ಬಟುಮಿ: ಟೈಬ್ರೇಕರ್ನ ಕೊನೆಯ ಎರಡು ಬ್ಲಿಟ್ಜ್ ಗೇಮ್ಗಳಲ್ಲಿ ಜಯಶಾಲಿಯಾದ ಭಾರತದ ಗ್ರ್ಯಾಂಡ್ ಮಾಸ್ಟರ್ ಕೋನೇರು ಹಂಪಿ ಗುರುವಾರ 5–3 ರಿಂದ ಚೀನಾದ ಟಿಂಗ್ಜೀ ಲೀ ಅವರನ್ನು ಪರಾಭವಗೊಳಿಸಿ ಫಿಡೆ ಮಹಿಳಾ ಚೆಸ್ ವಿಶ್ವಕಪ್ ಫೈನಲ್ ತಲುಪಿದರು. ಇದರೊಂದಿಗೆ ಫೈನಲ್ ಭಾರತದ ಆಟಗಾರ್ತಿಯರ ಮಧ್ಯೆ ನಡೆಯಲಿದೆ.ಆಂಧ್ರ ಪ್ರದೇಶದ ಗುಡಿವಾಡದ ಹಂಪಿ ಶನಿವಾರ ಆರಂಭವಾಗುವ
ಐತಿಹಾಸಿಕ ಫೈನಲ್ ನಲ್ಲಿ ನಾಗ್ಪುರದ ಯುವ ಆಟಗಾರ್ತಿ ದಿವ್ಯಾ ದೇಶಮುಖ್ ಅವರನ್ನು ಎದುರಿಸಲಿದ್ದಾರೆ.
ಹಂಪಿ ಮತ್ತು ಟಿಂಗ್ಜೀ ನಡುವಣ ಎರಡು ಕ್ಲಾಸಿಕಲ್ ಪಂದ್ಯ ಡ್ರಾ ಆಗಿ ಸ್ಕೋರ್ 1–1 ಸಮನಾಗಿತ್ತು. ಗುರುವಾರ 15 ನಿಮಿಷಗಳ ರ್ಯಾಪಿಡ್ ಟೈಬ್ರೇಕ್ನ ಮೊದಲ ಎರಡು ಪಂದ್ಯಗಳು ಸಹ ಡ್ರಾ ಆದವು. ಮೂರನೇ ಪಂದ್ಯದಲ್ಲಿ ಟಿಂಗ್ಜೀ ಗೆದ್ದರು. ಆದರೆ ಒತ್ತಡದಲ್ಲೂ ಧೃತಿಗಡದೇ ಆಡಿದ ಹಂಪಿ ನಾಲ್ಕನೇ ಪಂದ್ಯ 52 ನಡೆಗಳಲ್ಲಿ ಗೆದ್ದೇಬಿಟ್ಟರು. ಸ್ಕೋರ್ 3–3 ರಲ್ಲಿ ಸಮನಾಯಿತು. ಹೀಗಾಗಿ ನಿಯಮದಂತೆ ಬ್ಲಿಟ್ಝ್ ಪಂದ್ಯಗಳನ್ನು ಆಡಿಲಾಯಿತು. ಮೊದಲ ಪಂದ್ಯದಲ್ಲಿ ತಾಂತ್ರಿಕ ನೈಪುಣ್ಯ ತೋರಿದ ಹಂಪಿ ಸುಲಭವಾಗಿ ಗೆದ್ದರು. ಹೀಗಾಗಿ ಅವರಿಗೆ ಟಿಂಗ್ಜೀ ವಿರುದ್ಧ ಕೊನೆಯ ಪಂದ್ಯ ಡ್ರಾ ಮಾಡಿಕೊಂಡರೂ ಸಾಕಿತ್ತು. ಆದರೆ ಅವರು ಉತ್ತಮ ಕೌಶಲ ಮೆರೆದು ಆ ಪಂದ್ಯವನ್ನೂ ಗೆದ್ದು ಅರ್ಹ ರೀತಿಯಲ್ಲೇ ಫೈನಲ್ ತಲುಪಿದರು.ದಿವ್ಯಾ ಅವರಂತೆ ಹಂಪಿ ಸಹ ಸೆಮಿಫೈನಲ್ ಗೆಲುವಿನಿಂದ ಮುಂದಿನ ವರ್ಷ ನಡೆಯಲಿರುವ ಕ್ಯಾಂಡಿಡೇಟ್ಸ್ ಟೂರ್ನಿಯಲ್ಲಿ ಆಡುವ ಅರ್ಹತೆಯನ್ನು ಸಂಪಾದಿಸಿದರು. ವಿಶ್ವ ಚಾಂಪಿಯನ್ಗೆ ಸವಾಲು ಹಾಕುವ ಆಟಗಾರ್ತಿಯನ್ನು ನಿರ್ಧರಿಸಲು ನಡೆಯುವ ಕ್ಯಾಂಡಿಡೇಟ್ಸ್ ಟೂರ್ನಿಯಲ್ಲಿ ಎಂಟು ಮಂದಿ ಮಾತ್ರ ಅರ್ಹತೆ ಪಡೆಯುತ್ತಾರೆ.





