ಸುಳ್ಯ:ವಿದ್ಯಾರ್ಥಿಗಳನ್ನು, ಯುವಕರನ್ನು ಸದಾ ಬೆಂಬಲಿಸುತ್ತಿದ್ದ ಡಾ.ಕುರುಂಜಿ ವೆಂಕಟ್ರಮಣ ಗೌಡರು ಯುವ ಜನಾಂಗಕ್ಕೆ ಸದಾ ಸ್ಫೂರ್ತಿಯಾಗಿದ್ದರು ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ ಹೇಳಿದ್ದಾರೆ.
ಆಧುನಿಕ ಸುಳ್ಯದ ನಿರ್ಮಾತೃ ಡಾ.ಕುರುಂಜಿ ವೆಂಕಟ್ರಮಣ ಗೌಡರ 97ನೇ ಜಯಂತ್ಯೋತ್ಸವದ ಅಂಗವಾಗಿ ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ವತಿಯಿಂದ
ಎರಡು ದಿನಗಳ ಕಾಲ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದ ವೇದಿಕೆಯಲ್ಲಿ ನಡೆದ ‘ಕೆವಿಜಿ ಸುಳ್ಯ ಹಬ್ಬ’ದಲ್ಲಿ ಕೆವಿಜಿ ಸಾಧನಾಶ್ರೀ ಪ್ರಶಸ್ತಿ ಪ್ರದಾನ ಹಾಗೂ ಕೆವಿಜಿ ಸಂಸ್ಮರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.ತಮ್ಮ ವಿದ್ಯಾರ್ಥಿ ಜೀವನದಿಂದಲೇ ಕೆವಿಜಿ ಅವರ ಪ್ರೀತಿ, ಕಾಳಜಿಯನ್ನು ಹತ್ತಿರದಿಂದ ಬಲ್ಲವನಾಗಿದ್ದೆ ಎಂದ ಅವರು ಇಡೀ ಯುವ ಸಮುದಾಯಕ್ಕೆ ಅವರು ಮಾರ್ಗದರ್ಶಕರಾಗಿದ್ದರು, ವಿದ್ಯಾರ್ಥಿಗಳ ಬದುಕಿಗೆ ಬೆಳಕಾಗಿದ್ದರು ಎಂದು ಬಣ್ಣಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಒಎಲ್ಇ ಅಧ್ಯಕ್ಷ ಹಾಗೂ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಡಾ.ಕೆ.ವಿ ಚಿದಾನಂದ ಮಾತನಾಡಿ ‘ ಅತೀ ಹೆಚ್ಚು ಸದಸ್ಯರು, ಸಾರ್ವಜನಿಕರು ಭಾಗವಹಿಸುವ ಮೂಲಕ ಈ ಬಾರಿಯ ಸುಳ್ಯ ಹಬ್ಬ ದಾಖಲೆ ಬರೆದಿದೆ ಎಂದು ಹೇಳಿದರು. ಡಾ.ಕೆವಿಜಿ ಅವರ ಬಗ್ಗೆ ಜನತೆಗೆ ಇರುವ ಪ್ರೀತಿ, ಗೌರವ ಹಾಗು ಸುಳ್ಯ ಹಬ್ಬ ಸಮಿತಿಯ ಪ್ರಯತ್ನದಿಂದ ಈ ರೀತಿಯಲ್ಲಿ ಸುಳ್ಯ ಹಬ್ಬ ಯಶಸ್ಸಿನೆಡೆಗೆ ಮುನ್ನಡೆಯಲು ಸಾಧ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ನಿವೃತ್ತ ಪ್ರಾಂಶುಪಾಲರಾದ ಪ್ರೊ.ಎಂ.ಬಾಲಚಂದ್ರ ಗೌಡ
ಕೆವಿಜಿ ಸಂಸ್ಮರಣಾ ಭಾಷಣ ಮಾಡಿದರು. ಹಿರಿಯರಾದ ಎಸ್.ಎಂ.ಬಾಪೂ ಸಾಹೇಬ್ ಮತ್ತು ಹಿರಿಯ ಪತ್ರಕರ್ತ ಡಾ.ಯು.ಪಿ ಶಿವಾನಂದ ಅವರಿಗೆ ಕೆವಿಜಿ ಸಾಧನಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.ಟಿ ವಿಶ್ವನಾಥ, ಸಂಘದ ನಿಕಟ ಪೂರ್ವ ಅಧ್ಯಕ್ಷ ಡಾ.ಎನ್.ಎ.ಜ್ಞಾನೇಶ್, ಪ್ರಧಾನ ಕಾರ್ಯದರ್ಶಿ ಹರೀಶ್ ಬಂಟ್ವಾಳ್, ಕೋಶಾಧಿಕಾರಿ ಚಂದ್ರಾವತಿ ಬಡ್ಡಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.ಟಿ ವಿಶ್ವನಾಥ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಚಂದ್ರಾವತಿ ಬಡ್ಡಡ್ಕ ಹಾಗೂ ಚಂದ್ರಮತಿ.ಕೆ. ಸಾಧನಾಶ್ರೀ ಪ್ರಶಸ್ತಿ ವಿಜೇತರ ಪರಿಚಯ ಮಾಡಿದರು. ಬೇಬಿ ವಿದ್ಯಾ ಪಿ.ಬಿ ಕಾರ್ಯಕ್ರಮ ನಿರೂಪಿಸಿದರು.

ಮನೋರಂಜನಾ ಕಾರ್ಯಕ್ರಮದಲ್ಲಿ ಸಂಜೆ ಸರಕಾರಿ ಪದವಿಪೂರ್ವ ಕಾಲೇಜು ವಿಧ್ಯಾರ್ಥಿಗಳಿಂದ ಸಾಂಸ್ಕೃತಿಕ ಕಲರವ,
ರಾತ್ರಿ ಚಾ ಪರ್ಕ ಕಲಾವಿದರು ಕುಡ್ಲ ಅಭಿನಯಿಸಿದ ‘ಪುದರ್ ದೀತಿಜಿ’ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು.
ಸಾಂಸ್ಕೃತಿಕ ಹಾಗೂ ಕ್ರೀಡಾ ಸಂಭ್ರಮದೊಂದಿಗೆ ನಡೆದ ಕಾರ್ಯಕ್ರಮದ ಅಂಗವಾಗಿ ಡಿ.26ರಂದು ಬೆಳಿಗ್ಗೆ ಕೆವಿಜಿ ಸುಳ್ಯ ಹಬ್ಬದ ಕಚೇರಿಯಲ್ಲಿ ಡಾ.ಕುರುಂಜಿ ವೆಂಕಟರಮಣ ಗೌಡರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ವತಿಯಿಂದ ಒಂದು ಲಕ್ಷ ರೂಪಾಯಿಗಳ ನಗದು ಸಹಾಯಧನದಲ್ಲಿ ನಿರ್ಮಾಣವಾದ ನೂತನ ಮನೆಯ ಹಸ್ತಾಂತರ ನಡೆಯಿತು.ಸಂಘದ ಸ್ಥಾಪಕಾಧ್ಯಕ್ಷ ಎನ್. ಜಯಪ್ರಕಾಶ್ ರೈ ಮನೆ ಹಸ್ತಾಂತರ ಮಾಡಿದರು. ಅಥಿತಿಗಳಾಗಿ ರಾಮಚಂದ್ರ ಪೆಲ್ತಡ್ಕ ಉಪಸ್ಥಿತರಿದ್ದರು.ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.ಟಿ ವಿಶ್ವನಾಥ, ಪ್ರಧಾನ ಕಾರ್ಯದರ್ಶಿ ಹರೀಶ್ ಬಂಟ್ವಾಳ್, ಕೋಶಾಧಿಕಾರಿ ಚಂದ್ರಾವತಿ ಬಡ್ಡಡ್ಕ ಹಾಗೂ ಪದಾಧಿಕಾರಿಗಳು, ಸದಸ್ಯರು, ಪ್ರಮುಖರು ಉಪಸ್ಥಿತರಿದ್ದರು.







