ಸುಳ್ಯ: ಫೆಬ್ರವರಿ 10 ಮತ್ತು 11ರಂದು ಸುಳ್ಯದಲ್ಲಿ ನಡೆಯಲಿರುವ ರಾಷ್ಟ್ರೀಯ ಲಗೋರಿ ಪಂದ್ಯಾಟದ ಪೂರ್ವಭಾವಿಯಾಗಿ ನಿರ್ಣಾಯಕರುಗಳಿಗೆ ತರಬೇತಿ ಶಿಬಿರ ಏರ್ಪಡಿಸಲಾಯಿತು. ಕರ್ನಾಟಕ ರಾಜ್ಯ ಲಗೋರಿ ಅಸೋಸಿಯೇಷನ್ ಆಶ್ರಯದಲ್ಲಿ ಸುಳ್ಯದ ಗೌಡ ಸಮುದಾಯ ಭವನದ ಆವರಣದಲ್ಲಿ ನಡೆದ ಶಿಬಿರವನ್ನು ರಾಷ್ಟ್ರೀಯ ಲಗೋರಿ ಸಂಘಟನಾ ಸಮಿತಿಯ ಗೌರವಾಧ್ಯಕ್ಚ ಎನ್.ಎ.ರಾಮಚಂದ್ರ ಉದ್ಘಾಟಿಸಿದರು. ಲಗೋರಿ ಕ್ರೀಡೆಯನ್ನು ಬೆಳೆಸುವಲ್ಲಿ ರೆಫ್ರಿಗಳ ಪಾತ್ರ
ಮಹತ್ವದ್ದಾಗಿರುತ್ತದೆ. ಕಾಲಕಾಲಕ್ಕೆ ಅಗತ್ಯವಾದ ಬದಲಾವಣೆಗಳನ್ನು ಅಳವಡಿಸಿಕೊಂಡು ನಿಯಮದಂತೆ ಶಿಸ್ತು ಬದ್ಧವಾಗಿ ಲಗೋರಿಯನ್ನು ಆಡಿಸಿದರೆ ದೊಡ್ಡಣ್ಣ ಬರೆಮೇಲು ಅವರ ಕನಸಿನಂತೆ ರಾಷ್ಟ್ರಮಟ್ಟದಲ್ಲಿ ಇದು ಬೆಳಗಲು ಸಾಧ್ಯ ಎಂದರು. ರಾಷ್ಟ್ರೀಯ ಲಗೋರಿ ಪಂದ್ಯಾಟದ ಸಂಘಟನಾ ಸಮಿತಿಯ ಅಧ್ಯಕ್ಷರಾದ ಎನ್.ಜಯಪ್ರಕಾಶ್ ರೈ ಸಭಾಧ್ಯಕ್ಷತೆ ವಹಿಸಿದ್ದರು. ಕಳೆದ 23 ವರ್ಷಗಳಿಂದ ದೊಡ್ಡಣ್ಣ ಬರೆಮೇಲುರವರು ಲಗೋರಿ ಪಂದ್ಯಾಟದ ಪುನರುಜ್ಜೀವನಕ್ಕಾಗಿ ಹೋರಾಡುತ್ತಿದ್ದಾರೆ. ಸ್ಕೂಲ್ ಗೇಮ್ ಆಗಿ ಲಗೋರಿಯು ಕ್ರೀಡಾ ಪಠ್ಯಕ್ಕೆ ಸೇರ್ಪಡೆಗೊಳ್ಳಬೇಕೆಂಬುದು ಅವರ ಮತ್ತು ನಮ್ಮೆಲ್ಲರ ಆಶಯ ಎಂದರು.
ಕರ್ನಾಟಕ ರಾಜ್ಯ ಲಗೋರಿ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಮಂಡ್ಯದ ರವಿ, ಸಂಘಟನಾ ಸಮಿತಿಯ ಖಜಾಂಜಿ ಸಂತೋಷ್ ಕುತ್ತಮೊಟ್ಟೆ, ಲಯನ್ಸ್ ಕ್ಲಬ್ ಅಧ್ಯಕ್ಷ ವೀರಪ್ಪ ಗೌಡ ಕಣ್ಕಲ್, ಹರೀಶ್ ರೈ ಉಬರಡ್ಕ, ಶರತ್ ಅಡ್ಕಾರ್, ರವಿಚಂದ್ರ ಕೊಡಿಯಾಲಬೈಲು, ಲಗೋರಿ ರೆಫ್ರಿಗಳ ಪ್ರಮುಖರಾದ ಸಂದೀಪ್ ರೈ ಪಲ್ಲೋಡಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉದ್ಘಾಟನೆಯ ಬಳಿಕ ಕರ್ನಾಟಕ ರಾಜ್ಯ ಲಗೋರಿ ಅಸೋಸಿಯೇಷನ್ನ ಅಧ್ಯಕ್ಷ ದೊಡ್ಡಣ್ಣ ಬರೆಮೇಲು ಶಿಬಿರಾರ್ಥಿಗಳಿಗೆ ಲಗೋರಿಯ ನಿಯಮಾವಳಿಗಳ ಬಗ್ಗೆ ತರಬೇತಿ ನೀಡಿದರು.
ಬೆಂಗಳೂರು, ಮೈಸೂರು, ಮಂಡ್ಯ, ಚಿಕ್ಕಮಗಳೂರು ಮತ್ತು ದ.ಕ.ಜಿಲ್ಲೆಯ ವಿವಿಧ ತಾಲೂಕುಗಳ ದೈಹಿಕ ಶಿಕ್ಷಣ ಶಿಕ್ಷಕರು ಭಾಗವಹಿಸಿದ್ದರು.












