ಸುಳ್ಯ:ಬಿಜೆಪಿ ನಾಯಕ ಕರುಣಾಕರ ಅಡ್ಪಂಗಾಯ ಮತ್ತು ಅಜ್ಜಾವರ ಗ್ರಾ.ಪಂ.ಮಾಜಿ ಅಧ್ಯಕ್ಷೆ ಬೀನಾ ಕರುಣಾಕರ ಅಡ್ಪಂಗಾಯ ಅವರು ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಹರೀಶ್ ಕುಮಾರ್ ಸಮ್ಮುಖದಲ್ಲಿ
ಕಾಂಗ್ರೆಸ್ ಗೆ ಸೇರ್ಪಡೆಯಾದರು. ಈ ಹಿಂದೆ ಸುಳ್ಯ ಬಿಜೆಪಿ ಮಂಡಲ ಸಮಿತಿ ಉಪಾಧ್ಯಕ್ಷ, ಜಾಲ್ಸೂರು ಶಕ್ತಿಕೇಂದ್ರದ ಅಧ್ಯಕ್ಷ, ಸಿಎ ಬ್ಯಾಂಕ್ ಉಪಾಧ್ಯಕ್ಷರಾಗಿದ್ದ ಕರುಣಾಕರ ಅಡ್ಪಂಗಾಯ ಮತ್ತು ಅಜ್ಜಾವರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಬೀನಾ ಕರುಣಾಕರ ಅವರನ್ನು ಕಾಂಗ್ರೆಸ್ ಪಕ್ಷದ ಧ್ವಜ ನೀಡಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ದ ಕ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಪಕ್ಷಕ್ಕಕೆ ಸೇರ್ಪಡೆ ಮಾಡಿದರು. ಸುಳ್ಯ ಸಿಎ ಬ್ಯಾಂಕ್ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯೊಂದಿಗೆ ಮುನಿಸಿಕೊಂಡಿದ್ದ ಕರುಣಾಕರ ಅಡ್ಪಂಗಾಯ ಅವರು ಸಹಕಾರ ಸಂಘ ಸ್ಥಾಪಿಸಿ ಕಾಂಗ್ರೆಸ್ ಬೆಂಬಲದೊಂದಿಗೆ ಬಿಜೆಪಿ ನೇತೃತ್ವದ ಸಹಕಾರ ಭಾರತಿ ವಿರುದ್ಧ ಸ್ಪರ್ಧಿಸಿದ್ದರು. ಆ ಬಳಿಕ ಕರುಣಾಕರ ಅಡ್ಪಂಗಾಯ ಕಾಂಗ್ರೆಸ್ ಸೇರ್ಪಡೆಯಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಇದೀಗ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ ನೇತೃತ್ವ ವಹಿಸಿ ಇವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿದ್ದಾರೆ.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ, ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ, ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಎಂ ವೆಂಕಪ್ಪ ಗೌಡ, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ,ಅಶೋಕ್ ನೆಕ್ರಾಜೆ, ಲೀಲಾ ಮನಮೋಹನ, ಹಸೈನಾರ್ ಹಾಜಿ ಗೋರಡ್ಕ, ಶಿವರಾಮ ರೈ, ಹರೀಶ್ ಇಂಜಾಡಿ ಮೊದಲಾದವರು ಉಪಸ್ಥಿತರಿದ್ದರು.