಎಸೆತಗಳಲ್ಲಿ 50 ರನ್ ಗಳಿಸಿ ಜಯದ ಕಾಣಿಕೆ ನೀಡಿದರು. ಕೊನೆಯಲ್ಲಿ ಯೂಸುಫ್ ಪಠಾಣ್ (16 ಎಸೆತಗಳಲ್ಲಿ 30 ರನ್) ಬೀಸಾಟದ ಮೂಲಕ ನೆರವಾದರು. ನಾಯಕ ಯುವರಾಜ್ ಸಿಂಗ್ (15) ಮತ್ತು ಇರ್ಫಾನ್ ಪಠಾಣ್ (5) ಅಜೇಯವಾಗಿ ಉಳಿದು ಗೆಲುವಿನ ಲೆಕ್ಕಾಚಾರ ಪೂರ್ಣಗೊಳಿಸಿದರು.
ಭಾರತದ ಸಂಘಟಿತ ಬೌಲಿಂಗ್ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಪರ ಬ್ಯಾಟರ್ಗಳಿಂದ ಉತ್ತಮ ಪ್ರದರ್ಶನ ಮೂಡಿಬರಲಿಲ್ಲ. ಶೋಯಬ್ ಮಲಿಕ್ 36 ಎಸೆತಗಳಲ್ಲಿ 41 ರನ್ ಗಳಿಸಿದರು. ಅನುರೀತ್ ಸಿಂಗ್ ಮೂರು ವಿಕೆಟ್ ಪಡೆದು ಮಿಂಚಿದರು. ವಿನಯ್ ಕುಮಾರ್, ಪವನ್ ನೇಗಿ ಹಾಗೂ ಇರ್ಫಾನ್ ಪಠಾಣ್ ತಲಾ ಒಂದೊಂದು ವಿಕೆಟ್ ಹಂಚಿಕೊಂಡರು.
ಚೊಚ್ಚಲ ಆವೃತ್ತಿ:
ವಿವಿಧ ದೇಶಗಳ ನಿವೃತ್ತ ಆಟಗಾರರ ತಂಡಗಳು ಪಾಲ್ಗೊಂಡ ಟಿ20 ಟೂರ್ನಿಯ ಚೊಚ್ಚಲ ಆವೃತ್ತಿ (ವರ್ಲ್ಡ್ ಚಾಂಪಿಯನ್ಷಿಪ್ ಆಫ್ ಲೆಜೆಂಡ್ಸ್ 2024) ಇದಾಗಿದೆ. ಜುಲೈ 3ರಂದು ಆರಂಭವಾದ ಈ ಟೂರ್ನಿಯಲ್ಲಿ ಭಾರತ, ಇಂಗ್ಲೆಂಡ್, ಪಾಕಿಸ್ತಾನ, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾದ ‘ಚಾಂಪಿಯನ್ಸ್’ ತಂಡಗಳು ಕಣಕ್ಕಿಳಿದಿದ್ದವು.











