ಸುಳ್ಯ: ರಾಜ್ಯ ಮಹಿಳಾ ಆಯೋಗಕ್ಕೆ ಇರುವ ಅಧಿಕಾರವನ್ನು ಬಳಸಿಕೊಂಡು ರಾಜ್ಯದಲ್ಲಿ ಆಯೋಗ ಮಹಿಳೆಯರ ಧ್ವನಿಯಾಗಿ ಕೆಲಸ ಮಾಡುತ್ತಿದೆ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ.ನಾಗಲಕ್ಷ್ಮಿ ಚೌಧರಿ ಹೇಳಿದ್ದಾರೆ. ಸುಳ್ಯ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಭಾಗವಾದ ಕೆವಿಜಿ ಇನ್ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸ್ ಮತ್ತು ಇನ್ಸ್ಟಿಟ್ಯೂಟ್ ಆಫ್ ಫಿಸಿಯೋಥೆರಾಫಿ ಸಂಸ್ಥೆಗಳ ಪದವಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ, ಪದವಿ ಪಡೆದ ವಿದ್ಯಾರ್ಥಿಗಳಿಗೆ
ಪದವಿ ಪ್ರದಾನ ಮಾಡಿ ಅವರು ಮಾತನಾಡಿದರು. ನಮ್ಮ ಕನಸು ದೊಡ್ಡದಾಗಿರಬೇಕು, ಕನಸ್ಸಿಗೆ ಆಕಾಶವೇ ಮಿತಿ ಇರಬೇಕು. ನಮ್ಮಲ್ಲಿರುವ ಅಹಂ ತೊರೆದು ಕನಸ್ಸಿನ ಸಾಕಾರಕ್ಕಾಗಿ ಕಠಿಣ ಪರಿಶ್ರಮ ಪಡಬೇಕು. ಆಗ ಯಶಸ್ಸು ನಮ್ಮನ್ನು ಅರಣಮಸಿಕೊಂಡು ಬರುತ್ತದೆ ಎಂದ ಅವರು ವೃತ್ತಿ ಜೀವನದಲ್ಲಿ ಎಲ್ಲಾ ರೀತಿಯ ಯಶಸ್ಸನ್ನು ಕಾಣುವ ಶಕ್ತಿ, ಸಾಮರ್ಥ್ಯ ನಿಮ್ಮಲ್ಲಿ ಇದೆ. ಇದನ್ನು ಬಳಸಿಕೊಂಡು ಕನಸನ್ನು ನನಸಾಗಿಸಿ.
ಕನಸಿಗೆ ಆಕಾಶವೇ ಮಿತಿಯಾಗಿಸಿ ಸಾಧನೆ ಮಾಡಿ. ಅದಕ್ಕಾಗಿ ಅಹಂ
ತೊರೆದು, ಪ್ರೀತಿ, ಆತ್ಮ ವಿಶ್ವಾಸ, ಕರುಣೆ, ಮಾನವೀಯತೆ ಗುಣಗಳನ್ನು ಬೆಳೆಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಹೆಣ್ಣು ಮಕ್ಜಳಿಗೆ ನಾಯಕತ್ವ ಹೇಳಿ ಕೊಡುವ ಅಗತ್ಯ ಇಲ್ಲ. ಅವರೇ ಹುಟ್ಟು ನಾಯಕತ್ವವನ್ನು ಪಡೆದುಕೊಂಡು ಬಂದಿರುತ್ತಾರೆ. ಶಿಕ್ಷಣ ಪ್ರತಿಯೊಬ್ಬರ ನಾಯಕತ್ವ ಗುಣ, ವೃತ್ತಿ ಬದ್ಧತೆಯನ್ನು ಹೆಚ್ಚಿಸಿ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದರು. ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಹೆಚ್ಚುತ್ತಿದ್ದು ಸೈಬರ್ ಕ್ರೈಂ ಬಗ್ಗೆ ಎಚ್ಚರ ವಹಿಸಬೇಕು,ಸಾಮಾಜಿಕ ಜಾಲ, ಅಂತರ್ಜಾಲ ಬಳಕೆ ಎಚ್ಚರಿಕೆಯಿಂದ ಬಳಸಿ ಎಂದು ಅವರು ಕರೆ ನೀಡಿದರು.
ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಎ.ಒ.ಎಲ್.ಇ ಉಪಾಧ್ಯಕ್ಷೆ ಶೋಭ ಚಿದಾನಂದ, ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ, ಕಾರ್ಯದರ್ಶಿ ಡಾ.ಐಶ್ವರ್ಯ ಕೆ.ಸಿ, ಕೋಶಾಧಿಕಾರಿ ಡಾ. ಗೌತಮ್ ಗೌಡ, ಕೆವಿಜಿ ಮೆಡಿಕಲ್ ಕಾಲೇಜಿನ ಡೀನ್ ಡಾ. ನೀಲಾಂಬಿಕೈ ನಟರಾಜನ್, ಕೆ.ವಿ.ಜಿ ಮೆಡಿಕಲ್ ಕಾಲೇಜಿನ ಮೆಡಿಕಲ್ ಸೂಪರಿಂಟೆಂಡೆಂಟ್ ಡಾ. ಸಿ ರಾಮಚಂದ್ರ ಭಟ್, ಅಲೈಡ್ ಹೆಲ್ತ್ ಸೈನ್ಸ್ ಉಪ ಪ್ರಾಂಶುಪಾಲರಾದ ಡಾ.ನವ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಎ.ಒ.ಎಲ್.ಇ. ಕಾರ್ಯದರ್ಶಿ ಹಾಗೂ ಅಲೈಡ್ ಹೆಲ್ತ್ ಸೈನ್ಸ್ ಪ್ರಾಂಶುಪಾಲರಾದ ಡಾ. ಐಶ್ವರ್ಯ ಕೆ.ಸಿ ಸ್ವಾಗತಿಸಿ,
ಫಿಸಿಯೋಥರಾಫಿ ಪ್ರಾಂಶುಪಾಲರಾದ ಡಾ.ಸಾಯ್ ರಾಮ್ ವಂದಿಸಿದರು.
ಫಿಸಿಯೋಥೆರಫಿ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಡಾ. ಶಾಶ್ವತಿ ಮತ್ತು ಪೆತಾಲಜಿ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ. ಅಂಜಲಿ ರಾವ್ ಕಾರ್ಯಕ್ರಮ ನಿರೂಪಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ.ಶಹೀದ್ ತೆಕ್ಕಿಲ್, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ, ಪ್ರೊ. ಕೆ.ವಿ.ದಾಮೋದರ ಗೌಡ, ಚಂದ್ರಶೇಖರ ಪೇರಾಲು, ನಗರ ಪಂಚಾಯತ್ ಸದಸ್ಯರಾದ ಶರೀಫ್ ಕಂಠಿ, ಸಿದ್ದಿಕ್ ಕೊಕ್ಕೊ, ಪ್ರಹ್ಲಾದ್ ಬೆಳ್ಳಿಪ್ಪಾಡಿ ಮತ್ತಿತರರು ಸೇರಿ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.