ಸುಳ್ಯ: ಸುಳ್ಯ ಹಳೆಗೇಟಿನ ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ವತಿಯಿಂದ 24 ನೇ ವರ್ಷದ ಶ್ರೀ ಕೇಶವಕೃಪಾ ವೇದ-ಯೋಗ-ಕಲಾ ಶಿಬಿರ-2024 ಏ.21ರಿಂದ ಮೇ.19ರ ತನಕ ನಡೆಯಲಿದೆ ಎಂದು ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಅಧ್ಯಕ್ಷ ಪುರೋಹಿತ ನಾಗರಾಜ ಭಟ್ ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಿರಂತರ 23 ವರ್ಷಗಳಿಂದ ವೇದ ಶಿಬಿರ ನಡೆಯುತ್ತಿದ್ದು ಈ ವರ್ಷದ ವೇದ ಶಿಬಿರಕ್ಕಾಗಿ ಎಲ್ಲಾ
ಸಿದ್ಧತೆಗಳು ನಡೆದಿದೆ. ಕರ್ನಾಟಕ, ಕೇರಳ ಸೇರಿ ವಿವಿಧ ರಾಜ್ಯಗಳಿಂದ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಲಿದ್ದಾರೆ. 207 ಮಂದಿ ಈಗಾಗಲೇ ನೋಂದಾಯಿಸಿ ಕೊಂಡಿದ್ದಾರೆ ಎಂದರು.
ಶಿಬಿರದ ಉದ್ಘಾಟನೆ:
ಏ.21ರಂದು ಪೂ.10-30ಕ್ಕೆ “ಶ್ರೀ ಕೇಶವಕಿರಣ” ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಯುಎಸ್ಎಯ ವಿದ್ವಾನ್ ರೂಪೇಶ್ ಆಚಾರ್ಯ ಮತ್ತು ಶ್ರೀಮತಿ ಶ್ರುತಿ ರೂಪೇಶ್ ಆಚಾರ್ಯ ಶಿಬಿರವನ್ನು ಉದ್ಘಾಟಿಸುವರು. ಕೇಶವ ಕೃಪಾ ವೇದ ಯೋಗ ಕಲಾ ಶಿಬಿರದ ಸಂಚಾಲಕರಾದ ವೇ. ಮೂ. ಅಭಿರಾಮ ಶರ್ಮ ಅಧ್ಯಕ್ಷತೆ ವಹಿಸುವರು.ಮಂಕು ತಿಮ್ಮನ ಕಗ್ಗದ ಪ್ರವಚನಕಾರರಾದ ವಿದ್ವಾನ್ ಜಿ.ಎಸ್.ನಟೇಶ್ ಶಿವಮೊಗ್ಗ ದಿಕ್ಸೂಚಿ ಭಾಷಣ ಮಾಡುವರು.
ಪ್ರಗತಿಪರ ಕೃಷಿಕರು ಹಾಗೂ ಶಿಬಿರದ ಹಿರಿಯ ವಿದ್ಯಾರ್ಥಿ ಸುಬ್ರಹ್ಮಣ್ಯ ಭಟ್ ತೊಂಡೆಮೂಲೆ ಮುಖ್ಯ ಅತಿಥಿಗಳಾಗಿ ಭಾಗವಹಿಸುವರುಮ
ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಗೌರವಾಧ್ಯಕ್ಷ ಗೋಪಾಲಕೃಷ್ಣ ಭಟ್ ವಗೆನಾಡು ಉಪಸ್ಥಿತರಿರುವರು ಎಂದು ಪುರೋಹಿತ ನಾಗರಾಜ ಭಟ್ ತಿಳಿಸಿದರು.
ಶಿಬಿರದಲ್ಲಿ ಏನೇನು ಇರಲಿದೆ:
ತಿಂಗಳ ಕಾಲ ನಡೆಯುವ ಉಚಿತ ಶಿಬಿರದಲ್ಲಿ ವೇದಾಧ್ಯಯನ- ಯೋಗಾಭ್ಯಾಸದೊಂದಿಗೆ ರಂಗಪಾಠ, ಮೂಕಾಭಿನಯ, ಬಣ್ಣದ ಹೂಗಳು, ಆರೋಗ್ಯ ಮಾಹಿತಿ, ಯಕ್ಷಗಾನ, ರಂಗಗೀತೆಗಳು, ಶ್ರೀ ಪೂಜಾ ಪ್ರಯೋಗ ಪಾಠ ಪ್ರಾತ್ಯಕ್ಷಿಕೆ, ರಂಗಾಭಿನಯ, ಮುಖವಾಡ, ಭಜನೆ, ಈಜು ತರಬೇತಿ, ಜಾದೂ, ವ್ಯಂಗ್ಯ ಚಿತ್ರ,ಗೊಂಬೆ ತಯಾರಿ, ಜಾನಪದ ನೃತ್ಯ, ಪೋಲೀಸ್ ಮಾಹಿತಿ,ನಾಟಕ, ಮಿಮಿಕ್ರಿ ಚಿತ್ರಕಲೆ, ಅಗ್ನಿಶಾಮಕ ಪ್ರಾತ್ಯಕ್ಷಿಕೆ, ಕಸದಿಂದ ರಸ, ಹಾವು ನಾವು ಪರಿಸರ ಪ್ರಾತ್ಯಕ್ಷಿಕೆ, ಹಾಡು-ಕುಣಿತ,
ಗೀತ-ಗಾನ-ಸಾಹಿತ್ಯ ಇರಲಿದೆ ಎಂದು ನಾಗರಾಜ ಭಟ್ ತಿಳಿಸಿದರು.
ಯೋಗ ಶಿಬಿರದ ಬಗ್ಗೆ ಒಂದಿಷ್ಟು:
ವೇದಗಳು ಪ್ರಾಚೀನ ಕಾಲದಿಂದಲೇ ಈ ನಾಡಿನುದ್ದಕ್ಕೂ ಹರಿಯುತ್ತಿರುವ ನಿತ್ಯ ನಿರಂತರ ಸಾಂಸ್ಕೃತಿಕ ಪ್ರವಾಹ! ವೇದ ಸಾಹಿತ್ಯವು ಮಾನವೀಯ ಮೌಲ್ಯಗಳ ಗರ್ಭ, ಪರಂಪರೆಯ ಆಸ್ತಿ. ವೇದೋಪನಿಷತ್ತುಗಳ ಆಲೋಚನೆಗಳು ಮನಸ್ಸಿನ ಕೊಳೆಯನ್ನು ತೊಳೆದು ಸ್ವಚ್ಛಗೊಳಿಸುವ ಅಂತರಗಂಗೆ, ವೇದಗಳ ಆಳದಲ್ಲಿ ಘನತೆವೆತ್ತ ಭಾರತದ ಪರಿಚಯವಿದೆ. ಭಾವೀ ಭಾರತದ ಸೂರ್ಯ ಸ್ಪಷ್ಟ ನೋಟವಿದೆ. ಮಾತ್ರವಲ್ಲ ಜಾಗತಿಕ ಮಟ್ಟದಲ್ಲಿ ಭಾರತವನ್ನು ತಲೆಯೆತ್ತಿ ನಿಲ್ಲುವಂತೆ ಮಾಡುವ ಸ್ವಾಭಿಮಾನದ ಪಾಠವಿದೆ! ಆದುದರಿಂದ ವೇದಗಳು ರಾಷ್ಟ್ರಜೀವನದ ಅವಿಭಾಜ್ಯ ಅಂಗ. ವೇದಗಳಲ್ಲಿರುವ ಒತ್ತಕ್ಷರಗಳು, ಅಲ್ಪಪ್ರಾಣ, ಮಹಾಪ್ರಾಣಗಳು, ದೀರ್ಘ ಹ್ರಸ್ವಗಳು, ಸಂಧಿಗಳು, ಅಲಂಕಾರಗಳು, ಉದಾತ್ತ ಅನುದಾತ್ತ ಸ್ವರಿತಗಳು ಮೊದಲಾದ ವ್ಯಾಕರಣಬದ್ಧ ಸಂಗತಿಗಳು ಜಗತ್ತಿನ ಯಾವ
ವಿಶ್ವವಿದ್ಯಾನಿಲಯಗಳಲ್ಲೂ ಸಿಗದ ಭಾಷಾ ಪ್ರೌಢಿಮೆಯನ್ನು ತಂದು ಕೊಡುವುದರಲ್ಲಿ ಸಂದೇಹವಿಲ್ಲ. ಆದುದರಿಂದ ವೇದಗಳಲ್ಲಿ ಹಿಡಿತ ಸಾಧಿಸಿದವನ ಮಾತುಗಳಲ್ಲಿ ಸಾಹಿತ್ಯ ಸೌಂದರ್ಯವು ಮೈಗೂಡಿಕೊಂಡು ಕಾಂತೀಯ ಸೆಳೆತವು ಬೆರೆತುಕೊಳ್ಳುತ್ತದೆ, ಮೂವತ್ತೈದು ದಿನಗಳ ವೇದ ಶಿಬಿರವೆಂಬುದು ಹತ್ತಾರು ವರುಷಗಳೇ ಬೇಕಾದ ಈ ವೇದಮಂತ್ರಗಳ ಕಲಿಕೆಯ ಒಂದು ಝಲಕ್ ಮಾತ್ರ. ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನ’ವು ಕಳೆದ 23 ವರುಷಗಳಿಂದ ನಡೆಸುತ್ತಿರುವ ವೇದ-ಯೋಗ-ಕಲಾ ಶಿಬಿರವು ಋಷಿ ಕಾಲದ ಗುರುಕುಲದ ಮಾದರಿಯನ್ನೂ ಪರಿಚಯಿಸುತ್ತದೆ. ಕಾಲದ ವಾಯುವೇಗದ ಬೆಳವಣಿಗೆಗಳಿಗೂ ಪರಂಪರೆಗೆ ಗಾಯವಾಗದ ರೀತಿಯಲ್ಲಿ ಒಗ್ಗಿಕೊಳ್ಳುತ್ತದೆ. ವೇದ ಮಂತ್ರಗಳ ಅನುರಣನಗಳ ನಡುವೆ ಸಾವಿರಾರು ವರುಷಗಳ ಹಿಂದಿನ ಭಾರತದ ದರ್ಶನವನ್ನು ಮಾಡಿಕೊಳ್ಳುವ ಮಕ್ಕಳು ಒಮ್ಮೊಮ್ಮೆ ಆಧುನಿಕ ಬೇಸಿಗೆ ಶಿಬಿರಗಳ ಹಾಡು – ಕುಣಿತ, ರಂಗಭೂಮಿ, ಚಿತ್ರಕಲೆ, ಅಭಿನಯಗೀತೆಗಳು, ಜಾದೂ, ಪೇಪರ್ ಕಟ್ಟಿಂಗ್ ಮೊದಲಾದವುಗಳಲ್ಲಿ ತೊಡಗಿಸಿಕೊಳ್ಳುತ್ತಾ ಹಾಡುತ್ತಾರೆ, ಕುಣಿಯುತ್ತಾರೆ. ಸಂಭ್ರಮಿಸುತ್ತಾರೆ. ಮತ್ತೊಮ್ಮೆ ಯಕ್ಷಗಾನದ ಭೂಮಿಯಲ್ಲಿ ರಾಮಾಯಣ ಮಹಾಭಾರತಗಳನ್ನು ನೆನಪಿಸಿಕೊಳ್ಳುತ್ತಾರೆ. ಯೋಗಾಸನ, ಪ್ರಾಣಾಯಾಮಗಳ ಮೂಲಕ ಭಾರತೀಯ ಜೀವನಪದ್ಧತಿಯ ಆರೋಗ್ಯಕರ ಬದುಕಿನ ಪಯಣವನ್ನೂ ಸಂಕಲ್ಪಿಸಿಕೊಳ್ಳುತ್ತಾರೆ. ಒಟ್ಟಿನಲ್ಲಿ ಹೊಸಚಿಗುರಿನ ಮೂಲಕ ಹಳೆಬೇರಿನ ಹಿರಿಮೆಯನ್ನು ಸಾರಿ ಹೇಳುವ ವಿಭಿನ್ನ ಆಯಾಮ ನಮ್ಮ ಪ್ರತಿಷ್ಠಾನದ ಆಯ್ಕೆ, ಇದುವರೆಗೂ ನಮ್ಮಲ್ಲಿ ತಯಾರಾದ ಸಾವಿರಾರು ವಿದ್ಯಾರ್ಥಿಗಳೇ ಶಿಬಿರದ ಬಗೆಗಿನ ಇನ್ನಷ್ಟು ಸಂಗತಿಗಳಿಗೆ ನಿರೂಪಣೆ, ಸಂಪೂರ್ಣ ಅಧ್ಯಯನದೊಂದಿಗೆ ಸಮಾಜಮುಖಿಗಳಾಗಿರುವ ವೈದಿಕ ವಿದ್ವಾಂಸರು, ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿರುವ ಕಲಾವಿದರು ಮತ್ತು ನಾಲ್ಕು ಒಳ್ಳೆಯ ನಗುಮುಖದ ಮಾತುಗಳೊಂದಿಗೆ ಪ್ರತಿಷ್ಠಾನದ ಪ್ರತೀ ಹೆಜ್ಜೆಯನ್ನೂ ಪ್ರೋತ್ಸಾಹಿಸುತ್ತಿರುವ ಸಮಾಜದ ಸಜ್ಜನಬಳಗವೇ ಶಿಬಿರವನ್ನು ಸಂಪೂರ್ಣ ಉಚಿತವಾಗಿ ಮಕ್ಕಳಿಗೆ ಸಮರ್ಪಿಸಲು ಧೈರ್ಯ ತುಂಬುವ ಸಂಪನ್ಮೂಲ ಎಂದು ನಾಗರಾಜ ಭಟ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಗೋಪಾಲಕೃಷ್ಣ ಭಟ್ ಶಿವನಿಲಯ ಉಬರಡ್ಕ, ರಾಧಾಕೃಷ್ಣ ಭಟ್ ಉಬರಡ್ಕ, ಸುಜಾತಾ ರಾಧಾಕೃಷ್ಣ ಭಟ್ ಉಪಸ್ಥಿತರಿದ್ದರು.