ಸುಳ್ಯ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಪ್ರತಿಭಾವಂತರು ಶಾಶ್ವತವಾಗಿ ಬದುಕಿರುತ್ತಾರೆ. ಪಂಪ, ಬಸವಣ್ಣ, ರಾಘವಾಂಕ, ಕುಮಾರವ್ಯಾಸ, ಕುವೆಂಪು, ಬೇಂದ್ರೆ, ಕಾರಂತರು ಈಗಲೂ ನಮ್ಮ ನಡುವೆ ಬದುಕಿದ್ದಾರೆ. ಸಾಹಿತ್ಯ ರಚನೆ ನಮ್ಮನ್ನು ಜೀವಂತವಾಗಿಡುವ ಹವ್ಯಾಸ ಎಂದು ಹಿರಿಯ ವಿದ್ವಾಂಸ ಡಾ. ಪ್ರಭಾಕರ ಶಿಶಿಲ ಹೇಳಿದ್ದಾರೆ. ಅವರು ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಕನ್ನಡ ಕಥಾ ಕಮ್ಮಟ
ನಡೆಸಿಕೊಟ್ಟು ಮಾತಾಡಿದರು. ಕಾರ್ಯಕ್ರಮವನ್ನು ಕಸಾಪ ಸುಳ್ಯ ಘಟಕ ಮತ್ತು ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ವಿಭಾಗ ಜಂಟಿಯಾಗಿ ಏರ್ಪಡಿಸಿತ್ತು.ಕನ್ನಡ ಕಥಾ ಸಾಹಿತ್ಯ ಬೆಳೆದು ಬಂದ ಬಗೆಯನ್ನು ಸೋದಾರಣವಾಗಿ ವಿವರಿಸಿದ ಅವರು ಪ್ರತಿಯೊಬ್ಬ ವ್ಯಕ್ತಿಯ ಹಿಂದೆ ಕನಿಷ್ಠ ಒಂದಾದರೂ ಕತೆ ಇದೆ. ಅದನ್ನು ಹೊರಗೆಳೆಯುವ ಪ್ರಯತ್ನವನ್ನು ಸಾಹಿತಿ ಮಾಡಬೇಕು. ಅನುಭವಗಳನ್ನು ಅಕ್ಷರರೂಪಕ್ಕೆ ನಮ್ಮದೇ ಭಾಷೆಯಲ್ಲಿ ಇಳಿಸಿದಾಗ ಸಾಹಿತ್ಯ ನಿರ್ಮಾಣವಾಗುತ್ತದೆ. ಸಾಹಿತ್ಯ ರಚನೆಯ ಉದ್ದೇಶ ಸ್ವಾತಂತ್ರ್ಯವನ್ನು ಉಳಿಸಿ ಸಮಾನತೆ ಗಳಿಸಿ ಸಂತೋಷ ಪಡುವುದು ಎಂದು ಅವರು ವಿವರಿಸಿದರು.
ಕಸಾಪ ಸುಳ್ಯ ಘಟಕದ ಅಧ್ಯಕ್ಷ ಚಂದ್ರಶೇಖರ ಪೇರಾಲು ಕಾರ್ಯಕ್ರಮ ಉದ್ಘಾಟಿಸಿದರು. ಕಾಲೇಜಿನ ಪ್ರಾಚಾರ್ಯ ಸತೀಶ ಕುಮಾರ್ ಕೊಯಿಂಗಾಜೆ ಪ್ರಾಸ್ತಾವಿಕವಾಗಿ ಮಾತಾಡಿದರು. ಕನ್ನಡ ವಿಭಾಗದ ಡಾ. ರಾಶಿ ಮತ್ತು ಆಂತರಿಕ ಗುಣಮಟ್ಟ ಖಾತರಿ ವಿಭಾಗದ ಜಯಶ್ರೀ ಕಾರ್ಯಕ್ರಮ ಸಂಯೋಜಿಸಿದರು. ಕಸಾಪ ಪ್ರತಿನಿಧಿ ರಾಮಚಂದ್ರ ಪಲ್ಲತ್ತಡ್ಕ, ಉಪನ್ಯಾಸಕರಾದ ಸರಿತಾ ಮತ್ತು ಸರಸ್ವತಿ ಕಮ್ಮಟದಲ್ಲಿ ಪಾಲ್ಗೊಂಡರು. ವಿನಯ ಎಂ. ಕಾರ್ಯಕ್ರಮ ನಿರೂಪಿಸಿದರು. ದಿವ್ಯಶ್ರೀ ವಂದಿಸಿದರು.