ಸೆಂಚುರಿಯನ್: ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಬ್ಯಾಟರ್ ಕೆ.ಎಲ್. ರಾಹುಲ್ ಅಮೋಘ ಶತಕ ಬಾರಿಸಿದ್ದಾರೆ.ರಾಹುಲ್ ಶತಕದ ನೆರವಿನಿಂದ ಭಾರತ ತಂಡವು ಮೊದಲ ಇನಿಂಗ್ಸ್ನಲ್ಲಿ 245 ರನ್ಗೆ ಆಲ್ ಔಟ್ ಆಯಿತು. ಪ್ರಥಮ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ರಾಹುಲ್ 133 ಎಸೆತಗಳಲ್ಲಿ
ಶತಕ ಗಳಿಸಿದರು. ಆ ಮೂಲಕ ಸೆಂಚುರಿಯನ್ ಕ್ರೀಡಾಂಗಣದಲ್ಲಿ ಎರಡು ಶತಕ ಗಳಿಸಿದ ಪ್ರವಾಸಿ ತಂಡದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಭಾಜನರಾದರು. 2021-22ರ ಪ್ರವಾಸದಲ್ಲೂ ಇದೇ ಮೈದಾನದಲ್ಲಿ ರಾಹುಲ್ 123 ರನ್ ಸಾಧನೆ ಮಾಡಿದ್ದರು.
ಸಮಯೋಚಿತ ಇನಿಂಗ್ಸ್ ಕಟ್ಟಿದ ರಾಹುಲ್ 137 ಎಸೆತಗಳಲ್ಲಿ 14 ಬೌಂಡರಿ, ನಾಲ್ಕು ಸಿಕ್ಸರ್ ನೆರವಿನಿಂದ 101 ರನ್ ಗಳಿಸಿದರು.ದಕ್ಷಿಣ ಆಫ್ರಿಕಾದ ಪರ ಕಗಿಸೊ ರಬಾಡ ಐದು ಮತ್ತು ನ್ಯಾಂಡ್ರೆ ಬರ್ಗರ್ ಮೂರು ವಿಕೆಟ್ ಗಳಿಸಿದರು. ಮೊದಲ ದಿನದ ಅಂತ್ಯಕ್ಕೆ ಭಾರತ ಎಂಟು ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿತ್ತು. 238 ರನ್ನಿಗೆ ಭಾರತ ಒಂಬತ್ತನೇ ವಿಕೆಟ್ ಕಳೆದುಕೊಂಡಿತು. ಮೊಹಮ್ಮದ್ ಸಿರಾಜ್ ಐದು ರನ್ ಗಳಿಸಿ ಔಟ್ ಆದರು. ಈ ವೇಳೆ ಕ್ರೀಸಿಗಿಳಿದ ಚೊಚ್ಚಲ ಪಂದ್ಯ ಆಡುತ್ತಿರುವ ಪ್ರಸಿದ್ಧ ಕೃಷ್ಣ, ರಾಹುಲ್ ಅವರಿಗೆ ಶತಕ ಗಳಿಸಲು ನೆರವಾದರು. ಸಿಕ್ಸರ್ ಬಾರಿಸುವ ಮೂಲಕ ರಾಹುಲ್ ಶತಕವನ್ನು ಪೂರ್ಣಗೊಳಿಸಿದರು.
ಇತ್ತೀಚಿನ ವರದಿ ಬಂದಾಗ ದಕ್ಷಿಣ ಆಫ್ರಿಕಾ ಒಂದು ವಿಕೆಟ್ ನಷ್ಟಕ್ಕೆ 70 ರನ್ ಗಳಿಸಿದೆ.








