ಸುಳ್ಯ: ತಾಲೂಕಿನ ಮಂಡೆಕೋಲು ಗ್ರಾಮದ ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನ ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿದ್ದು, ಇದೇ ದೇವಸ್ಥಾನಕ್ಕೆ ಸಂಬಂಧಪಟ್ಟ ಕಣೆಮರಡ್ಕ ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಎಪ್ರಿಲ್ 13 ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ದೈವದ ಪುನರ್ ಪ್ರತಿಷ್ಠಾ ಕಾರ್ಯಕ್ರಮಗಳು ನಡೆಯಲಿವೆ. ಎಪ್ರಿಲ್ 13ರ ಶನಿವಾರ ಸಂಜೆ
6.45 ಕ್ಕೆ ದೀಪಾರಾಧನೆ, 7 ಗಂಟೆಗೆ ಕುತ್ತಿಪೂಜೆ ನಡೆಯಲಿದ್ದು ಬಳಿಕ ಅನ್ನ ಸಂತರ್ಪಣೆ ನಡೆಯಲಿದೆ. ಎಪ್ರಿಲ್ 14ರ ಭಾನುವಾರ ಬೆಳಿಗ್ಗೆ 10.56 ಕ್ಕೆ ಉಗ್ರಾಣ ತುಂಬಿಸುವ ಕಾರ್ಯಕ್ರಮ ನಡೆಯಲಿದೆ. ಸಂಜೆ 4.30 ಕ್ಕೆ ಪೂರ್ಣ ಕುಂಭ ಸ್ವಾಗತದೊಂದಿಗೆ ತಂತ್ರಿಗಳ ಆಗಮನವಾಗಿ, ಸ್ಥಳ ಶುದ್ಧಿ, ವಾಸ್ತು ಹೋಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದು ಬಳಿಕ
ಅನ್ನಸಂತರ್ಪಣೆ ನಡೆಯಲಿದೆ.
ಎಪ್ರಿಲ್ 15ರ ಸೋಮವಾರ ಪ್ರಾತಃಕಾಲ 6 ರಿಂದ ಗಣಪತಿ ಹವನ, ಕಲಶಪೂಜೆ ನಡೆಯಲಿದೆ. ಬಳಿಕ ವಿಷ್ಣುಮೂರ್ತಿ ದೈವದ ಪುನರ್ ಪ್ರತಿಷ್ಠೆ, ಗುಳಿಗ ದೈವದ ಪ್ರತಿಷ್ಠೆ ಹಾಗೂ ಕಲಶಾಭಿಷೇಕ ನಡೆಯಲಿದೆ. ನಂತರ ಮಹಾವಿಷ್ಣು ಭಜನಾ ಸಂಘ ಹಾಗೂ ಅಯ್ಯಪ್ಪ ಸ್ವಾಮಿ ಭಜನಾ ಮಂದಿರ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಬಳಿಕ ಅನ್ನಸಂತರ್ಪಣೆಯಾಗಲಿದೆ. ಸಂಜೆ 7 ಕ್ಕೆ ವಿಷ್ಣುಮೂರ್ತಿ ದೈವದ ಭಂಡಾರ ತೆಗೆದ ಬಳಿಕ ದೈವದ ತೊಡಂಙಲ್ ಜರುಗಿ, ನಂತರ ಅನ್ನ ಸಂತರ್ಪಣೆ ನಡೆಯಲಿದೆ.
ಎಪ್ರಿಲ್ 16 ರಂದು ಬೆಳಿಗ್ಗೆ 10 ಕ್ಕೆ ವಿಷ್ಣುಮೂರ್ತಿ ದೈವದ ನಡಾವಳಿ ನಡೆಯಲಿದೆ. ನಂತರ ಪ್ರಸಾದ ವಿತರಣೆಯ ಬಳಿಕ ಅನ್ನ ಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ 2 ರ ನಂತರ ಮುಳ್ಳುಗುಳಿಗನ ಕೋಲ ನಡೆಯಲಿದೆ. ಎಪ್ರಿಲ್ 21 ರ ಭಾನುವಾರ ಇದೇ ದೈವಸ್ಥಾನದ ಮುಂಭಾಗ ಸುದರ್ಶನ ಹೋಮ ನಡೆಯಲಿದೆ.
ನೂತನ ದೈವ ಚಾವಡಿ:
ನಾಲ್ಕೂರಿನ ದೈವಗಳ ಭಂಡಾರ ಇರುವ ಈ ಕಣೆಮರಡ್ಕ ವಿಷ್ಣುಮೂರ್ತಿ ದೈವಸ್ಥಾನಕ್ಕೂ ಊರಿನ ಮಹಾವಿಷ್ಣು ಮೂರ್ತಿ ದೇವಸ್ಥಾನಕ್ಕೂ ಒಂದಕ್ಕೊಂದು ಸಂಬಂಧವಿದೆ. ಬ್ರಹ್ಮಕಲಶೋತ್ಸವದ ಈ ಶುಭ ಸಂದರ್ಭದಲ್ಲಿ ಸುಮಾರು 30 ಲಕ್ಷ ರೂ. ವೆಚ್ಚದಲ್ಲಿ ಈ ದೈವಸ್ಥಾನದ ಚಾವಡಿ ನಿರ್ಮಾಣವಾಗಿದೆ. ಅತ್ತಿತ್ತ ನಾಲ್ಕೂ ಕಡೆ ನೀರಿಗೆ ಕೊರತೆ ಉಂಟಾಗಿದ್ದರೂ ಈ ದೈವಸ್ಥಾನದ ಎದುರು ಭಾಗದಲ್ಲೇ ಕೊರೆದ ಬಾವಿಯಲ್ಲಿ ಉತ್ತಮ ನೀರಿನ ಸೆಳೆ ದೊರಕಿರುವುದು ದೈವದ ಕಾರ್ಣಿಕ ಎಂದೇ ಇದೀಗ ಬಣ್ಣಿಸಲಾಗುತ್ತಿದೆ.