ಕೋಲ್ಕತ್ತ: ಉದಯೋನ್ಮುಖ ಕ್ರಿಕೆಟೃ ಮುಕುಲ್ ಚೌಧರಿ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ಇಲ್ಲಿನ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಎಲ್ಎಸ್ಜಿ ತಂಡವು ಮೂರು ವಿಕೆಟ್ಗಳ ರೋಚಕ ಜಯ ಗಳಿಸಿತು.ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಕೆಕೆಆರ್ ನಿಗದಿತ
20ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 181ರನ್ ಗಳಿಸಿತು. ನಾಯಕ ಅಜಿಂಕ್ಯ ರಹಾನೆ(41), ಅಂಗ್ಕ್ರಿಷ್ ರಘುವಂಶಿ(45) ತಂಡದ ಮೊತ್ತ ಹೆಚ್ಚಿಸಿದರು. ಕೆಮರೂನ್ ಗ್ರೀನ್ 32ರನ್ ಗಳಿಸಿದರು.ಗುರಿ ಬೆನ್ನತ್ತಿದ ಎಲ್ಎಸ್ಜಿ ತಂಡವು ಆರಂಭಿಕ ಆಟಗಾರರನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಸಮಯೋಚಿತ ಆಟದ ಪ್ರದರ್ಶನ ನೀಡಿದ
ಆಯುಷ್ ಬಡೋನಿ(54ರನ್, 34ಎಸೆತ, 4X7, 6X2) ಅರ್ಧಶತಕ ತಂಡಕ್ಕೆ ಚೇತರಿಕೆ ನೀಡಿತು. ನಿಕೋಲಸ್ ಪೂರನ್ ಹಾಗೂ ಅಬ್ದುಲ್ ಸಮದ್ ಬೇಗನೆ ವಿಕೆಟ್ ಒಪ್ಪಿಸಿದ್ದರಿಂದ ತಂಡವು ಮತ್ತೆ ಸೋಲಿನ ಹಾದಿ ಹಿಡಿದಿತ್ತು.
ಸೋಲಿನ ದವಡೆಯಲ್ಲಿದ್ದ ಪಂದ್ಯವನ್ನು 21ರ ಹರೆಯದ ಮುಕುಲ್ ಚೌಧರಿ ತಮ್ಮ ರೋಮಾಂಚಕ ಆಟದ ಪ್ರದರ್ಶನದ ಮೂಲಕ ಗೆಲ್ಲಿಸಿಕೊಟ್ಟರು. ತಂಡವು ಏಳು ವಿಕೆಟ್ಗಳನ್ನು ಕಳೆದುಕೊಂಡಿದ್ದರೂ ಭರವಸೆ ಕಳೆದುಕೊಳ್ಳದ ಮುಕುಲ್, ಕೆಕೆಆರ್ ಬೌಲರ್ಗಳನ್ನು ಇನ್ನಿಲ್ಲಿದಂತೆ ಕಾಡಿದರು.
ಕೇವಲ 27 ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ ಏಳು ಸ್ಪೋಟಕ ಸಿಕ್ಸರ್ ಒಳಗೊಂಡು 54ರನ್ ಚಚ್ಚಿದರು.ಗೆಲುವಿಗೆ ಏಳು ರನ್ಗಳ ಕೊರತೆ ಇರುವಾಗ ಪಂದ್ಯದ ಕೊನೆಯ ಓವರಿನ ಐದನೇ ಎಸೆತವನ್ನು ಮುಕುಲ್ ಸಿಕ್ಸರ್ಗೆ ಅಟ್ಟಿದರು. ಕೊನೆಯ ಎಸೆತದಲ್ಲಿ ಒಂದು ರನ್ ಅಗತ್ಯವಿದ್ದಾಗ ಚೆಂಡು ಬ್ಯಾಟ್ಗೆ ತಾಗದೆ ಇದ್ದರೂ ಫೀಲ್ಡಿಂಗ್ ವೈಫಲ್ಯವನ್ನು ಗಮನಿಸಿದ ಮುಕುಲ್, ಓಟದ ಮೂಲಕ ವಿಜಯದ ರನ್ ಗಳಿಸಿದರು.ಮುಕುಲ್ ಚೌಧರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.











