*ಗಂಗಾಧರ ಕಲ್ಲಪಳ್ಳಿ.
ಸುಳ್ಯ: ಬಿಸಿ ಬಿಸಿ ಕಲ್ತಪ್ಪಂ ಮುರಿದು ತೆಂಗಿನ ಕಾಯಿ ಚಟ್ನಿ, ಚಿಕನ್ ಸಾರು, ಮೀನು ಸಾರು ಅಥವಾ ಸಾಂಬಾರಿಗೆ ಮುಳುಗಿಸಿ ತಿನ್ನಲು ಯಾರಿಗೆ ಇಷ್ಟ ಇಲ್ಲಾ ಹೇಳಿ.. ಈ ಕಲ್ತಪ್ಪಂನ ರುಚಿಯೇ ಹಾಗೇ.. ಅದು ಪ್ರದೇಶದಿಂದ ಪ್ರದೇಶಕ್ಕೆ ವ್ಯತ್ಯಸ್ಥವಾಗಿರುತ್ತದೆ. ಈ ತಿಂಡಿಯ ಬಲು ಅಪರೂಪದ ರುಚಿಯನ್ನು ಅನುಭವಿಸಲು ನೀವು ಬೆಳ್ಳಾರೆ-ಪಂಜ ರಸ್ತೆಯಲ್ಲಿ ಬಾಳಿಲ ಸಮೀಪದ ಪಂಜಿಗಾರಿಗೆ ಬರಬೇಕು. ರಸ್ತೆಯಲ್ಲಿ ಸಾಗುವಾಗ ಪಂಜಿಗಾರಿನಲ್ಲಿ ಒಂದು ಬ್ರೇಕ್ ಹಾಕಿ ಶ್ರೀ ದುರ್ಗಾ ಎಂಬ ಚಿಕ್ಕ ಹೋಟೆಲ್ಗೆ ನುಗ್ಗಿ ಒಂದೆರಡು ತುಂಡು ಕಲ್ತಪ್ಪಂ ತಿನ್ನಬೇಕು.. ಕಲ್ತಪ್ಪಂಗೆ
ಹೀಗೂ ರುಚಿ ಸಿಗುತ್ತದೆಯೇ ಎಂದು ಅನ್ನಿಸಿ ಬಿಡುವಷ್ಟು ಖುಷಿ ಕೊಡುತ್ತದೆ.. ಕಲ್ತಪ್ಪಂ ಎಲ್ಲಾ ಹೋಟೆಲ್ಗಳಲ್ಲಿ ಸರ್ವೇ ಸಾಮಾನ್ಯವಾದ ತಿಂಡಿಯಾದರೂ ಕಲ್ತಪ್ಪಂ ರುಚಿಯಿಂದಲೇ ‘ಫೇಮಸ್’ ಆದ ಹೋಟೆಲ್ ಕೊಡಿಯಾಲದ ಕೃಷ್ಣಪ್ಪ ಗೌಡರು ನಡೆಸುವ ಶ್ರೀ ದುರ್ಗಾ ಹೋಟೆಲ್. ಕಳೆದ 30 ವರ್ಷಗಳಿಂದ ಶ್ರೀ ದುರ್ಗಾ ಹೋಟೆಲ್ ಕಲ್ತಪ್ಪಂನ ಭಿನ್ನ ರುಚಿಯನ್ನು ಉಣ ಬಡಿಸುತ್ತಿದೆ. ಬೆಳಿಗ್ಗೆ 5.30 ಕ್ಕೆ ಆರಂಭಗೊಂಡು ರಾತ್ರಿ ತನಕ ಮಧ್ಯಾಹ್ನದ ಒಂದೆರಡು ಗಂಟೆ ಊಟದ ಸಮಯ ಬಿಟ್ಟು ಉಳಿದ ಸಮಯದಲ್ಲಿ ಇಲ್ಲಿ ಕಲ್ತಪ್ಪದ್ದೇ ಕಾರುಬಾರು. ಬಂದವರೆಲ್ಲಾ ಕೇಳುವುದು ಕಲ್ತಪ್ಪಂ ಉಂಡಾ.. ರಡ್ಡ್ ಪೀಸ್ ಕಲ್ತಪ್ಪಂ ಕೊರ್ಲೆ.. ನಾಲ್ ಪೀಸ್ ಕಲ್ತಪ್ಪಂ ಪಾರ್ಸೆಲ್ ಬೋಡು.. ಹೀಗೆ ಗಾತ್ರದಲ್ಲಿ ಚಿಕ್ಕದಾದ, ರುಚಿಯಲ್ಲಿ ದೊಡ್ಡದಾದ ಈ ಹೋಟೆಲ್ ಸದಾ ಕಲ್ತಪ್ಪಮಯಂ.. ರುಚಿಕರವಾದ ಕಲ್ತಪ್ಪಂ ತುಂಡು ಮತ್ತು ಅದಕ್ಕೆ ಸಾಥ್ ನೀಡುವ ಸಾರಿನೊಂದಿಗೆ ಸದಾ ಸಮಯ ಇಲ್ಲಿ ಬಿಸಿ ಬಿಸಿ ಕಲ್ತಪ್ಪಂ ರೆಡಿ ಇರುತ್ತದೆ. ಒಲೆಯ ಬಾಣಲೆಯಲ್ಲಿ ಕಲ್ತಪ್ಪಂ ಬೇಯುತ್ತಲೇ ಇರುತ್ತದೆ.. ಅದಕ್ಕಾಗಿಯೇ ಜನರು ಕ್ಯೂನಲ್ಲಿ ಇರುತ್ತಾರೆ. ಪ್ರತಿ ದಿನ ಸುಮಾರು 20 ಕೆಜಿ ಅಕ್ಕಿ ಹಿಟ್ಟಿನ ಕಲ್ತಪ್ಪ ಮಾರಾಟ ಆಗುತ್ತದೆ.
ಚೆನ್ನಾಗಿ ನೆನೆದ ಅಕ್ಕಿಯನ್ನು ನುಣ್ಣಗೆ ರುಬ್ಬಿ, ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಉದ್ದಿನ ಬೇಳೆ, ಒಣಮೆಣಸಿನ ಕಾಯಿ, ಬೇವಿನೆಲೆ, ಸಾಸಿವೆಗಳನ್ನು ಹಾಕಿ ಒಗ್ಗರಣೆ ರೆಡಿಮಾಡಿ. ಅದಕ್ಕೆ ಅಕ್ಕಿ ಹಿಟ್ಟನ್ನು ಹಾಕಿ ಬೇಯಲು ಬಿಡಲಾಗುತ್ತದೆ. ಚೆನ್ನಾಗಿ ಬೆಂದು ಕರಿದು ಕಂದು ಬಣ್ಣಕ್ಕೆ ತಿರುಗುವ ಕಲ್ತಪ್ಪಂ ಬೆಳಗ್ಗಿನಿಂದ ರಾತ್ರಿ ತನಕ ಯಾವ ಹೊತ್ತಿಗೂ ಬಲು ರುಚಿಯಾದ ತಿಂಡಿ. ಆದುದರಿಂದಲೇ ಶ್ರೀ ದುರ್ಗಾ ಹೋಟೆಲ್ನ ಕಲ್ತಪ್ಪಂಗೆ ಬೇಡಿಕೆ ಹೆಚ್ಚು. ಕಲ್ತಪ್ಪಂ ಮಾತ್ರ ಅಲ್ಲಾ ಇಲ್ಲಿನ ಊಟದ ರುಚಿಯೂ ಫೇಮಸ್ಸೇ.. ಮಧ್ಯಾಹ್ನದ ಹೊತ್ತಿಗೆ ಇಲ್ಲಿ ಊಟಕ್ಕೂ ಜನ ಕ್ಯೂ ನಿಂತಿರುತ್ತಾರೆ. ಇಲ್ಲಿನ ಮನೆ ಊಟದ ರುಚಿ ನೀಡುವ ಅನ್ನ, ಗಂಜಿ, ಆಮ್ಲೇಟ್, ಕಬಾಬ್, ಮೀನು ಪ್ರೈ, ಮೀನು ಸಾರು, ಚಿಕನ್ ಸಾರು ಅರಸಿ ದೂರದ ಪ್ತದೇಶಗಳಿಂದಲೂ ಜನ ಬರುತ್ತಾರೆ.
ಪಾರ್ಸೆಲ್ಗೂ ಸೈ:
ಸ್ಥಳೀಯರು, ವಾಹನದಲ್ಲಿ ಪ್ರಯಾಣಿಸುವವರು ಸೇರಿ ಪ್ರತಿ ನಿತ್ಯ ನೂರಾರು ಮಂದಿ ಶ್ರೀದುರ್ಗಾ ಹೋಟೆಲ್ನ ಕಲ್ತಪ್ಪಂ ತಿನ್ನಲು ಬರುತ್ತಾರೆ. ಜೊತೆಗೆ ಹಲವಾರು ಮಂದಿ ಕಲ್ತಪ್ಪಂ ಪಾರ್ಸೆಲ್ ಪಡೆದುಕೊಂಡು ಹೋಗುತ್ತಾರೆ. ತಾಲೂಕಿನ ವಿವಿಧ ಭಾಗಗಳಿಗೆ ಹೋಗುವ ಬಸ್ನ ಸಿಬ್ಬಂದಿಗಳು ಇಲ್ಲಿ ಬಸ್ ನಿಲ್ಲಿಸಿ ಪಾರ್ಸೆಲ್ ಪಡೆದುಕೊಳ್ಳುತ್ತಾರೆ.
ಕಳೆದ ಮೂರು ದಶಕಗಳಿಂದ ರುಚಿಕರವಾದ ಆಹಾರ ಬಡಿಸುವ ‘ಕಲ್ತಪ್ಪಂ ಸ್ಪೆಷಲ್’ ಹೋಟೆಲ್ ಹಿತ ಮಿತವಾದ ದರದಲ್ಲಿ ಆಹಾರ ನೀಡುತ್ತಾರೆ. ಕೃಷ್ಣಪ್ಪ ಗೌಡರ ಜೊತೆ ಪತ್ನಿ ಲೀಲಾವತಿ, ಅಣ್ಣನ ಮಕ್ಕಳಾದ ಬಾಲಕೃಷ್ಣ, ಶರತ್ ಹೋಟೆಲ್ ಕೆಲಸಕ್ಕೆ ಸಹಾಯ ಮಾಡುತ್ತಾರೆ. ಕೃಷ್ಣಪ್ಪ ಕುಲಾಲ್ ಮಸಾಲೆ ರೆಡಿ ಮಾಡಲು ಮತ್ತಿತರ ಕೆಲಸಕ್ಕೆ ಸಹಾಯ ಮಾಡುತ್ತಾರೆ. ಈಗ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿರುವುದರಿಂದ ಹೋಟೆಲ್ ಉದ್ಯಮ ಲಾಭದಾಯಕವಾಗಿಲ್ಲ ಎನ್ನುತ್ತಾರೆ ಕೃಷ್ಣಪ್ಪ ಗೌಡರು. ಆದರೂ ತಮ್ಮ ಹೋಟೆಲ್ನ ರುಚಿ ಮತ್ತು ಗುಣಮಟ್ಟದಲ್ಲಿ ಕಡಿಮೆ ಮಾಡಲು ಆಗುವುದಿಲ್ಲಾ ಎನ್ನುತ್ತಾರವರು.