ಮುಂಬೈ:ಶಾರುಖ್ ಖಾನ್ ನಟನೆಯ ‘ಜವಾನ್’ ಸಿನಿಮಾ ಭರ್ಜರಿ ಹಿಟ್ ಆಗುತ್ತಿದ್ದು ಮೊದಲ ಎರಡು ದಿನಗಳ ಕಾಲ ಎಲ್ಲೆಡೆ ಈ ಚಿತ್ರ ಹೌಸ್ಫುಲ್ ಪ್ರದರ್ಶನ ಕಂಡಿದೆ. ಎರಡೇ ದಿನದಲ್ಲಿ ಈ ಸಿನಿಮಾ ಭರ್ಜರಿ ಕಲೆಕ್ಷನ್ ದಾಖಲೆ ಬರೆದಿದೆ. ಸೆಪ್ಟೆಂಬರ್ 7ರಂದು ‘ಜವಾನ್’ ಸಿನಿಮಾ ಬಿಡುಗಡೆ ಆಯಿತು. ಮೊದಲ ದಿನ ಹಿಂದಿ, ತೆಲುಗು, ತಮಿಳು ಭಾಷೆಗಳಿಂದ ಈ
ಸಿನಿಮಾಗೆ ಅಂದಾಜು 75 ಕೋಟಿ ರೂಪಾಯಿ ಕಲೆಕ್ಷನ್ ಆಯಿತು. ಎರಡನೇ ದಿನ ಕೂಡ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿದೆ. 2ನೇ ದಿನ 50ರಿಂದ 53 ಕೋಟಿ ರೂಪಾಯಿ ಆದಾಯ ಹರಿದು ಬಂದಿದೆ ಎರಡೇ ದಿನಕ್ಕೆ ‘ಜವಾನ್’ ಸಿನಿಮಾದ ಕಲೆಕ್ಷನ್ ಭಾರತದಲ್ಲಿ 120 ಕೋಟಿ ರೂಪಾಯಿ ದಾಟಿದೆ. ವಿದೇಶಿ ಕಲೆಕ್ಷನ್ ಸೇರಿಸಿದರೆ ಈ ಮೊತ್ತ ಇನ್ನೂ ದೊಡ್ಡದಾಗಲಿದೆ. ಮೊದಲ ದಿನ ದೇಶ ವಿದೇಶಗಳಲ್ಲಿ ಒಟ್ಟು 129 ಕೋಟಿ ಸಂಗ್ರಹ ಆಗಿತ್ತು.
ಈ ವರ್ಷ ಶಾರುಖ್ ಖಾನ್ ಅವರು ಎರಡನೇ ಸೂಪರ್ ಹಿಟ್ ಚಿತ್ರ ನೀಡಿದ್ದಾರೆ. ವರ್ಷದ ಆರಂಭದಲ್ಲಿ ‘ಪಠಾಣ್’ಸಿನಿಮಾ ಅಬ್ಬರಿಸಿತ್ತು. ಈಗ ‘ಜವಾನ್’ ಸಿನಿಮಾ ಕೂಡ ಸಖತ್ ಸದ್ದು ಮಾಡುತ್ತಿದೆ.
ತಮಿಳಿನ ಯಶಸ್ವಿ ನಿರ್ದೇಶಕ ಅಟ್ಲಿ ಅವರು ಈ ಸಿನಿಮಾದ ಮೂಲಕ ಇದೇ ಮೊದಲ ಬಾರಿಗೆ ಬಾಲಿವುಡ್ಗೆ ಕಾಲಿಟ್ಟಿದ್ದಾರೆ. ನಯನತಾರಾ, ಪ್ರಿಯಾಮಣಿ, ವಿಜಯ್ ಸೇತುಪತಿ ಮುಂತಾದ ದಕ್ಷಿಣದ ಕಲಾವಿದರು ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ದೀಪಿಕಾ ಪಡುಕೋಣೆ, ಸುನಿಲ್ ಗ್ರೋವರ್ ಮುಂತಾದವರು ಕೂಡ ‘ಜವಾನ್’ ಚಿತ್ರದ ಮೆರುಗು ಹೆಚ್ಚಿಸಿದ್ದಾರೆ.
ಮೊದಲ ಎರಡು ದಿನಗಳ ಕಾಲ ಅನೇಕ ಚಿತ್ರಮಂದಿರಗಳಲ್ಲಿ ಈ ಸಿನಿಮಾ ಹೌಸ್ಫುಲ್ ಪ್ರದರ್ಶನ ಕಂಡಿದೆ. ಆ್ಯಕ್ಷನ್ ಪ್ರಿಯರು ಈ ಸಿನಿಮಾವನ್ನು ಸಖತ್ ಇಷ್ಟಪಟ್ಟಿದ್ದಾರೆ.
ಶಾರುಖ್ ಖಾನ್ ಅವರ ‘ರೆಡ್ ಚಿಲ್ಲೀಸ್ ಎಂಟರ್ಟೇನ್ಮೆಂಟ್’ ಮೂಲಕ ‘ಜವಾನ್’ ಸಿನಿಮಾ ನಿರ್ಮಾಣ ಆಗಿದೆ. ಗೌರಿ ಖಾನ್ ಅವರು ಈ ಚಿತ್ರದ ನಿರ್ಮಾಪಕಿ. ಅದ್ದೂರಿ ಬಜೆಟ್ನಲ್ಲಿ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ.