ಕೋಲ್ಕತ್ತ: ಐಪಿಎಲ್ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್) ತಂಡ, ಸನ್ ರೈಸರ್ಸ್ ಹೈದರಾಬಾದ್ (ಎಸ್ಆರ್ಎಚ್) ತಂಡದ ಎದುರು 4 ರನ್ಗಳ ರೋಚಕ ಜಯ ಗಳಿಸಿದೆ.ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್, 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿ, 209 ರನ್ಗಳ ಗುರಿ ನೀಡಿತ್ತು. ಇದಕ್ಕೆ ಉತ್ತರವಾಗಿ
ಎಸ್ಆರ್ಎಚ್ ತಂಡ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 204 ರನ್ ಗಳಿಸಿ, 4 ರನ್ ಅಂತರದಲ್ಲಿ ಸೋಲೊಪ್ಪಿಕೊಂಡಿತ್ತು. ಎಸ್ಆರ್ಎಚ್ ವಿಕೆಟ್ ಕೀಪರ್ ಬ್ಯಾಟರ್ ಹೆನ್ರಿಕ್ ಕ್ಲಾಸೆನ್ ಹಾಗೂ ಶಹಬ್ಬಾಝ್ ಅಹಮ್ಮದ್ ತೋರಿದ ಹೋರಾಟ ಫಲ ನೀಡಲಿಲ್ಲ. ಎಂಟು ಭರ್ಜರಿ ಸಿಕ್ಸರ್ ನೆರವಿನಿಂದ 29 ಎಸೆತಗಳಲ್ಲಿ 62 ರನ್ ಸಿಡಿಸಿದ ಕ್ಲಾಸೆನ್ ಹಾಗೂ 5 ಎಸೆತಗಳಲ್ಲಿ16 ರನ್ ಬಾರಿಸಿದ ಶಹಬಾಝ್ ಕೊನೆಯ ಓವರ್ನಲ್ಲಿ ಔಟ್ ಆಗುವುದರೊಂದಿಗೆ ಎಸ್ಆರ್ಹೆಚ್ ಗೆಲುವಿನ ಆಸೆ ಕಮರಿತು.ಹೆನ್ರಿಕ್ ಕ್ಲಾಸೆನ್ ಸ್ಫೋಟಕ ಬ್ಯಾಟಿಂಗ್ ಕೊನೆ ಕ್ಷಣದವರೆಗೂ ರೋಚಕ ಕ್ಷಣಗಳನ್ನು ನೀಡಿತು.ಆದರೆ, ಕೊನೇ ಓವರ್ನಲ್ಲಿ ಶಿಸ್ತಿನ ಬೌಲಿಂಗ್ ಪ್ರದರ್ಶನ ತೋರಿದ ಹರ್ಷಿತ್ ರಾಣಾ, ಎಸ್ಆರ್ಎಚ್ ಕೈಯಿಂದ ಜಯ ಕಸಿದುಕೊಂಡರು. ಹೈದರಾಬಾದ್ ಪರ
ಮಯಾಂಕ್ ಅಗರ್ವಾಲ್ (32, 21ಎ), ಅಭಿಷೇಕ್ ಶರ್ಮಾ (32, 19ಎ), ರಾಹುಲ್ ತ್ರಿಪಾಠಿ (20, 20ಎ), ಆ್ಯಡನ್ ಮಾರ್ಕರಂ(18, 13ಎ), ಅಬ್ದುಲ್ ಸಮದ್(15, 11ಎ) ರನ್ ಗಳಿಸಿದರು.ಕೆಕೆಆರ್ ತಂಡದ ಹರ್ಷಿತ್ ರಾಣಾ 4 ಓವರ್ನಲ್ಲಿ 33 ರನ್ ನೀಡಿ 3 ವಿಕೆಟ್ ಕಬಳಿಸಿದ್ದಾರೆ. ರಸೆಲ್ 2 ಓವರ್ಗೆ 25 ರನ್ ನೀಡಿ 2 ವಿಕೆಟ್ ಪಡೆದುಕೊಂಡಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 105 ರನ್ಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಆ್ಯಂಡ್ರೋ ರಸೆಲ್ ಗಳಿಸಿದ ಅರ್ಧಶತಕ ಸಹಾಯ ಮಾಡಿತು. ಕೇವಲ 25 ಎಸೆತಗಳಲ್ಲಿ ರಸೆಲ್ ಅಜೇಯ 64 ಸಿಡಿಸಿದರು.ಪಿ ಸಾಲ್ಟ್ (54, 40ಎ, 3 ಬೌಂಡರಿ, 3 ಸಿಕ್ಸರ್), ಸುನಿಲ್ ಪಿಲಿಪ್ ನರೈನ್ (2, 4ಎ), ವೆಂಕಟೇಶ್ ಅಯ್ಯರ್ (7, 5ಎ), ಶ್ರೇಯಸ್ ಅಯ್ಯರ್ (0, 2ಎ), ನಿತೀಶ್ ರಾಣಾ (9, 11ಎ) , ರಮದೀಪ್ ಸಿಂಗ್ (35 , 17ಎ), ರಿಂಕು ಸಿಂಗ್ (23, 15ಎ), ಮಿಚೆಲ್ ಸ್ಟಾರ್ಕ್ (ಔಟಾಗದೆ 6, 3ಎ) ರನ್ ಗಳಿಸಿದರು.









