ಕಲ್ಯಾಣಿ, ಬಂಗಾಳ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಕ್ರಿಕೆಟ್ ತಂಡವು ಇದೇ ಮೊದಲ ಬಾರಿ ರಣಜಿ ಟ್ರೋಫಿ ಟೂರ್ನಿಯ ಫೈನಲ್ ತಲುಪುವ ಮೂಲಕ ಇತಿಹಾಸ ರಚಿಸಿತು. ತಂಡದ 67 ವರ್ಷಗಳ ಇತಿಹಾಸದಲ್ಲಿ ಪ್ರಥಮ ಸಲ ಈ ಸಾಧನೆ ಮೂಡಿಬಂದಿದೆ.
ಬಂಗಾಳ ತಂಡವು 2ನೇ ಇನಿಂಗ್ಸ್ನಲ್ಲಿ ಜಮ್ಮು ಕಾಶ್ಮೀರದ ಗೆಲುವಿಗೆ
126 ರನ್ಗಳ ಗುರಿ ನೀಡಿತ್ತು. ಈ ಸುಲಭದ ಗುರಿ ಬೆನ್ನಟ್ಟಿದ ಜಮ್ಮು ಮತ್ತು ಕಾಶ್ಮೀರ ತಂಡವು 34.4 ಓವರ್ಗಳಲ್ಲಿ ಗುರಿ ತಲುಪಿ ಫೈನಲ್ ಪ್ರವೇಶಿಸಿದೆ. ಸುಲಭ ಗುರಿ ಬೆನ್ನಟ್ಟಿದ ಜಮ್ಮು ಮತ್ತು ಕಾಶ್ಮೀರ ತಂಡ ಆರಂಭಿಕ ಆಘಾತ ಅನುಭವಿಸಿತ್ತು. ಆದರೆ, ನಂತರ ಬಂದ ವಂಶಾಜ್ ಶರ್ಮಾ (ಅಜೇಯ 43) ಹಾಗೂ ಅಅಬ್ದುಲ್ ಸಮದ್ (ಅಜೇಯ 30) ರನ್ಗಳ ನೆರವಿನಿಂದ ಗುರಿ ತಲುಪಿತು.ಈ ಪಂದ್ಯದಲ್ಲಿ ಕಾಶ್ಮೀರದ ವೇಗಿ ಅಕೀಬ್ ನಬಿ ಅವರು ಒಟ್ಟು 9 ವಿಕೆಟ್ ಗಳಿಸಿದರು. ಆ ಮೂಲಕ ಬಂಗಾಳದ ಉತ್ತಮ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕಿದರು.
1959–60ರ ಋತುವಿನಲ್ಲಿ ಮೊದಲ ಬಾರಿ ಜಮ್ಮು–ಕಾಶ್ಮೀರ ತಂಡವು ಆಡಿತ್ತು. ಇತ್ತೀಚಿನವರೆಗೂ ಬಲಾಢ್ಯ ತಂಡಗಳ ಸಾಲಿನಲ್ಲಿ ಪರಿಗಣಿಸಲ್ಪಟ್ಟಿರಲಿಲ್ಲ. 2013–14ರಲ್ಲಿ ಪ್ರಥಮ ಸಲ ತಂಡವು ನಾಕೌಟ್ಗೆ ಪ್ರವೇಶಿಸಿತ್ತು. ಮೊಹಮ್ಮದ್ ಶಮಿ, ಮುಕೇಶ್ ಕುಮಾರ್, ಆಕಾಶ್ ದೀಪ್, ಅಭಿಮನ್ಯು ಈಶ್ವರನ್ ಹಾಗೂ ಶಹಬಾಜ್ ಅಹಮದ್ ಅವರಂತಹ ಅನುಭವಿಗಳು ಇದ್ದ ಬಂಗಾಳ ತಂಡವು ಆಘಾತ ಅನುಭವಿಸಿತು.ಫೈನಲ್ನಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡವು, ಲಖನೌನ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕರ್ನಾಟಕ ಹಾಗೂ ಉತ್ತರಾಖಂಡ ನಡುವಿನ ಪಂದ್ಯದಲ್ಲಿ ಗೆಲ್ಲುವ ತಂಡವನ್ನು ಎದುರಿಸಲಿದೆ.






