ಸುಳ್ಯ: ಈ ಬಾರಿ ರಾಜ್ಯಸಲ್ಲಿ ಕಾಂಗ್ರೆಸ್ ಸರಕಾರ ಬರುವುದು ನಿಶ್ಚಿತ ಹಾಗಾಗಿ ಈ ಸಲ ಸುಳ್ಯದಿಂದಲೂ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಬೇಕಾಗಿದೆ. ಸುಳ್ಯದ ಕಾಂಗ್ರೆಸ್ ಅಭ್ಯರ್ಥಿ ವಿದ್ಯಾವಂತರು ಹಾಗೂ ಅನುಭವಿಗಳಾದ ಜಿ.ಕೃಷ್ಣಪ್ಪ ಅವರನ್ನು ಗೆಲ್ಲಿಸಲು ಎಲ್ಲರೂ ಒಟ್ಟಾಗಿ ಪ್ರಯತ್ನ ನಡೆಸುತ್ತೇವೆ ಎಂದು ಸುಳ್ಯ ವಿಧಾನಸಭಾ ಕ್ಷೇತ್ತದ ಕಾಂಗ್ರೆಸ್ ಉಸ್ತುವಾರಿ ಎಂ.ವೆಂಕಪ್ಪ ಗೌಡ ಹೇಳಿದ್ದಾರೆ. ಸುಳ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿ. ಕೃಷ್ಣಪ್ಪ ಅವರು ಕೋವಿಡ್ ಸಂದರ್ಭದಲ್ಲಿ ವೈಯುಕ್ತಿಕ ನೆಲೆಯಲ್ಲಿ
ಆಂಬುಲೆನ್ಸ್ಗಳನ್ನು ಒದಗಿಸಿ, ಅಸಾಹಕರಿಗೆ ಆಹಾರ ಸಾಮಾಗ್ರಿಗಳನ್ನು ವಿತರಿಸಿ ಮಾನವೀಯತೆ ಮೆರೆದಿದ್ದಾರೆ. ಸುಳ್ಯದ ಸಮಗ್ರ ಅಭಿವೃದ್ಧಿಯ ನಿಟ್ಟಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕಾಗಿದೆ.
ಸುಳ್ಯದಲ್ಲಿ ಅಡಿಕೆ ಹಳದಿ ರೋಗ ಬಾದೆಯಿಂದ ರೈತರು ಕಂಗಾಲಾಗಿದ್ದಾರೆ. ಕಾಂಗ್ರೆಸ್ ಶಾಸಕರು ಬಂದರೆ ಇದಕ್ಕೆ ಪರಿಹಾರ ಒದಗಿಸುತ್ತೇವೆ. ರಸ್ತೆ, ವಿದ್ಯುತ್, ಕುಡಿಯುವ ನೀರಿನ ಸಮಸ್ಯೆ ಸೇರಿ ಸುಳ್ಯದ ಅಭಿವೃದ್ಧಿಗೆ ಪ್ರಯತ್ನ ನಡೆಸುತ್ತೇವೆ. 110 ಕೆವಿ ಸಬ್ ಸ್ಟೇಷನ್ ಪೂರ್ತಿ ಮಾಡುತ್ತೇವೆ. ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಎಲ್ಲೆಲ್ಲಾ ಚುನಾವಣಾ ಬಹಿಷ್ಕಾರದ ಬ್ಯಾನರ್ ಹಾಕಿದ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆ ಪರಿಹಾರ ಮಾಡುತ್ತೇವೆ ಎಂದರು.
ಅಭ್ಯರ್ಥಿ ಆಯ್ಕೆ ಸಂಬಂಧಪಟ್ಟು ಉಂಟಾದ ಗೊಂದಲದಿಂದ ಕಾರ್ಯಕರ್ತರಲ್ಲಿ ಉಂಟಾದ ಅಸಮಾಧಾನವನ್ನು ಮಾತುಕತೆಯ ಮೂಲಕ ಸರಿಪಡಿಸುತ್ತೇವೆ. ಅಭ್ಯರ್ಥಿ ಆಯ್ಕೆ ಸಂದರ್ಭದಲ್ಲಿ ಅಸಮಾಧಾನ ಸಹಜ. ನಂದಕುಮಾರ್ ಅಭಿಮಾನಿ ಬಳಗದ ಜೊತೆ ಮಾತುಕತೆ ನಡೆಸಿ ಎಲ್ಲರನ್ನೂ ಒಟ್ಟು ಸೇರಿಸಿ ಒಂದಾಗಿ ಚುನಾವಣಾ ಪ್ರಚಾರ ಕೈಗೊಳ್ಳುತ್ತೇವೆ ಎಂದು ವೆಂಕಪ್ಪ ಗೌಡ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಸರಸ್ವತಿ ಕಾಮತ್, ಸುರೇಶ್ ಎಂ.ಎಚ್, ಅನಿಲ್ ರೈ, ಮುತ್ತಪ್ಪ ಪೂಜಾರಿ, ಧೀರಾ ಕ್ರಾಸ್ತಾ, ಜತ್ತಪ್ಪ ರೈ ಉಪಸ್ಥಿತರಿದ್ದರು.