ಪಲ್ಲೆಕೆಲೆ:ಪಾತುಮ್ ನಿಸ್ಸಂಕ ಸ್ಫೋಟಕದ ಶತಕದ ನೆರವಿನಿಂದ ಆಸ್ಟ್ರೇಲಿಯಾ ವಿರುದ್ಧ ಶ್ರೀಲಂಕಾ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಸೋತಿರುವ ಕಾರಣ ಟೂರ್ನಿಯಿಂದಲೇ ಆಸ್ಟ್ರೇಲಿಯಾ ಹೊರ ಬೀಳುವ ಆತಂಕ ಎದುರಾಗಿದೆ. ಶ್ರೀಲಂಕಾ ಸೂಪರ್ 8 ಹಂತಕ್ಕೆ ಪ್ರವೇಶಿಸಿದೆ.ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 20 ಓವರ್ಗಳಲ್ಲಿ
181 ರನ್ಗಳಿಗೆ ಆಲೌಟ್ ಆಯ್ತು. ಕಠಿಣ ಸವಾಲು ಇದ್ದರೂ ನಿಸ್ಸಂಕ ಅವರ ಅಜೇಯ 100 ರನ್ (52 ಎಸೆತ, 10 ಬೌಂಡರಿ, 5 ಸಿಕ್ಸ್), ಕುಸಾಲ್ ಮೆಂಡಿಸ್ 51 ರನ್(38 ಎಸೆತ, 6 ಬೌಂಡರಿ, 1 ಸಿಕ್ಸ್), ಕೊನೆಯಲ್ಲಿ ಪವನ್ ರತ್ನನಾಯಕೆ ಔಟಾಗದೇ 28 ರನ್(15 ಎಸೆತ, 6 ಬೌಂಡರಿ) ನೆರವಿನಿಂದ ಲಂಕಾ ಇನ್ನೂ 12 ಎಸೆತ ಬಾಕಿ ಇರುವಂತೆಯೇ 2 ವಿಕೆಟ್ ಕಳೆದುಕೊಂಡು 184 ರನ್ ಹೊಡೆದು ಜಯ ಸಾಧಿಸಿತು.
32 ಎಸೆತಗಳಲ್ಲಿ ಅರ್ಧಶತಕ ಹೊಡೆದ ನಿಸ್ಸಂಕ ನಂತರ 20 ಎಸೆತಗಳಲ್ಲಿ 50 ರನ್ ಹೊಡೆದರು. ಈ ಮೂಲಕ 2026ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಶತಕ ಹೊಡೆದ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆಸ್ಟ್ರೇಲಿಯಾ 8.3 ಓವರ್ಗಳಲ್ಲಿ 104 ರನ್ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಾಗ ಉತ್ತಮ ಸ್ಥಿತಿಯಲ್ಲಿತ್ತು. ಆದರೆ 130 ರನ್ಗಳಿಸುವಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡಿದ್ದು ಸೋಲಿಗೆ ಪ್ರಮುಖ ಕಾರಣ. ನಾಯಕ ಮಿಷೆಲ್ ಮಾರ್ಶ್ 54 ರನ್(27 ಎಸೆತ, 8 ಬೌಂಡರಿ, 2 ಸಿಕ್ಸ್) ಟ್ರಾವಿಸ್ ಹೆಡ್ 56 ರನ್(29 ಎಸೆತ, 7 ಬೌಂಡರಿ, 3 ಸಿಕ್ಸ್) ಹೊಡೆದು ಔಟಾದರು.
ಮೊದಲ 50 ಎಸೆತಗಳಲ್ಲಿ 100 ರನ್ ಬಂದಿದ್ದರೆ ನಂತರದ 70 ಎಸೆತಗಳಲ್ಲಿ ಆಸ್ಟ್ರೇಲಿಯಾ ಗಳಿಸಿದ್ದು 81 ರನ್ ಕಳೆದುಕೊಂಡಿದ್ದು ಮಾತ್ರ 10 ವಿಕೆಟ್. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟರ್ಗಳು ಕೈಕೊಟ್ಟಿದ್ದರಿಂದ ಆಸ್ಟ್ರೇಲಿಯಾ ಅಂತಿಮವಾಗಿ ಗಳಿಸಿದ್ದು 181 ರನ್.
ಟೂರ್ನಿಯಿಂದಲೇ ಔಟ್?
ಬಿ ಗ್ರೂಪಿನಿಂದ ಶ್ರೀಲಂಕಾ 3 ಪಂದ್ಯ ಗೆದ್ದು ಈಗಾಗಲೇ ಸೂಪರ್ 8 ಪ್ರವೇಶಿಸಿದೆ. ಮಂಗಳವಾರ ಜಿಂಬಾಬ್ವೆ ಮತ್ತು ಐರ್ಲೆಂಡ್ ನಡುವೆ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಜಿಂಬಾಬ್ವೆ ಗೆದ್ದರೆ ಆಸ್ಟ್ರೇಲಿಯಾ ಟಿ20ಯಿಂದಲೇ ಹೊರ ಬೀಳಲಿದೆ.
ಐರ್ಲೆಂಡ್ ವಿರುದ್ಧ ಜಿಂಬಾಬ್ವೆ ಸೋತರೂ ಮತ್ತೆ ಜಿಂಬಾಬ್ವೆಗೆ ಮತ್ತೊಂದು ಅವಕಾಶವಿದ್ದು ಶ್ರೀಲಂಕಾ ವಿರುದ್ಧ ಆಡಬೇಕಿದೆ. ಆದರೆ ಆಸ್ಟ್ರೇಲಿಯಾಗೆ ಒಮನ್ ವಿರುದ್ಧದ ಪಂದ್ಯ ಮಾತ್ರ ಬಾಕಿಯಿದೆ. ಶ್ರೀಲಂಕಾ ವಿರುದ್ಧ ಜಿಂಬಾಬ್ವೆ ಸೋತರೆ ಆಗ ನೆಟ್ ರನ್ ರೇಟ್ ಆಧಾರದಲ್ಲಿ ಒಂದು ತಂಡ ಸೂಪರ್ 8 ಪ್ರವೇಶಿಸಲಿದೆ. ಈ ರೀತಿಯ ಪವಾಡದ ಫಲಿತಾಂಶ ಬರಬೇಕಾದರೆ ಮಂಗಳವಾರ ಐರ್ಲೆಂಡ್ ಜಿಂಬಾಬ್ವೆಯನ್ನು ಸೋಲಿಸಬೇಕಾಗುತ್ತದೆ.





