*ಗಂಗಾಧರ ಕಲ್ಲಪಳ್ಳಿ.
ಸುಳ್ಯ: ಸುತ್ತಲೂ ಕಣ್ಣಾಡಿಸಿದರೆ ಕಾಣುವುದು ಹಚ್ಚ ಹಸಿರು ಹೊದ್ದು ಮಲಗಿದ ಅಗಾಧ ಪ್ರಕೃತಿಯ ರಮಣೀಯತೆ.. ಎಲ್ಲೆಲ್ಲೂ ಹರಡಿರುವ ಕೃಷಿ ತೋಟಗಳ ಹಸಿರ ಸೌಂದರ್ಯ ರಾಶಿ.. ಇನ್ನೊಂದೆಡೆ ಸುಳ್ಯ ನಗರದ ವಿಹಂಗಮ ನೋಟ.. ತಲೆ ಎತ್ತಿ ನಿಂತಿರುವ ಕೆವಿಜಿ ವಿದ್ಯಾಸಂಸ್ಥೆಗಳು.. ಹೀಗೆ ಬೆಟ್ಟ ಏರಿ ಕುರುಂಜಿಗುಡ್ಡೆ ತಲುಪಿದರೆ ಸುತ್ತಲೂ ಕಣ್ಣಿಗೆ ಹಬ್ಬ.. ಸುಳ್ಯ ನಗರದ ಅತೀ ಎತ್ತರದ ಪ್ರದೇಶ ಕುರುಂಜಿಗುಡ್ಡೆಗೆ ಬಂದರೆ ಕಣ್ಣು ಹಾಯಿಸಿದಷ್ಟೂ ಕಾಣುವ ಮೋಹಕ ದೃಶ್ಯಗಳು.ಇದೀಗ ಕುರುಂಜಿ ಗುಡ್ಟೆಗೆ ಮುಕುಟ ಮಣಿಯಾಗಿ ಮನಮೋಹಕ ಪಾರ್ಕ್ ಒಂದು
ನಿರ್ಮಾಣಗೊಂಡಿದ್ದು ಸೌಂದರ್ಯವನ್ನು ಇಮ್ಮಡಿಗೊಳಿಸಿದೆ. ಸುಳ್ಯ ನಗರಕ್ಕೆ ಎಲ್ಲವೂ ಇದ್ದರೂ ಆರಾಮವಾಗಿ ಕುಳಿತು ವಿಶ್ರಾಂತಿ ಪಡೆಯಲು, ನಾಲ್ಕು ಹೆಜ್ಜೆ ವಾಕಿಂಗ್ ಮಾಡಲು ಒಂದು ಒಳ್ಳೆಯ ಉದ್ಯಾನವನ ಇಲ್ಲ ಎಂಬ ಕೊರಗು ಹಲವು ವರ್ಷಗಳಿಂದ ಕಾಡಿತ್ತು. ಹಲವು ವರ್ಷಗಳ ಯೋಚನೆ, ಯೋಜನೆಯ ಬಳಿಕ ಚಿಕ್ಕದಾದ ಮತ್ತು ಚೊಕ್ಕದಾದ ಪಾರ್ಕ್ ಒಂದು ಕುರುಂಜಿಗುಡ್ಡೆಯ ನೆತ್ತಿಯಲ್ಲಿ ತಲೆ ಎತ್ತಿದೆ. ಸುಳ್ಯ ನಗರ ಪಂಚಾಯತ್ ವತಿಯಿಂದ ಸುಮಾರು 12 ಲಕ್ಷ ರೂ ವೆಚ್ಚದಲ್ಲಿ ಉದ್ಯಾನ ರೂಪುಗೊಂಡಿದೆ. ಒಳಾಂಗಣ ಕ್ರೀಡಾಂಗಣದ ಮುಂಭಾಗದಲ್ಲಿ ಪಾರ್ಕ್ ನಿರ್ಮಿಸಲಾಗಿದೆ. ಮರ, ಗಿಡಗಳನ್ನು ನೆಟ್ಟು ಬೆಳೆಸಲಾಗಿದೆ. ಹುಲ್ಲು ಹಾಸು, ಹಲವು ವಿಧದ ಗಿಡಗಳನ್ನು ಬೆಳೆಸಿ ಹಸಿರ ಲೋಕ ಸೃಷ್ಠಿಸಲಾಗಿದೆ.ಪಾರ್ಕ್ನಲ್ಲಿ ಕುಳಿತುಕೊಳ್ಳಲು ಬೆಂಚುಗಳು, ನಡೆದಾಡಲು ಪಾಥ್ ವೇ.. ಗಳನ್ನು ನಿರ್ಮಿಸಲಾಗಿದೆ. ರಕ್ಷಣಾ ಬೇಲಿಗಳನ್ನು ಅಳವಡಿಸಲಾಗಿದೆ. ಪಾರ್ಕ್ನ ಮಧ್ಯೆ ಅಲ್ಲಲ್ಲಿ ಇಂಟರ್ ಲಾಕ್ ಅಳವಡಿಸಲಾಗಿದೆ. ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಮಕ್ಕಳಿಗಾಗಿ ಪ್ರತ್ಯೇಕ ಪಾರ್ಕ್ ಮಾಡಲಾಗಿದೆ. ಇಲ್ಲಿ ಉಯ್ಯಾಲೆ, ಜಾರುಬಂಡಿ, ತಿರುಗು ಬಂಡಿ ಮತ್ತಿತರ ವ್ಯವಸ್ಥೆಗಳನ್ನು ಒದಗಿಸಲಾಗಿದೆ.
ರಾಜಾಸೀಟ್ ನೆನಪಿಸುತಿದೆ..:
ಮೆಟ್ಟಿಲು ಏರಿ ಕುರುಂಜಿಗುಡ್ಡೆ ಪಾರ್ಕ್ನ ಮಧ್ಯೆ ನಿಂತಾಗ ಮಡಿಕೇರಿಯ ಪ್ರಸಿದ್ಧ ಉದ್ಯಾನವನ ರಾಜಾಸೀಟ್ನ್ನು ನೆನಪಿಸುತ್ತದೆ. ಮಡಿಕೇರಿಯ ರಾಜಾಸೀಟ್ ಮಾದರಿಯಲ್ಲಿ ಉದ್ಯಾನವನ ನಿರ್ಮಿಸಬೇಕು ಎಂಬ ಕಲ್ಪನೆಯಲ್ಲಿಯೇ ನಗರ ಪಂಚಾಯತ್ ಪಾರ್ಕ್ ನಿರ್ಮಾಣ ಮಾಡಲು ಯೋಜನೆ ರೂಪಿಸಿತ್ತು. ಕೆಲವು ವರ್ಷಗಳ ಹಿಂದೆ ಕುರುಂಜಿಗುಡ್ಡೆಯಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಿಸಲು ಆರಂಭಿಸಿದಾಗ ಎದುರಿನ ಜಾಗವನ್ನು ಜನರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಬಳಸಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಯೋಜನೆ ರೂಪಿಸಿತ್ತು. ಹಲವು ವರ್ಷಗಳ ಕಾಲ ಕುಂಟುತ್ತಾ ಸಾಗಿದ ಪಾರ್ಕ್ ನಿರ್ಮಾಣ ಈಗ ಮೂರ್ತ ರೂಪಕ್ಕೆ ಬಂದಿದೆ.
ಇನ್ನೂ ಇದೆ ಕೆಲಸ..
ಪಾರ್ಕ್ ಪೂರ್ಣಗೊಳ್ಳಲು ಇನ್ನೂ ಕೆಲವು ಕಾಮಗಾರಿಗಳು ಆಗಬೇಕಾಗಿದೆ. ಒಳಾಂಗಣ ಕ್ರೀಡಾಂಗಣದ ಕೆಳಭಾಗಲ್ಲಿ ವಾಕಿಂಗ್ ಮಾಡಲು ಪುಟ್ಪಾತ್ ನಿರ್ಮಾಣ, ಪಾರ್ಕ್ ಮುಂಭಾಗದಲ್ಲಿ ಕಮಾನು ನಿರ್ಮಾಣ ಮತ್ತಿತರ ಕೆಲವು ಕಾಮಗಾರಿಗಳು ನಡೆಯಲು ಬಾಕಿ ಇದೆ. ಅಲ್ಲದೆ ಒಳಾಂಗಣ ಕ್ರೀಡಾಂಗಣದ ಮುಂಭಾಗದಲ್ಲಿಯೂ ಉತ್ತಮ ಪಾರ್ಕ್ ರೂಪಿಸುವ ಬಗ್ಗೆ ಯೋಚನೆ ಇದೆ. ಸುತ್ತಲೂ ಬೆಂಚು ನಿರ್ಮಿಸಿ, ಹುಲ್ಲು ಹಾಸು ಹಾಕಿ ಪಾರ್ಕ್ ಮಾಡಿ ಮಧ್ಯದಲ್ಲಿ ಒಂದು ಚಿಮ್ಮುವ ಕಾರಂಜಿ ಮಾಡುವ ಬಗ್ಗೆಯೂ ಯೋಚನೆ ಇದೆ. ಎದುರಿನ ಗೋಡೆಯನ್ನು ಕಲಾತ್ಮಕವಾಗಿ ರೂಪಿಸುವ ಯೋಚನೆ ಇದೆ ಎನ್ನುತ್ತಾರೆ ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ
ಸಾರ್ವಜನಿಕರೇ ಕಸ ಎಸೆಯುತ್ತಾರೆ:
ಲಕ್ಷಾಂತರ ರೂ ಖರ್ಚು ಮಾಡಿ ಪಾರ್ಕ್ ನಿರ್ಮಿಸಿದರೂ ಬಳಿಕ ಅದು ನಿರ್ವಹಣೆ ಇಲ್ಲದೆ ಪಾಳು ಬೀಳುವ ಸ್ಥಿತಿಯೂ ನಿರ್ಮಾಣವಾಗುತ್ತದೆ. ಇದನ್ನು ತಪ್ಪಿಸಲು ಸಮರ್ಪಕವಾದ ನಿರ್ವಹಣೆ ಅತೀ ಅಗತ್ಯ. ಅಲ್ಲದೆ ಪಾರ್ಕ್ನಲ್ಲಿ ಕಸ, ಕಡ್ಡಿ, ಪ್ಲಾಸ್ಟಿಕ್ ತ್ಯಾಜ್ಯ ಎಸೆಯುವುದು , ಮಲಿನಗೊಳಿಸುವುದು ಕಂಡು ಬರುತ್ತಿದೆ. ಇದಕ್ಕೆ ಕಡಿವಾಣ ಹಾಕುವುದೂ ಅತೀ ಅಗತ್ಯವಾಗಿದೆ. ಅದಕ್ಕಾಗಿ ನಿರ್ವಹಣೆ ಮತ್ತು ಉಸ್ತುವಾರಿಗೆ ಜನ ನಿಯೋಜನೆ ಮಾಡುವ ಅಗತ್ಯವಿದೆ.
ವಿಶ್ರಾಂತಿಗೆ ಪ್ರಶಾಂತ ಸ್ಥಳ:
ಕುರುಂಜಿಗುಡ್ಡೆ ಪಾರ್ಕ್ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ವಿರಾಮದ ವೇಳೆಯನ್ನು ಕಳೆಯಲು, ವಿಶ್ರಾಂತಿ ಪಡೆಯಲು ಅತ್ಯಂತ ಸೂಕ್ತ ಸ್ಥಳ. ಬೆಳಿಗ್ಗೆ ಮತ್ತು ಸಂಜೆ ವಾಕಿಂಗ್ ಮಾಡುವವರಿಗೂ ಅನುಕೂಲವಾಗಲಿದೆ. ಎತ್ತರದ ಪಾರ್ಕ್ನಲ್ಲಿ ಕುಳಿತು ನೋಡಬಹುದಾದ ವಿಹಂಗಮ ನೋಟ ಮನ ತಣಿಸುತ್ತದೆ. ವಿಶ್ರಾಂತಿಯ ಸಮಯವನ್ನು ಕಳೆಯಲು ಅತೀ ಸೂಕ್ತ ಸ್ಥಳ ಎಂದು ಇಲ್ಲಿಗೆ ಬರುವ ಸಾರ್ವಜನಿಕರು ಸಾಕ್ಷೀಕರಿಸುತ್ತಾರೆ.
ಪಾರ್ಕ್ಗೆ ಹೋಗಲು ಕೆವಿಜಿ ಜಂಕ್ಷನ್ನಿಂದ ಸುಂದರ ಕಾಂಕ್ರೀಟ್ ರಸ್ತೆ ಇದೆ. ನ್ಯಾಯಾಲಯದ ಸಮೀಪವಾಗಿ ಕುರುಂಜಿಗುಡ್ಡೆಗೆ ಕಾಂಕ್ರೀಟ್ ರಸ್ತೆ ಸಾಗುತ್ತದೆ.
“ಕುರುಂಜಿಗುಡ್ಡೆಯ ಪಾರ್ಕ್ನಲ್ಲಿ ಕಮಾನು ನಿರ್ಮಾಣ, ವಾಕಿಂಗ್ ಪಥ ನಿರ್ಮಾಣ ಮತ್ತಿತರ ಕೆಲವು ಕೆಲಸಗಳು ಬಾಕಿ ಇದೆ. ಲಭ್ಯವಿರುವ ಸ್ಥಳವನ್ನು ಬಳಸಿ ಇನ್ನಷ್ಟು ಅಭಿವೃದ್ಧಿ ಕಾರ್ಯ ನಡೆಸಲು ಯೋಜನೆ ರೂಪಿಸಲಾಗುವುದು. ಒಳಾಂಗಣ ಕ್ರೀಡಾಂಗಣದ ಮುಂಭಾಗದಲ್ಲಿ ಉದ್ಯಾನವನ ರೂಪಿಸಿ ಮಧ್ಯೆ ಚಿಮ್ಮುವ ಕಾರಂಜಿ ಮಾಡುವ ಬಗ್ಗೆ ಯೋಚನೆ ನಡೆಸಲಾಗುವುದು.
ಪಾರ್ಕ್ನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ಜನವನ್ನು ನಿಯೋಜನೆ ಮಾಡಲಾಗುವುದು”
-ವಿನಯಕುಮಾರ್ ಕಂದಡ್ಕ.
ಅಧ್ಯಕ್ಷರು.ನ.ಪಂ.ಸುಳ್ಯ.